ಗುರುವಾರ , ಫೆಬ್ರವರಿ 25, 2021
19 °C
8 ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ, ನಗರದಲ್ಲಿ ವಿಶೇಷ ಕಂಟ್ರೋಲ್‌ ರೂಂ ಸ್ಥಾಪನೆ, ತುರ್ತು ಚಿಕಿತ್ಸೆಗೂ ಸಿದ್ಧತೆ

ಕಲಬುರ್ಗಿ ಜಿಲ್ಲೆಯ ಸೇನಾನಿಗಳಿಗೆ ಇಂದು ಲಸಿಕೆ ನೀಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜ. 16ರಂದು ಬೆಳಿಗ್ಗೆ 11 ರಿಂದ ಸಾಯಂಕಾಲ 5 ಗಂಟೆಯವರೆಗೆ ಜಿಲ್ಲೆಯ ಎಂಟು ಆರೋಗ್ಯ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ, ಆರೋಗ್ಯ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಲು ಸಿದ್ಧತೆ ಪೂರ್ಣಗೊಂಡಿವೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶನದಂತೆಯೇ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯ, ಅಫಜಲಪುರದ ಸರ್ಕಾರಿ ಆಸ್ಪತ್ರೆ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿಯ ತಾಲ್ಲೂಕು ಆಸ್ಪತ್ರೆಗಳು ಹಾಗೂ ಹಾಗೂ ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿ ಲಸಿಕಾ ಕೇಂದ್ರದಲ್ಲಿ ಕನಿಷ್ಠ 100 ಜನ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ನಂತರ ಹಂತ– ಹಂತವಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ ಲಸಿಕೆ ನೀಡುವುದನ್ನು ಮುಂದುವರೆಸಲಾಗುತ್ತದೆ. ಕೋವಿಡ್-19 ಲಸಿಕೆ ವಿತರಣೆಯ ನಿರ್ವಹಣೆಗಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.

ಲಸಿಕೆ ನೀಡುವುದರಿಂದ ಯಾವುದೇ ಅಡ್ಡ ಪರಿಣಾಮ ಸಂಭವಿಸಿದ್ದಲ್ಲಿ ಇದರ ನಿರ್ವಹಣೆಗಾಗಿ ಪ್ರತಿ ಲಸಿಕಾ ವಿತರಣಾ ಕೇಂದ್ರದಲ್ಲಿ ತಜ್ಞವೈದ್ಯರನ್ನು ಒಳಗೊಂಡ ನಿರ್ವಹಣಾ ಘಟಕಗಳನ್ನು ರಚಿಸಲಾಗಿದೆ.

12,000 ಡೋಸ್‌: ಜಿಲ್ಲೆಗೆ ಗುರುವಾರವೇ 12,000 ಡೋಸ್‌ ಕೋವಿಶೀಲ್ಡ್‌ ಲಸಿಕೆಗಳು ಬಂದಿದ್ದು, ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ವಿಶೇಷವಾಗಿ ಸಿದ್ಧಪಡಿಸಿರುವ ‘ಕೋಲ್ಡ್ ರೂಮ್’ನಲ್ಲಿ ದಾಸ್ತಾನು ಮಾಡಲಾಗಿದೆ. ಕೊರೊನಾ ವಿರುದ್ಧದ ಮುಂಚೂಣಿ ಹೋರಾಟಗಾರರಾದ ಸರ್ಕಾರಿ ಮತ್ತು ಖಾಸಗಿ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ದಾದಿಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿನ ಔಷಧಾಲಯಗಳ ಸಿಬ್ಬಂದಿ (ಫಾರ್ಮಸಿಸ್ಟ್), ಡಾಟಾ ಎಂಟ್ರಿ ಆಪರೇಟರ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 21,774 ಸೇನಾನಿಗಳನ್ನು ಈಗಾಗಲೇ ಗುರುತಿಸಲಾಗಿದೆ.

ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 137 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ಹಾಕಲಾಗುವುದು. ಎರಡನೇ ಹಂತದಲ್ಲಿ ಇನ್ನೂ 12 ಸಾವಿರ ಡೋಸ್ ಬರಲಿವೆ. ಜ.18ರಿಂದ ಇನ್ನುಳಿದ ಸಂಸ್ಥೆಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಲಾಗುತ್ತದೆ ಎಂದು ಡಿಎಚ್‌ಒ ಡಾ.ರಾಜಶೇಖರ ಮಾಲಿ ಮಾಹಿತಿ ನೀಡಿದ್ದಾರೆ.

ಅಡ್ಡಪರಿಣಾಮದ ಪರಿಶೀಲನೆ: ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ. ಆದರೂ ಉಳಿದ ಲಸಿಕೆಗಳಂತೆಯೇ ಇದಕ್ಕೂ ಸಣ್ಣ ಪ್ರಮಾಣದ ಜ್ವರ, ತಲೆನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ ಲಸಿಕೆ ನೀಡಿದ ಅರ್ಧ ತಾಸು ಫಲಾನುಭವಿಯನ್ನು ಆರೋಗ್ಯ ಕೇಂದ್ರದ ಪರಿಶೀಲನಾ ಕೋಠಡಿಯಲ್ಲೇ ವಿಶ್ರಾಂತಿ ನೀಡಲಾಗುತ್ತದೆ. ನಂತರ ಮನೆಗೆ ಕಳಿಸಲಾಗುತ್ತದೆ. ಒಂದು ವೇಳೆ ಅಡ್ಡಪರಿಣಾಮ ಉಂಟಾದರೂ ತುರ್ತು ಚಿಕಿತ್ಸೆ ನೀಡಲು ಆಯಾ ತಾಲ್ಲೂಕು ಆಸ್ಪತ್ರೆ ಹಾಗೂ ಜಿಮ್ಸ್‌ನಲ್ಲಿ ಕೋಠಡಿ ಮೀಸಲಿಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು