ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ 371(ಜೆ) ಕಲಂ ತಿದ್ದುಪಡಿಗೆ ದಶಮಾನೋತ್ಸವ: ಕಲ್ಯಾಣ ಕರ್ನಾಟಕ ಉತ್ಸವ ಇಂದು

Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕಲಬುರಗಿ: ಹೈದರಾಬಾದ್‌ ನಿಜಾಮನ ಆಡಳಿತದಿಂದ ಮುಕ್ತಿ ಪಡೆದ ದಿನದ ಸ್ಮರಣೆಗಾಗಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ 17ರಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ‘ಕಲ್ಯಾಣ ಕರ್ನಾಟಕ ಉತ್ಸವ’ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಧಾನ ಕಾರ್ಯಕ್ರಮ ಕಲಬುರಗಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ 9ಕ್ಕೆ ನಗರದ ಸಿಎಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕದ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಇದಕ್ಕೂ ಮುನ್ನ ಮಾಲಾರ್ಪಣೆ ಮಾಡಲಿದ್ದಾರೆ.

2019ಕ್ಕಿಂತ ಮುಂಚೆ ಸೆಪ್ಟೆಂಬರ್‌ 17ರಂದು ‘ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ’ವನ್ನಾಗಿ ಆಚರಿಸಲಾಗುತ್ತಿತ್ತು. ಆಗ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಎಂಬುದು ದಾಸ್ಯದ ಸಂಕೇತವಾಗಿದ್ದು, ಅದರ ಬದಲಾಗಿ ‘ಕಲ್ಯಾಣ ಕರ್ನಾಟಕ ಉತ್ಸವ’ವನ್ನಾಗಿ ಆಚರಿಸಲಾಗುವುದು ಎಂಬ ತೀರ್ಮಾನ ಕೈಗೊಂಡಿತು. ಹೀಗಾಗಿ, ನಾಲ್ಕು ವರ್ಷಗಳಿಂದ ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಈ ಭಾಗದಲ್ಲಿ ಆಚರಿಸಲಾಗುತ್ತಿದೆ.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸಂವಿಧಾನದ 371 (ಜೆ) ಕಲಂ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ನೀಡಿದೆ. ಆ ತಿದ್ದುಪಡಿಯನ್ವಯ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು (ಕೆಕೆಆರ್‌ಡಿಬಿ) ರಚಿಸುವ ಮೂಲಕ ಪ್ರತಿ ವರ್ಷ ಅನುದಾನ ನೀಡುತ್ತಿದೆ. ವಿಶೇಷ ಸ್ಥಾನಮಾನ ದೊರೆತು 10 ವರ್ಷಗಳಾಗಿದ್ದರಿಂದ ಈ ಬಾರಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಪಟೇಲರ ದಿಟ್ಟತನದ ‘ಆಪರೇಶನ್ ‍ಪೋಲೊ’

1947ರಲ್ಲಿ ಬಹುತೇಕ ಸಂಸ್ಥಾನಗಳು ಸ್ವತಂತ್ರ ಭಾರತದ ಭಾಗವಾಗಲು ಒಪ್ಪಿಕೊಂಡವು. ಆದರೆ ಅಂದಿನ ಹೈದರಾಬಾದ್ ಕರ್ನಾಟಕದ ಕಲಬುರಗಿ ಬೀದರ್ ರಾಯಚೂರು ಜಿಲ್ಲೆಗಳನ್ನು ಆಳುತ್ತಿದ್ದ ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಭಾಗವಾಗಲು ಸಿದ್ಧರಿರಲಿಲ್ಲ. ನಿಜಾಮನ ದುರಾಡಳಿತದಿಂದ ನಲುಗಿದ್ದ ಈ ಮೂರು ಜಿಲ್ಲೆಗಳ ಹೋರಾಟಗಾರರು ಅಂದಿನ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹೈದರಾಬಾದ್ ಸಂಸ್ಥಾನದಿಂದ ವಿಮುಕ್ತಿ ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪಟೇಲರು ಹೈದರಾಬಾದ್‌ ಸಂಸ್ಥಾನದ ಮೇಲೆ 1948ರ ಸೆಪ್ಟೆಂಬರ್‌ 13ರಂದು ಸೇನಾ ಕಾರ್ಯಾಚರಣೆ ಆರಂಭಿಸಿದರು. ಇದಕ್ಕೆ ‘ಆಪರೇಶನ್ ಪೋಲೊ’ ಎಂದು ಹೆಸರಿಡಲಾಗಿತ್ತು. ಐದು ದಿನಗಳ ಕಾರ್ಯಾಚರಣೆಯಿಂದ ಬೆದರಿದ ನಿಜಾಮ ಸೆಪ್ಟೆಂಬರ್‌ 17ರಂದು ಶರಣಾಗುವ ಮೂಲಕ ‘ಹೈದರಾಬಾದ್‌ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸುತ್ತೇವೆ’ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT