ಶುಕ್ರವಾರ, ಮೇ 27, 2022
31 °C
ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು, ಯುವ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಪ್ರತಿಭಟನೆ

ಪ್ರತಾಪ ಸಿಂಹ ಬಹಿರಂಗ ಕ್ಷಮೆ ಯಾಚಿಸಲಿ; ಯುವ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮೈಸೂರು ಸಂಸದ ಪ್ರತಾಪ ಸಿಂಹ, ಶಾಸಕ ಪ್ರಿಯಾಂಕ್‌ ಖರ್ಗೆ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು ಹಾಗೂ ಯುವ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ಜಗತ್‌ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂಸದ ಪ್ರತಾಪ ಸಿಂಹ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ ವಿರುದ್ಧ ಘೋಷಣೆ ಕೂಗಲಾಯಿತು. ಜಗತ್‌ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು.

ಬಳಿಕ ಜಗತ್‌ ವೃತ್ತದಿಂದ ಎಸ್‌ವಿಪಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ‘ಸಿಂಹ ದುಷ್ಟ, ಪ್ರಿಯಾಂಕ್ ಖರ್ಗೆ ಇಷ್ಟ’ ಸೇರಿ ಹಲವು ಬರಹಗಳಿದ್ದ ಪ್ಲೇಕಾರ್ಡ್‌ ಪ್ರದರ್ಶಿಸಲಾಯಿತು.

ಪ್ರತಿಭಟನಾಕಾರರು ಎಸ್‌ವಿಪಿ ವೃತ್ತದಲ್ಲಿ ರಸ್ತೆ ತಡೆದು ಪ್ರತಾಪ ಸಿಂಹ ಅವರ ಪ್ರತಿಕೃತಿ ದಹಿಸಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪೊಲೀಸರ ವಿರೋಧ ಲೆಕ್ಕಿಸದೇ ಪ್ರತಿಕೃತಿ ದಹಿಸಲಾಯಿತು.

ಬಳಿಕ ‘ಪೊಲೀಸರು ಯುವ ಕಾಂಗ್ರೆಸ್ ಮುಖಂಡ ಶರಣು ಹೊನಗುಂಟಿ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಕ್ಷಮೆ ಕೇಳಬೇಕು’ ಎಂದು ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟು ಹಿಡಿದರು. ಗೂಂಡಾಗಿರಿ ನಿಲ್ಲಿಸಿ ಎಂದು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೊಲೀಸರೇ ಹಿರಿಯ ಮುಖಂಡರ ಮನವೊಲಿಸಿ ಅಲ್ಲಿಂದ ಕಳುಹಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ,‘ಸಂಸದರಾಗಿರುವ ಪ್ರತಾಪ ಸಿಂಹ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅವರ ಮಾತು ಸಂಸ್ಕಾರ ತಿಳಿಸುತ್ತದೆ. ಪ್ರಿಯಾಂಕ್‌, ಬಿಜೆಪಿಯವರ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದಾರೆ. ಅವರಿಗೆ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ಅವರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ಇದು ಸಲ್ಲ. ಎಲ್ಲರಿಗೂ ವೈಯಕ್ತಿಕ ದಾಳಿ ಮಾಡಲು ಬರುತ್ತದೆ ಎನ್ನುವುದನ್ನು ಅವರು ಮೊದಲು ಅರಿಯಲಿ. ಸಂಸ್ಕಾರ ಕಲಿಯಲಿ’ ಎಂದು ಹೇಳಿದರು.

‘ಪ್ರಿಯಾಂಕ್‌ ಖರ್ಗೆಯವರು ಅವರ ತಂದೆಯವರ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಹೇಳುವ ಬಿಜೆಪಿಗರು ತಾವು ಯಾರ ನೆರಳಿನಲ್ಲಿ ಬದುಕುತ್ತಿದ್ದಾರೆ. ಯಾರ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅವರಿಗೆ ಆ ಧೈರ್ಯ ಇದೆಯೇ ಎಂದು ಅವರು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿ,‘ಸಂಸದ ಪ್ರತಾಪ ಸಿಂಹ ಅವರು ಕಾಂಗ್ರೆಸ್ ನಾಯಕರ ಕುರಿತು ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಬಿಜೆಪಿ ಭ್ರಷ್ಟಾಚಾರ ಮಾಡಿರುವುದು ನಿಜ. ಆದ್ದರಿಂದಲೇ ಅವರು ಹೆದರಿಕೊಂಡು ಈ ರೀತಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರು ನೇರ ಚರ್ಚೆಗೆ ಬರಲಿ. ಅದು ಬಿಟ್ಟು ವೈಯಕ್ತಿಕವಾಗಿ ನಿಂದನೆ ಮಾಡುವುದು ಸರಿಯಲ್ಲ. ಅವರು ಬಹಿರಂಗವಾಗಿ ಕ್ಷಮೆ ಕೇಳುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ, ಮುಖಂಡರಾದ ಸುಭಾಷ ರಾಠೋಡ, ರಾಮು ಕಪನೂರು, ಲತಾ ರಾಠೋಡ, ರಾಜಶೇಖರ ಸೀರಿ, ದಿಲೀಪ್‌ ಪಾಟೀಲ, ಅಲ್ಲಂ ಪಾಟೀಲ, ಕಿರಣ ದೇಶಮುಖ, ಮಾಂತಪ್ಪ, ವಿಜಯಕುಮಾರ ಸೇರಿ ಹಲವು ಮುಖಂಡರು, ವಿವಿಧ ಗ್ರಾಮಗಳ ಕಾರ್ಯಕರ್ತರು ಹಾಗೂ ಪ್ರಿಯಾಂಕ್ ಖರ್ಗೆಯವರ ಅಭಿಮಾನಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು