ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಋಣ ತೀರಿಸುವ ಕೆಲಸ ಮಾಡಿ’

ಕಾಂಗ್ರೆಸ್‌ನಿಂದ ಗೆದ್ದ ಪಾಲಿಕೆ ಸದಸ್ಯರಿಗೆ ಶಾಸಕಿ ಖನೀಜ್‌ ಫಾತಿಮಾ ಕಿವಿಮಾತು
Last Updated 12 ಸೆಪ್ಟೆಂಬರ್ 2021, 14:23 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಲಬುರ್ಗಿ ಜನ ಕಾಂಗ್ರೆಸ್‌ ಪಕ್ಷಕ್ಕೆ ನೈತಿಕ ಬಲ ತಂದುಕೊಟ್ಟಿದ್ದಾರೆ. ಕಲಬುರ್ಗಿ ಈಗಲೂ ಕಾಂಗ್ರೆಸ್‌ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ’ ಎಂದು ಶಾಸಕಿ ಖನೀಜ್‌ ಫಾತಿಮಾ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ನ ಪಾಲಿಕೆ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಯುವ ಕಾರ್ಯಕರ್ತರ ಶ್ರಮದಿಂದಲೇ ಈ ಯಶಸ್ಸು ಸಿಕ್ಕಿದೆ. ಜನರು ಮತ ನೀಡಿ ಋಣ ಹೊರಿಸಿದ್ದಾರೆ. ಹೊಸ ಸದಸ್ಯರು ಪ್ರಾಮಾಣಿಕ ಸೇವೆ ಮಾಡಿ ಮತದಾರರ ಋಣ ತೀರಿಸಬೇಕು. ಈ ಬಾರಿ ಅರ್ಧದಷ್ಟು ಮಹಿಳೆಯರೂ ಇರುವುದರಿಂದ ಪಾಲಿಕೆಯಲ್ಲಿ ಅಭಿವೃದ್ಧಿ ಪರವಾದ ಶಕೆ ಆರಂಭವಾಗುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಬಿಜೆಪಿ ಅಭ್ಯರ್ಥಿಗಳು ಸಾಕಷ್ಟು ಹಣ ಸುರಿದರೂ ನಗರದ ಜನ ಕಾಂಗ್ರೆಸ್‌ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಈ ನಂಬಿಕೆಯನ್ನು ಸದಸ್ಯರು ಉಳಿಸಿಕೊಳ್ಳಬೇಕು. ಶರಣಬಸವೇಶ್ವರರು, ಖಾಜಾ ಬಂದಾ ನವಾಜ್‌ ಅವರು ಸಾಮಾಜಿಕ ಸಾಮರಸ್ಯದ ಬೀಜ ಬಿತ್ತಿದ ಈ ಊರಲ್ಲಿ ಜನರು ಜಾತಿ, ಧರ್ಮ ನೋಡದೇ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಸದಸ್ಯರು ಕೂಡ ಯಾವುದೇ ತಾರತಮ್ಯ ಇಲ್ಲದಂತೆ, ಸಾಮರಸ್ಯಕ್ಕೆ ಧಕ್ಕೆ ಬರದಂತೆ ದುಡಿಯಬೇಕು’‍ ಎಂದರು.

ಮುಖಂಡ ಬಿ.ಆರ್. ಪಾಟೀಲ ಮಾತನಾಡಿ, ‘ಇಎಸ್‌ಐ ಆಸ್ಪತ್ರೆ, ಜಿಮ್ಸ್‌, ಹೈಕೋರ್ಟ್‌ ಸೇರಿದಂತೆ ಹಲವು ಮೂಲಸೌಕರ್ಯ ಹಾಗೂ ಯೋಜನೆಗಳನ್ನು ಸಾಕಾರ ಮಾಡಿದ್ದು ಕಾಂಗ್ರೆಸ್‌ ನಾಯಕರು. ಆದರೆ, ಈಗಿನ ಬಿಜೆಪಿ ಮುಖಂಡರು ಇವುಗಳನ್ನೂ ತಮ್ಮದೇ ಸಾಧನೆ ಎಂದು ಹೇಳಿಕೊಳ್ಳುವಷ್ಟು ದಡ್ಡರಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾಗಿದ್ದ ಡಾ.ಶರಣಪ್ರಕಾಶ ಪಾಟೀಲ, ಪ್ರಿಯಾಂಕ್‌ ಖರ್ಗೆ, ದಿವಂಗತರಾದ ವೀರೇಂದ್ರ ಪಾಟೀಲ, ಧರ್ಮಸಿಂಗ್‌ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅದರ ಪ್ರತಿಫಲವನ್ನು ನಾವಿಂದು ಪಡೆಯುತ್ತಿದ್ದೇವೆ. ಬಿಜೆಪಿಯವರಿಗೆ ಹೇಳಿಕೊಳ್ಳುವುದಕ್ಕೆ ಇಂಥ ಒಂದು ಸಾಧನೆಯೂ ಇಲ್ಲ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಿಕಾ ಪರಮೇಶ್ವರ, ಲತಾ ರವಿ ರಾಠೋಡ, ಸುಭಾಷ ಗುತ್ತೇದಾರ, ಡಾ.ಭೀಮಾಶಂಕರ ಬಿಲಗುಂದಿ ಹಲವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT