ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಲಾಕ್‌ಡೌನ್‌: ಮೌನಕ್ಕೆ ಜಾರಿದ ಕಲಬುರ್ಗಿ ನಗರ

Last Updated 20 ಮೇ 2021, 5:42 IST
ಅಕ್ಷರ ಗಾತ್ರ

ಕಲಬುರ್ಗಿ: ಗುರುವಾರದಿಂದ ಜಾರಿಗೊಳಿಸಿದ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ. ವಾಹನ, ಜನ ಸಂಚಾರ ಇಲ್ಲದೇ ರಸ್ತೆಗಳು ಬಿಕೊ ಎನ್ನುತ್ತಿವೆ. ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದರಿಂದ ಜನ ಹೊರಗೆ ಬಾರದಾದರು.

ನಗರದ ಜನನಿಬಿಡ ಪ್ರದೇಶಗಳಾದ ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರ್ಕೆಟ್‌, ಬಸ್‌ ನಿಲ್ದಾಣ, ಶಹಾಬಜಾರ್‌, ಮುಸ್ಲಿಂ ಚೌಕ, ರಾಷ್ಟ್ರಪತಿ ಚೌಕ, ಎಪಿಎಂಸಿ ಮುಂತಾದ ಪ್ರದೇಶಗಳು ಗುರುವಾರ ಎಂದಿನಂತೆ ಇರಲಿಲ್ಲ. ಎಲ್ಲ ತರದ ಚಟುವಟಿಕೆಗಳಿಗೂ ತಡೆ ಹಾಕಿದ್ದರಿಂದ ಇಡೀ ನಗರ ಮೌನಕ್ಕೆ ಶರಣಾಯಿತು.

ಹಾಲು, ಔಷಧಿ ತರಲು ಕೆಲವರು ಕಾಲ್ನಡಿಗೆಯಲ್ಲಿ ಹೊರಗೆ ಬಂದಿದ್ದು ಬಿಟ್ಟರೆ ಬಹುಪಾಲು ಜನ ಮನೆಯಲ್ಲೇ ಉಳಿದರು. ಬೆಳಿಗ್ಗೆ 10 ಗಂಟೆ ನಂತರ ಅದಕ್ಕೂ ನಿರ್ಬಂಧ ಹೇರಲಾಯಿತು.

ಕಿರಾಣಿ ಅಂಗಡಿ, ತರಕಾರಿ ಮಾರಾಟ, ಮದ್ಯದಂಗಡಿ ಸೇರಿದಂತೆ ಎಲ್ಲವನ್ನೂ ಬಂದ್‌ ಮಾಡಲಾಗಿದೆ. ಹೋಟೆಲ್‌ಗಳಿಂದ ಪಾರ್ಸೆಲ್‌ ನೀಡಲು ಅವಕಾಶವಿದ್ದರೂ ಉಪಾಹಾರಕ್ಕೆ ಜನ ಸುಳಿಯಲಿಲ್ಲ. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ವಾಹನ ಸವಾರರಿಲ್ಲದೇ ಕೆಲಸಗಾರರು ಸುಮ್ಮನೇ ಕುಳಿತುಕೊಳ್ಳುವಂತಾಯಿತು.

ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾವಲು ನಿಂತಿದ್ದಾರೆ. ಹೊರಗಿನಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಲ್ಲ ರಸ್ತೆಗಳಲ್ಲೂ ಕಾವಲು ಬಿಗಿಗೊಳಿಸಲಾಗಿದೆ.

ಪೊಲೀಸ್‌ ವಾಹನದಲ್ಲೇ ಮಹಿಳೆ, ಮಕ್ಕಳನ್ನು ಮನೆ ತಲುಪಿಸಿದ ಎಎಸ್‌ಐ:ಮುಂಬೈನಿಂದ ರೈಲಿನ ಮೂಲಕ ಕಲಬುರ್ಗಿ ನಗರಕ್ಕೆ ಬಂದ ಮೂವರು ಮಹಿಳೆಯರು, ಇಬ್ಬರು ಪುರುಷರು ಆಟೊ ಸಂಚಾರವಿಲ್ಲದೇ ಇಲ್ಲಿನ ಎಸ್‌ವಿಪಿ ವೃತ್ತದಲ್ಲಿ ಕಾಯುತ್ತ ಕುಳಿತಿದ್ದರು. ಅವರೊಂದಿಗೆ ಮೂವರ ಪುಟಾಣಿ ಮಕ್ಕಳೂ ಇದ್ದರು.

ಇದನ್ನು ಕಂಡು ನಾಗರಿಕರೊಬ್ಬರು ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಠಾಣೆ ಎಎಸ್‌ಐ ಇನಾಮದಾರ್‌ ಅವರು ಪೊಲೀಸ್‌ ವಾಹನದಲ್ಲೇ ಮಹಿಳೆ, ಮಕ್ಕಳು ಹಾಗೂ ಪುರುಷರನ್ನು ಅವರ ಮನೆಗೆ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT