ಬುಧವಾರ, ಡಿಸೆಂಬರ್ 1, 2021
21 °C
ಕೃಷಿ ಸಚಿವ ಬಿ.ಸಿ. ಪಾಟೀಲ ಘೋಷಣೆ; 5 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯ ಸಂಗ್ರಹ ಸಾಮರ್ಥ್ಯ

ಕಲಬುರ್ಗಿಗೆ ₹ 7.5 ಕೋಟಿ ವೆಚ್ಚದಲ್ಲಿ ಶಿಥಲೀಕರಣ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರೈತರು ಬೆಳೆದ ಆಹಾರ ಧಾನ್ಯಗಳನ್ನು ರಕ್ಷಿಸಿಡಲು ಕಲಬುರ್ಗಿಯಲ್ಲಿ ಕೃಷಿ ಇಲಾಖೆ ವತಿಯಿಂದ ₹ 7.5 ಕೋಟಿ ವೆಚ್ಚದಲ್ಲಿ ಶಿಥಲೀಕರಣ ಘಟಕವನ್ನು ಮಂಜೂರು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರಕಟಿಸಿದರು.

ಇಲ್ಲಿನ ಆಳಂದ ರಸ್ತೆಯ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ವಿಭಾಗ ಮಟ್ಟದ ಕೃಷಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಥಲೀಕರಣ ಘಟಕದಲ್ಲಿ 5 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಬಹುದಾಗಿದೆ’ ಎಂದರು.

ಪರೀಕ್ಷಾ ಕೇಂದ್ರ: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಣ್ಣು ಪರೀಕ್ಷೆ ಕೇಂದ್ರ ಆರಂಭಿಸುವ ಚಿಂತನೆ ಇದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆ. ಮಣ್ಣು ಪರೀಕ್ಷೆ ಮಾಡಿ ಕೃಷಿ ಮಾಡುವುದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ. ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯ ಜತೆಯಲ್ಲಿ ಆಧುನಿಕ ಪದ್ಧತಿಗೂ ಆಸಕ್ತಿ ವಹಿಸಬೇಕು ಎಂದರು.

ಅದಲ್ಲದೆ, ಬೀಜ, ರಸಗೊಬ್ಬರ ಗುಣಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯ ಆರಂಭಿಸುವ ಬೇಡಿಕೆ ಇದ್ದು, ಕಲಬುರ್ಗಿಯಲ್ಲಿ ಆರಂಭಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಬಾರಿ ಹೆಸರು ಮತ್ತು ಉದ್ದು ಉತ್ತಮ ಇಳುವರಿ ಬಂದಿದೆ. ಕೂಡಲೇ ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು. ಇದಕ್ಕೆ ಕೇಂದ್ರದ ಒಪ್ಪಿಗೆ ಮತ್ತು ಪ್ರಸ್ತಾವ ಕಳಿಸುವ ಅಗತ್ಯವೇನೂ ಇಲ್ಲ ಎಂದು ಸಚಿವ ಪಾಟೀಲ ತಿಳಿಸಿದರು.

ಬೆಂಬಲ ಬೆಲೆ ನಿಗದಿ ಸಂಪುಟ ಉಪ ಸಮಿತಿ ಅಧ್ಯಕ್ಷ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ಮಾಡಿದ್ದಾರೆ. ಕೊರೊನಾ ಸಂಬಂಧ ಸರಿಯಾದ ಸಮಯಕ್ಕೆ ಖರೀದಿ ಮಾಡಲು ಆಗಿಲ್ಲ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಸಂಚಾರಿ ಪ್ರಯೋಗಾಲಯ: ‘ಲ್ಯಾಬ್ ಟು ಲ್ಯಾಂಡ್’ ಪರಿಕಲ್ಪನೆಯಡಿ ಬೆಳೆ ರೋಗ, ತೇವಾಂಶ, ಔಷಧಿ ಬಳಕೆ ಮತ್ತಿತರ ಕೆಲಸಗಳಿಗಾಗಿ ಸಂಚಾರಿ ಪ್ರಯೋಗಾಲಯನ್ನು ಈಗಾಗಲೇ ಕೊಪ್ಪಳದಲ್ಲಿ ಜಿಲ್ಲಾ ಖನಿಜ ನಿಧಿಯನ್ನು ಬಳಸಿಕೊಂಡು 20 ಪ್ರಯೋಗಾಲಯಗಳನ್ನು ಆರಂಭಿಸಲಾಗುತ್ತಿದೆ. ಅವುಗಳಲ್ಲಿ ಹಲವು ಉಪಕರಣಗಳನ್ನು ಅಳವಡಿಸಲಾಗುವುದು. ಇದರಿಂದ ರೈತರಿಗೆ ಎದುರಾಗುವ ತೊಂದರೆಗಳನ್ನು ಹೊಲದಲ್ಲಿಯೇ ಬಗೆ ಹರಿಸಲು ಯೋಜಿಸಲಾಗಿದೆ. ತಂತ್ರಜ್ಞರು, ಕೃಷಿ ಡಿಪ್ಲೊಮಾ ಪದವೀಧರರು ಸಂಚಾರಿ ಪ್ರಯೋಗಾಲಯದಲ್ಲಿ ಇರಲಿದ್ದಾರೆ. ಆ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿದರು.

ಬೆಳೆ ಇಳುವರಿ ಪ್ರಮಾಣ ನಿಗದಿ ಮಾಡುವ ವರದಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹೀಗಾಗಿ ಬೆಳೆ ವಿಮೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳೊಂದಿ ಸಭೆ ನಡೆಸಲಾಗುವುದು. ಈಗಿನ ಬೆಳೆವಿಮೆ ಪದ್ದತಿ ಕೈ ಬಿಟ್ಟು ಹವಾಮಾನ ಆಧಾರಿತ ಬೆಳೆವಿಮೆ ಜಾರಿಗೆ ತರುವ ಚಿಂತನೆ ಇದೆ ಎಂದು ತಿಳಿಸಿದರು.

ಬೆಳೆ ವಿಮೆ ಮಂಜೂರಾತಿಯಲ್ಲಿ ರೈತರಿಗೆ ಶೋಷಣೆಯಾಗುತ್ತಿದೆ. ಒಂದು ತಾಲ್ಲೂಕಿಗೆ ಪರಿಹಾರ ಬಂದರೆ ಪಕ್ಕದ ತಾಲ್ಲೂಕಿಗೆ ನಯಾ ಪೈಸೆ ಬರುವುದಿಲ್ಲ. ಈ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವೆ ಎಂದರು.

ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ, ಕೃಷಿ ಇಲಾಖೆ ಆಯುಕ್ತ, ಐಎಫ್‌ಎಸ್ ಅಧಿಕಾರಿ ಬ್ರಿಜೇಶಕುಮಾರ್ ಬಿ.ಕೆ., ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಇದ್ದರು.

 

‘ಬೇಳೆಕಾಳು ಅಭಿವೃದ್ಧಿ ಮಂಡಳಿಗೆ ನೂತನ ಕಟ್ಟಡ’

ನಗರದಲ್ಲಿರುವ ಬೇಳೆಕಾಳು ಅಭಿವೃದ್ಧಿ ಮಂಡಳಿಯನ್ನು ಶಕ್ತವಾಗಿಲು ಶೀಘ್ರವೇ ₹ 1.50 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಅಗತ್ಯ ಬಿದ್ದರೆ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ದೊಡ್ಡ ಕಟ್ಟಡ ನಿರ್ಮಿಸಲಾಗುವುದು. ಬಳಿಕ ಅಗತ್ಯ ಸಿಬ್ಬಂದಿ ನೇಮಕ ಮಾಡುವ ಮೂಲಕ ಈ ಭಾಗದಲ್ಲಿ ತೊಗರಿ ಸೇರಿದಂತೆ ಇತರೆ ಬೇಳೆಕಾಳು ಉದ್ಯಮಕ್ಕೆ ವೇಗ ನೀಡಲು ಪ್ರಯತ್ನಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.

ರೈತರ ಮಕ್ಕಳ ಸೀಟು ರದ್ದತಿ ಇಲ್ಲ

ಬಿಎಸ್ಸಿ ಕೃಷಿ, ಪಶು ಸಂಗೋಪನಾ, ತೋಟಗಾರಿಕೆ ಸೇರಿ ಇತರ ವೃತ್ತಿಪರ ಕೋರ್ಸುಗಳಲ್ಲಿ ರೈತರ ಮಕ್ಕಳಿಗೆ ಶೇ 40ರಷ್ಟು ಸೀಟುಗಳ ಮೀಸಲಾತಿಗೆ ಯಾವುದೇ ಧಕ್ಕೆ ಇಲ್ಲ. ಕೋವಿಡ್ ಸೋಂಕು ಇರುವುದರಿಂದ ಅವರಿಗೆ ಸಿಇಟಿ ನಡೆಸಲಿಲ್ಲ. ಮೆರಿಟ್ ಹಾಗೂ ರೈತರು ಮಕ್ಕಳು ಎಂಬ ಪ್ರಮಾಣಪತ್ರ ಹಾಜರುಪಡಿಸಿದರೆ ಅವರಿಗೆ ಸೀಟು ನೀಡಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು