ಮಂಗಳವಾರ, ಏಪ್ರಿಲ್ 13, 2021
23 °C
ತಪಾಸಣೆಗಾಗಿ ಹೆಚ್ಚುವರಿ ಮೂರು ಮೊಬೈಲ್ ತಂಡಗಳು; ವಾಟ್ಸ್ ಆ್ಯಪ್ ಗ್ರೂಪ್ ರಚನೆ

ಕಲಬುರ್ಗಿ: ಕೊರೊನಾ ತಪಾಸಣೆ ಪ್ರಮಾಣ 2 ಸಾವಿರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಸೋಂಕು ಪತ್ತೆ ಕಾರ್ಯವನ್ನೂ ಚುರುಕುಗೊಳಿಸಿದ್ದು, ಕೊರೊನಾ ತಪಾಸಣೆಯ ಪ್ರಮಾಣವನ್ನೂ ಹೆಚ್ಚಿಸಿದೆ.

ರಾಜ್ಯದಲ್ಲಿ ಬೆಂಗಳೂರು, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ನಿತ್ಯ ಕೊರೊನಾ ತಪಾಸಣೆ ಪ್ರಮಾಣವನ್ನು ಆರೋಗ್ಯ ಇಲಾಖೆ ನಿಗದಿಪಡಿಸಿದೆ. ಅದರಂತೆ ಕಲಬುರ್ಗಿಯಲ್ಲಿ ನಿತ್ಯ 1600 ಜನರಿಗೆ ಕೊರೊನಾ ತಪಾಸಣೆಯನ್ನು ಮಾಡಬೇಕು ಎಂದು ಕಡ್ಡಾಯಗೊಳಿಸಿದೆ. ನಗರದಲ್ಲೇ ಹೆಚ್ಚಾಗಿ ತಪಾಸಣಾ ಕಾರ್ಯವನ್ನು ಕೇಂದ್ರೀಕೃತಗೊಳಿಸಿರುವ ಆರೋಗ್ಯ ಇಲಾಖೆ ಕಳೆದ ವರ್ಷ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಹಾಗೂ ಹೆಚ್ಚು ಜನಸಂದಣಿ ಇರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಆರ್‌ಟಿ–ಪಿಸಿಆರ್‌ ತಪಾಸಣೆ ಮಾಡುತ್ತಿದೆ.

ತಪಾಸಣೆಗಾಗಿ ಮೂರು ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ. ಈ ತಂಡಗಳು ನಿತ್ಯ ಒಂದೊಂದು ಪ್ರದೇಶಗಳಿಗೆ ಭೇಟಿ ನೀಡಿ ಯಾವುದಾದರೂ ರೋಗ ಲಕ್ಷಣ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ರಾಜ್ಯ ಸರ್ಕಾರ 1600 ಜನರಿಗೆ ಟೆಸ್ಟ್ ಮಾಡುವ ಗುರಿಯನ್ನು ನೀಡಿದ್ದರೂ ನಾವು ನಿತ್ಯ ಎರಡು ಸಾವಿರಕ್ಕೂ ಅಧಿಕ ಟೆಸ್ಟ್‌ಗಳನ್ನು ಮಾಡುತ್ತಿದ್ದೇವೆ. ಕೋರಂಟಿ ಹನುಮಾನ್ ದೇವಸ್ಥಾನ, ತಾರಫೈಲ್‌ನಂತಹ ಪ್ರದೇಶಗಳನ್ನು ಕ್ಲಸ್ಟರ್ ಏರಿಯಾಗಳೆಂದು ಗುರುತಿಸಲಾಗಿದ್ದು, ಬೆಳಿಗ್ಗೆ 7ಕ್ಕೇ ಆರೋಗ್ಯ ಇಲಾಖೆಯ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿ ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸುತ್ತಾರೆ. ಇದೇ ಮಾದರಿಯಲ್ಲಿ ತಾಲ್ಲೂಕು ಕೇಂದ್ರಗಳಲ್ಲಿಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುತ್ತಿದೆ’ ಎಂದರು.

‘ಒಂದು ವಾರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೂ, ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಇದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್‌, ಐಸಿಯುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾಡಳಿತ ಆರ್‌ಟಿ–ಪಿಸಿಆರ್‌ ತಪಾಸಣೆಯನ್ನು ಮಾಡಲು ಉತ್ಸುಕವಾಗಿದ್ದರೂ ಕೊರೊನಾ ಲಕ್ಷಣ ಹೊಂದಿದವರು ಹಾಗೂ ಅವರ ಸಂಪರ್ಕಕ್ಕೆ ಬಂದವರು ಕೊರೊನಾ ತಪಾಸಣೆಗೆ ಒಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಸಂಚಾರಿ ವೈದ್ಯಕೀಯ ತಂಡದೊಂದಿಗೆ ಪೊಲೀಸರೂ ಇರಲಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಇರುವ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆ ದಿನ ಯಾವ ಪ್ರದೇಶಕ್ಕೆ ಹೋಗುತ್ತೇವೆ ಎಂಬುದರ ಮಾಹಿತಿ ಹಾಕುತ್ತಾರೆ. ಆ ತಂಡದೊಂದಿಗೆ ಪೊಲೀಸರು ಹಾಗೂ ಆ ವಾರ್ಡಿನ ಆರೋಗ್ಯ ನಿರೀಕ್ಷಕರು ಜೊತೆಗೂಡುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

ಕೊರೊನಾ ಸೋಂಕಿನಿಂದ ವೃದ್ಧ ಸಾವು

ಕಲಬುರ್ಗಿ: ನಗರದ ಶಹಾಬಜಾರ್ ಪ್ರದೇಶದ 83 ವರ್ಷದ ವೃದ್ಧ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ ಎಂದು ಮಂಗಳವಾರದ ಅರೋಗ್ಯ ಬುಲೆಟಿನ್ ಖಚಿತಪಡಿಸಿದೆ.

ತೀವ್ರ ವಿಷಮಶೀತ ಜ್ವರದ ಸಮಸ್ಯೆಯಿಂದ ವೃದ್ಧ ಮಾ.13 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು, ಮಾ.15ರಂದು ನಿಧನ ಹೊಂದಿರುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿನಿಂದ 332 ಜನ ನಿಧನರಾಗಿದ್ದಾರೆ.

ಮಂಗಳವಾರ 46 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 34 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು