ಶನಿವಾರ, ಜನವರಿ 29, 2022
22 °C
ಪಾರ್ಸೆಲ್‌ನಿಂದ ಲಾಭ ಗಿಟ್ಟಿಸಿದ ಹೋಟೆಲ್‌ಗಳು, ಜುಮೆಟೊ ಆರ್ಡರ್‌ಗಳಿಗೆ ಹೆಚ್ಚಿದ ಬೇಡಿಕೆ

ಕಲಬುರಗಿ | ವಾರಾಂತ್ಯ ಕರ್ಫ್ಯೂ: ವ್ಯಾ‍ಪಾರ, ವಹಿವಾಟಿಗೆ ಮತ್ತೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ವಾರಾಂತ್ಯ ಕರ್ಫ್ಯೂ ಕಾರಣ ನಗರದ ಬಹುಪಾಲು ವಾಣಿಜ್ಯ ಚಟುವಟಿಕೆಗಳು ಭಾನುವಾರ ಕೂಡ ಸ್ತಬ್ಧಗೊಂಡವು. ಇದರಿಂದ ಹೋಟೆಲ್‌, ರೆಸ್ಟಾರೆಂಟ್‌, ತಳ್ಳುವ ಗಾಡಿಗಳು, ದಿನಸಿ ಅಂಗಡಿಗಳು, ಗೃಹೋಪಯೋಗಿ ವಸ್ತುಗಳ ಮಳಿಗೆ, ಬಟ್ಟೆ ವ್ಯಾಪಾರ, ಮಾಲ್‌ಗಳ ಆದಾಯಕ್ಕೂ ಕಡಿತ ಬಿದ್ದಿತು.

ಹೋಟೆಲ್‌ಗಳಿಂದ ಪಾರ್ಸೆಲ್‌ಗೆ ಅವಕಾಶ ನೀಡಿದ್ದರೂ ಶನಿವಾರ ಹಲವರು ಹಾನಿ ಅನುಭವಿಸಿದರು. ಇದರಿಂದ ಭಾನುವಾರ ಪ್ರಮುಖ ವೃತ್ತಗಳನ್ನು ಬಿಟ್ಟರೆ ಬಹುತೇಕ ಕಡೆಯ ಹೋಟೆಲ್‌ಗಳನ್ನು ಬಂದ್ ಮಾಡಲಾಗಿತ್ತು. ಕೆಲ ಮಾಂಸಾಹಾರಿ ಹೋಟೆಲ್‌ಗಳು ಮಾತ್ರ ಪಾರ್ಸೆಲ್‌ ನೀಡುತ್ತಿದ್ದವು. ಇದರಿಂದ ಹಲವರು ಮಾಂಸದ ಅಂಗಡಿಗಳನ್ನೇ ಅವಲಂಬಿಸ ಬೇಕಾಯಿತು. ವಾರಾಂತ್ಯ ದಲ್ಲಿ ಮಾಂಸಾಹಾರ ಸೇವಿಸುವ ರೂಢಿ ಇರುವ ಹಲವರು ಏಕಾಏಕಿ ಮಳಿಗೆಗೆ ಬಂದಿದ್ದರಿಂದ ಅಲ್ಲಿ ಜನದಟ್ಟಣೆ ಕೂಡ ಉಂಟಾಯಿತು.

‘ನಗರದಲ್ಲಿ ಪಾರ್ಸೆಲ್‌ ತೆಗೆದುಕೊಂಡು ಹೋಗುವವರು ಕಡಿಮೆ. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 8ರಿಂದ ಬೆಳಿಗ್ಗೆ 10ರವರೆಗೆ ಮಾತ್ರ ಕೆಲವೇ ಜನ ಉಪಾಹಾರ, ಚಹಾ ಖರೀದಿಸಿದ್ದಾರೆ. ನಿತ್ಯವೂ ಸರಾಸರಿ ₹ 12ರಿಂದ ₹ 15 ಸಾವಿರದಷ್ಟು ಮಸಾಲೆ, ಅಕ್ಕಿ, ತರಕಾರಿ, ಕಾಳುಗಳನ್ನು ಊಟ, ಉಪಾಹಾರಕ್ಕೆಂದು ಹಿಂದಿನ ದಿನ ರಾತ್ರಿಯೇ ತಯಾರಿಸಿಕೊಂಡಿರುತ್ತೇವೆ. ಬೆಳಿಗ್ಗೆ ಪಾರ್ಸೆಲ್‌ ಎಂದರೆ ಜನ ಬರುವುದಿಲ್ಲ. ಇದರಿಂದ ಸಾಕಷ್ಟು ಹಾನಿ ಅನುಭವಿಸಬೇಕಾಯಿತು’ ಎಂದು ಹೊಸ ಜೇವರ್ಗಿ ರಸ್ತೆಯ ಹೋಟೆಲ್‌ ವ್ಯಾಪಾರಿಗಳು ಪ್ರತಿಕ್ರಿಯಿಸಿದರು.

‘ಪ್ರತಿ ದಿನ ಕನಿಷ್ಠ ₹ 30 ಸಾವಿರದ ವ್ಯಾಪಾರ ಮಾಡುತ್ತಿದ್ದೆವು. ಶೇ 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಿದಾಗ ಜನರು ತಾವಾಗೇ ಬರುವುದನ್ನು ಬಿಟ್ಟರು. ಆ ಹಾನಿಯನ್ನು ಹೇಗೋ ಸರಿದೂಗಿಸುತ್ತಿದ್ದೆವು. ಆದರೆ, ಸರ್ಕಾರ ಎರಡೇ ದಿನದಲ್ಲಿ ಆದೇಶ ಬದಲಾಯಿಸಿ, ವಾರಾಂತ್ಯ ಕರ್ಫ್ಯೂ ಹೇರಿತು. ಎರಡು ಅಥವಾ ಮೂರು ವಾರಕ್ಕೆ ಸಾಲುವಷ್ಟು ಆಹಾರ ಸಾಮಗ್ರಿಗಳನ್ನು, ಮೂರು ದಿನಕ್ಕೆ ಬೇಕಾಗುವಷ್ಟು ತರಕಾರಿ, ಹಾಲು, ದಿನಸಿಗಳನ್ನು ಖರೀದಿಸಿದ್ದೇವೆ. ವ್ಯಾಪಾರ ಇಲ್ಲದಿದ್ದರೆ ಅದೆಲ್ಲವೂ ಕೆಟ್ಟುಹೋಗುತ್ತದೆ’ ಎನ್ನುವುದು ಹೋಟೆಲ್‌ ವ್ಯಾಪಾರಿ ಪದ್ಮಾವತಿ ಜೈನ್‌ ಅವರ ದೂರು.

ಇನ್ನೊಂದೆಡೆ ವಿವಿಧ ವೃತ್ತಗಳಲ್ಲಿ, ಎಪಿಎಂಸಿ, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಡೆಯುತ್ತಿದ್ದ ಚಹಾ ಅಂಗಡಿ, ಫಾಸ್ಟ್‌ಫುಡ್‌ ಅಂಗಡಿಗಳವರೂ ದುಡಿಮೆ ಬಿಟ್ಟು ಮನೆಯಲ್ಲಿ ಕೂಡಬೇಕಾಯಿತು.

‘ವಾರಾಂತ್ಯದ ದಿನಗಳಲ್ಲೇ ಬೀದಿಬದಿಯಲ್ಲಿ ಪಾನಿಪೂರಿ, ಮಿರ್ಚಿ ಭಜ್ಜಿ, ವಡೆ, ಸೂಸಲಾ, ಚಹಾ ಮಾರುವುದೇ ನಮ್ಮ ಹೊಟ್ಟೆಪಾಡು. ನಿತ್ಯ ಸಾವಿರ ರೂಪಾಯಿ ಗಳಿಕೆ ಆಗುತ್ತಿತ್ತು’ ಎಂಬುದು ಕಮಲಾಕರ ಅವರ ಹೇಳಿಕೆ.

ಉಳಿದಂತೆ, ಎಲ್ಲ ಮಾಲ್‌ಗಳು, ಬಟ್ಟೆ– ಪಾತ್ರೆ ಅಂಗಡಿಗಳು, ದಿನಸಿ ಮಳಿಗೆಗಳು ಕೂಡ ಬಂದ್‌ ಆಗಿದ್ದವು.

‘ಈ ಹಿಂದಿನ ಲಾಕ್‌ಡೌನ್‌ನಲ್ಲಿ ಅನುಭವಿಸಿದ ನಷ್ಟವನ್ನೂ ಈಗಲೂ ಭರಿಸಬೇಕಾಗಿದೆ. ಮತ್ತೆ ಕರ್ಫ್ಯೂ ಹೇರಿದ್ದು ನುಂಗಲಾರದ ತುತ್ತಾಗಿದೆ. ಹೋಟೆಲ್‌ಗಳ ಮಾದರಿಯಲ್ಲೇ ಇತರ ಅವಶ್ಯಕ ವಸ್ತುಗಳ ವ್ಯಾಪಾರಕ್ಕೂ ಅವಕಾಶ ನೀಡಬೇಕು. ಅಂತರ ಕಾಪಾಡಿಕೊಂಡು ಚಟುವಟಿಕೆ ನಡೆಸಲು ಸಾಧ್ಯವಿದೆ’ ಎಂಬುದು ಸೂಪರ್ ಮಾರ್ಕೆಟ್‌ ವರ್ತಕರಾದ ಸುನೀಲ್‌ ಪಾಲ್‌, ಅಮಿತ್‌ ಕುಲಕರ್ಣಿ, ಎಚ್.ಆರ್‌. ರಾವೂರ್‌ ಅವರ ಅನಿಸಿಕೆ.

ರೈಲು ನಿಲ್ದಾಣದಲ್ಲಿ ಜನಜಂಗುಳಿ
ಜನಸಂಚಾರ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಹೇರಿದ್ದರಿಂದ ಬೆಂಗಳೂರು, ಹೈದರಾಬಾದ್‌, ಸೊಲ್ಲಾಪುರ ಮುಂತಾದ ನಗರಗಳಿಂದ ಕಲಬುರಗಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ವಾಹನಗಳಲ್ಲಿ ಬರುವವರ ತಪಾಸಣೆಗಾಗಿ ಗಡಿಗಳಲ್ಲಿ 9 ಚೆಕ್‌ಪೋಸ್ಟ್‌ ಸಿದ್ಧಪಡಿಸಲಾಗಿದೆ. ಆದರೆ, ಬಸ್‌ ಹಾಗೂ ರೈಲುಗಳ ಮೂಲಕ ಸಾವಿರಾರು ಜನ ಬರುತ್ತಿದ್ದಾರೆ. ಅವರ ತಪಾಸಣೆಗೆ ಯಾವುದೇ ರೀತಿಯ ಕ್ರಮ ವಹಿಸಿಲ್ಲ.

‌ಭಾನುವಾರ ಬೆಳಿಗ್ಗೆ ಬೆಂಗಳೂರು ಹಾಗೂ ಸೊಲ್ಲಾಪುರಗಳಿಂದ ಬಂದ ರೈಲುಗಳಿಂದಾಗಿ ಅಪಾರ ಸಂಖ್ಯೆಯ ಪ್ರಯಾಣಿಕರು ಕಿಕ್ಕಿರಿದು ಸೇರಿದರು. ಕನಿಷ್ಠ ಅಂತರ ಕೂಡ ಕಾಪಾಡಲಾಗಲಿಲ್ಲ.

ಎರಡನೇ ದಿನವೂ ಸಂಚಾರ ವಿರಳ
ವಾರಾಂತ್ಯ ಕರ್ಫ್ಯೂನ ಎರಡನೇ ದಿನವಾದ ಭಾನುವಾರ ಕೂಡ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ಅಲ್ಲಲ್ಲಿ ಹಣ್ಣು, ತರಕಾರಿ, ಹೂ ಮಾರಾಟ ಮಾಡುತ್ತಿರುವುದು ಕಂಡುಬಂತು. ತಳ್ಳುವ ಗಾಡಿಗಳಲ್ಲಿ ಚಹಾ‍–ಪಾನಿ ವ್ಯಾಪಾರ ಮಾಡುವವರು, ಹೋಟೆಲ್‌ಗಳು, ಬೇಕರಿಗಳು ಕೂಡ ತೆರೆದುಕೊಂಡಿದ್ದವು. ಆದರೆ, ಗ್ರಾಹಕರೇ ಇಲ್ಲದ್ದರಿಂದ ಮಧ್ಯಾಹ್ನದ ವೇಳೆ ಎಲ್ಲವನ್ನೂ ಬಂದ್‌ ಮಾಡಿದರು.

ಹೆಚ್ಚಿನ ಪ್ರಯಾಣಿಕರು ಇಲ್ಲದ ಕಾರಣ, ಕೇಂದ್ರ ಬಸ್ ನಿಲ್ದಾಣದಿಂದ ವಿವಿಧ ಹಳ್ಳಿಗಳಿಗೆ ಹೋಗುವ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ಹೊರ ಜಿಲ್ಲೆಗಳಿಗೆ ಹೋಗಬೇಕಾದವರು, ಹಳ್ಳಿಗಳಿಗೆ ಹೋಗಬೇಕಾದ ಕೆಲವರು ತಾಸುಗಟ್ಟಲೇ ಕಾದು ಕುಳಿತುಕೊಳ್ಳಬೇಕಾಯಿತು. ನಗರ ಸಾರಿಗೆ ಬಸ್‌ಗಳು ಕೂಡ ಬೆರಳೆಣಿಯಷ್ಟೇ ಸಂಚರಿಸಿದವು.

ಕಟ್ಟಡ ಕಾಮಗಾರಿಗೆ ಅವಕಾಶ ನೀಡಿದ್ದರಿಂದ ನಗರದ ಹಲವು ಕಡೆ ನಿರ್ಮಾಣ ಕಾರ್ಯಗಳು ನಡೆದವು. ಎಪಿಎಂಸಿಯಲ್ಲಿ ಕೂಡ ಕಾರ್ಮಿಕರ ಎಂದಿನಂತೆ ಕೆಲಸದಲ್ಲಿ ನಿರತರಾದರು.

ಯಾವಾಗಲೂ ವಾಹನಗಳ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಖರ್ಗೆ ವೃತ್ತ, ಲಾಳಗೇರಿ ಕ್ರಾಸ್, ಹೊಸ ಜೇವರ್ಗಿ ರಸ್ತೆ, ಹಳೆ ಜೇವರ್ಗಿ ರಸ್ತೆ, ಮುಸ್ಲಿಂ ಚೌಕ, ಆಳಂದ ನಾಕಾ, ವಾಲ್ಮೀಕಿ ವೃತ್ತ (ರಾಮಮಂದಿರ ವೃತ್ತ), ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ರಾಷ್ಟ್ರಪತಿ ಚೌಕ, ನೆಹರೂ ಗಂಜ್, ಸೇಡಂ ರಸ್ತೆ, ಆಳಂದ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೂಡ ವಾಹನಗಳ ಸಂಚಾರ ಕಡಿಮೆ ಇತ್ತು.

ಸೈನಿಕ ಶಾಲೆ ಪರೀಕ್ಷೆ: ಹೆಚ್ಚಿದ ಜನಜಂಗುಳಿ
ಸೈನಿಕ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆ ಭಾನುವಾರ (ಜ. 9) ನಿಗದಿಯಾಗಿತ್ತು. ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದರೂ ಈ ಪರೀಕ್ಷೆ ಮುಂದೂಡಲಿಲ್ಲ. ಇದರಿಂದಾಗಿ ನಗರದ ವಿವಿಧ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಅಪಾರ ಸಂಖ್ಯೆಯ ಮಕ್ಕಳು ಹಾಜರಾದರು.

ಪರೀಕ್ಷಾ ಕೇಂದ್ರಗಳ ಸುತ್ತ ಮಕ್ಕಳ ಪಾಲಕರು ಕೂಡ ಸೇರಿದ್ದರು. ಮಾಸ್ಕ್‌ ಇಲ್ಲದೇ, ಅಂತರ ಕಾಪಾಡಿಕೊಳ್ಳದೇ ಇದ್ದುದು ಗೋಚರಿಸಿತು. ಕಲ್ಯಾಣ ಕರ್ನಾಟಕವೂ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಿಂದ ಮಕ್ಕಳು ಈ ಪರೀಕ್ಷೆಗೆ ಬಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.