ಮಂಗಳವಾರ, ಜೂನ್ 15, 2021
26 °C

ಕಲಬುರ್ಗಿ: ತಾಲ್ಲೂಕು ಕೇಂದ್ರಗಳಲ್ಲೂ ಬಿಗಿಯಾದ ‘ಲಾಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬರ್ಗಿ: ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೂಡ ಸಂಪೂರ್ಣ ಲಾಕ್‌ಡೌನ್‌ಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮನೆಯಿಂದ ಹೊರಗೆ ಬರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ.

ಸೇಡಂ ವರದಿ: ಸೇಡಂ ‍ಪಟ್ಟಣದಲ್ಲಿ ಗುರುವಾರ ಅತ್ಯಂತ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ ಉಪವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್, ಸಿಪಿಐ ರಾಜಶೇಖರ ಹಳಗೋದಿ ಪಟ್ಟಣದ ವಿವಿದ ರಸ್ತೆಗಳಲ್ಲಿ ಸಂಚರಿಸಿ ಪರಿಶೀಲಿಸಿದರು.  ಬೆಳಿಗ್ಗೆ ಹಾಲು ಮತ್ತು ಪತ್ರಿಕೆ ಹಾಕುವವರನ್ನು ಹೊರತು ಪಡಿಸಿ ಯಾರೊಬ್ಬರು ರಸ್ತೆಯಲ್ಲಿ ಕಾಣಿಸಲಿಲ್ಲ. ತಾಲ್ಲೂಕು ಕ್ರೀಡಾಂಗಣದಲ್ಲಿ ವಾಯುವಿಹಾರ ಮಾಡುತ್ತಿದ್ದ ಜನರಿಗೆ ‘ಬೇಗ ಮುಗಿಸಿ ಮನೆಗೆ ತೆರಳಬೇಕು. ಮನೆಯಲ್ಲಿ ಸುರಕ್ಷಿತವಾಗಿರಿ’ ಎಂದು ಸಿಪಿಐ ರಾಜಶೇಖರ ಹಳಗೋದಿ ಎಚ್ಚರಿಸಿದರು. 

ಚಿಂಚೋಳಿ ವರದಿ: ಚಿಂಚೋಳಿ ತಾಲ್ಲೂಕಿನಲ್ಲಿ ಕೋವಿಡ್ ಹರಡದಂತೆ ಮಾಡಿದ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ಗುರುವಾರ ಬೆಳಿಗ್ಗೆಯಿಂದಲೇ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪುರಸಭೆ ವ್ಯಾಪ್ತಿಯ ಅವಳಿ ಪಟ್ಟಣಗಳಾದ ಚಿಂಚೋಳಿ ಹಾಗೂ ಚಂದಾಪುರದಲ್ಲಿ ಜನ ಹಾಗೂ ವಾಹನಗಳ ಸಂಚಾರಕ್ಕೆ ತಡೆ ಹಾಕಲಾಗಿದೆ. ಇದಕ್ಕಾಗಿ ಚಂದಾಪುರ ಪ್ರವೇಶದಲ್ಲಿ ಹಾಗೂ ಚಿಂಚೋಳಿ ಪ್ರವೇಶದಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನಗಳ ಸಂಚಾರ ನಿರ್ಭಂಧಿಸಿದ್ದಾರೆ. 

ಗ್ರಾಮೀಣ ಪ್ರದೇಸದಲ್ಲೂ ಕಟ್ಟೆಚ್ಚರ ವಹಿಸಿದ್ದರಿಂದ ಹಳ್ಳಿಗಳು ಲಾಕ್ ಆಗಿವೆ. ಸುಲೇಪೇಟ, ಚಿಮ್ಮನಚೋಡ, ಐನಾಪುರ,  ಐನೋಳ್ಳಿ, ದೇಗಲಮಡಿ, ಸಾಲೇಬೀರನಹಳ್ಳಿ, ನಿಡಗುಂದಾ, ಕುಂಚಾವರಂ, ಚಂದನಕೇರಾಗಳಲ್ಲೂ ಲಾಕಡೌನ ಪರಿಣಾಮ ಕಾಣಿಸಿತು. ಹಾಲಿನ ಅಂಗಡಿ ಮತ್ತು ಔಷಧ ಅಂಗಡಿ ಹಾಗೂ ಆಸ್ಪತ್ರೆಗೆ ಹೋಗುವವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಚಿಂಚೋಳಿ, ಚಂದಾಪುರ ಬ್ಯಾರಿಕೇಡ ಸ್ಥಳಗಳಿಗೆ ಹಾಗೂ ಮಿರಿಯಾಣ, ಕೊಳ್ಳೂರು ಚೆಕ್‌ಪೋಸ್ಟ್‌ಗಳಿಗೆ ಸರ್ಕಲ್ ಇನ್‌ಸ್ಪೆಕ್ಟರ್‌ ಮಹಾಂತೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಸಬ್ ಇನ್‌ಸ್ಪೆಕ್ಟರ್ ಎ.ಎಸ್. ಪಟೇಲ, ಸಂತೋಷ ರಾಠೋಡ, ವಾತ್ಸಲ್ಯ, ಉಪೇಂದ್ರ ಹಾಗೂ ಶಿವಶಂಕರ ಸುಬೇದಾರ ಮೊದಲಾದವರು ಗಸ್ತು ತಿರುಗಿದರು.‌

ಕಮಲಾಪುರ ವರದಿ:‌ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಘೋಷಿಸಿರುವ 3 ದಿನಗಳ ಬಂದನ ಮೊದಲ ದಿನವಾದ ಗುರುವಾರ ಪಟ್ಟಣ ಸ್ತಬ್ಧವಾಗಿತ್ತು. ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಮುಂಗಟ್ಟು ಬಂದ್ ಮಾಡಲಾಗಿದೆ. ಆಸ್ಪತ್ರೆ ತೆರೆದಿದ್ದರೂ ರೋಗಿಗಳಿಲ್ಲದೆ ಬಿಕೋ ಎನ್ನುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸುವ ಗೂಡ್ಸ್ ವಾಹನ ಸಂಚಾರದ ಸಪ್ಪಳ ಮಾತ್ರ ಕೇಳಿ ಬರುತ್ತಿದೆ. ಅನವಶ್ಯಕವಾಗಿ ಸಂಚರಿಸುವ ಕೆಲ ಬೈಕ್ ಸವಾರರಿಗೆ ಪೊಲೀಸರು ದಂಡ ವಿಧಿಸಿದರು.‌

ಜೇವರ್ಗಿ ವರದಿ: ಜೇವರ್ಗಿ ಪಟ್ಟಣದ ಮುಖ್ಯರಸ್ತೆ ಸೆರಿದಂತೆ ವಿವಿಧ ಬಡಾವಣೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಬೆಳಿಗ್ಗೆ ಹಾಲು ಮತ್ತು ಪತ್ರಿಕೆ ಹಾಕುವರನ್ನು ಹೊರತುಪಡಿಸಿ ಆಸ್ಪತ್ರೆಗಳು, ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಕಿರಾಣಿ ಅಂಗಡಿ ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.‌

ಸಿಪಿಐ ಶಿವಪ್ರಸಾದ, ಪಿಎಸ್ಐ ಸಂಗಮೇಶ ಅಂಗಡಿ ರಸ್ತೆಗಿಳಿದು ಸಾರ್ವಜನಿಕರು ಮನೆಯಿಂದ ಹೊರಬರದಂತೆ‌ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು