ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜದಲ್ಲಿ ಜಾತೀಯತೆ ಜೀವಂತ: ದೇಶಿಕೇಂದ್ರ ಸ್ವಾಮೀಜಿ

ಎರಡು ದಿನಗಳ ಕಲಬುರಗಿ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಸಂಪನ್ನ
Published : 19 ಆಗಸ್ಟ್ 2024, 3:15 IST
Last Updated : 19 ಆಗಸ್ಟ್ 2024, 3:15 IST
ಫಾಲೋ ಮಾಡಿ
Comments

ಕಲಬುರಗಿ(ಡಾ.ಶಿವರಾಮ ಮೋಘಾ ವೇದಿಕೆ): ‘ಸಮಾಜದಲ್ಲಿ ಜಾತೀಯತೆ ಇನ್ನೂ ಹೋಗಿಲ್ಲ. ಇಂದಿಗೂ ಗೌಡರು, ದೇಶಮುಖರು, ದೇಶಪಾಂಡೆಗಳಂಥ ಕೆಲವರು ಅಂತರ ಕಾಯ್ದುಕೊಳ್ಳುತ್ತಾರೆ. ಜಾತೀಯತೆ ವಿರುದ್ಧ ಬುಲ್ಡೋಜರ್‌ ಆಗಿ ಬುದ್ಧ ಬಂದ, ಬಸವಣ್ಣ ಬಂದ, ಬಾಬಾಸಾಹೇಬ್‌ ಅಂಬೇಡ್ಕರ್‌ರ ಸಂವಿಧಾನವೂ ಬಂತು. ಆದರೆ, ಈತನಕ ಜಾತೀಯತೆ ಹೋಗಿಲ್ಲ’ ಎಂದು ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕಸಾಪ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜಾತೀಯತೆ ಹೋಗಬೇಕಾದರೆ, ಪರಿಶಿಷ್ಟರ, ಹಿಂದುಳಿದವರ ಮಕ್ಕಳು ವಿದ್ಯಾಂತರಾಬೇಕು. ಸಾಲವಾಗಲಿ, ಮನೆ ಹೋಗಲಿ, ಹೊಲ ಹೋಗಲಿ ಚಿಂತೆಯಿಲ್ಲ. ಆದರೆ, ಮಕ್ಕಳು ವಿದ್ಯಾವಂತರಾಗಬೇಕು’ ಎಂದು ಪ್ರತಿಪಾದಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದವು. ರಾಜ್ಯಕ್ಕೆ ಈತನಕ ಒಬ್ಬರೂ ದಲಿತ ಮುಖ್ಯಮಂತ್ರಿ ಆಗದಿರುವುದು ನಮ್ಮ ದುರ್ದೈವ. ಡಿ.ಜಿ.ಸಾಗರನಂಥವರು ಈತನಕ ಸಚಿವರಾಗಬೇಕಿತ್ತು. ಆದರೆ, ಈತನಕ ಎಂಎಲ್‌ಎ, ಎಂಎಲ್‌ಸಿಯೂ ಆಗಲಿಲ್ಲ. ಅವರಿಗೆ ರಾಜಕೀಯ ಅಧಿಕಾರ ಸಿಗಲಿ’ ಎಂದು ಆಶಿಸಿದರು.

ಸಮಾರೋಪ ನುಡಿಗಳನ್ನಾಡಿದ ಸಾಹಿತಿ ಹನುಮಂತರಾವ ದೊಡ್ಡಮನಿ, ‘ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಎಂದು ಎಲ್ಲಿಯತನಕ ಹೇಳುತ್ತ ಹೋಗಬೇಕು? ಅದನ್ನು ಬಿಟ್ಟು, ನಾವು ಬೌದ್ಧರನ್ನು ಅರ್ಥೈಸಿಕೊಳ್ಳುವ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದರು.

‘ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ನಮಗೆ ದಿಕ್ಸೂಚಿ ಆಗಬೇಕು. ನಮ್ಮ ನೆಲದ ಮಣ್ಣಿನ ವಾಸನೆ ತೋರಿಸಬೇಕಾದ ವೇದಿಕೆ. ಆದರೆ, ಕೆಲವರು ಈ ಭಾಗದ ಚಳವಳಿ, ಸಾಹಿತ್ಯ, ಸಾಹಿತಿಗಳ ಬಗ್ಗೆ ಪ್ರಸ್ತಾಪಿಸಲಿಲ್ಲ’ ಎಂದು ಆಕ್ಷೇಪಿಸಿದರು.

ಬೀದರ್‌ನ ಅಣದೂರ ಬುದ್ಧವಿಹಾರದ ವರಜ್ಯೋತಿ ಥೇರೋ ಮಾತನಾಡಿದರು. ಕಲಬುರಗಿ ಬುದ್ಧವಿಹಾರದ ಸಂಗಾನಂದ ಬಂತೇಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ವಿಷ್ಣುವರ್ಧನ ವೇದಿಕೆಯಲ್ಲಿದ್ದರು.

ಚಳವಳಿ ಇಲ್ಲದಿದ್ದರೆ ದಲಿತ ಸಾಹಿತ್ಯವೇ ಹುಟ್ಟುತ್ತಿರಲಿಲ್ಲ. ಹೀಗಾಗಿ ಮೊದಲಿಗೆ ಚಳವಳಿಗಾರರು ಸ್ಮರಣೆಗೆ ಅರ್ಹರು. ಬಳಿಕ ದಲಿತ ಲೇಖಕರು ಸಾಹಿತಿಗಳನ್ನು ನೆನಪಿಸಿಕೊಳ್ಳಬೇಕು
ಅಪ್ಪಗೆರೆ ಸೋಮಶೇಖರ, ಸಿಯುಕೆ ಪ್ರಾಧ್ಯಾಪಕ

‘ಸಂವಿಧಾನ ರಕ್ಷಣೆಗೆ ಪ್ರಯತ್ನ ಅಗತ್ಯ’

‘ದೇಶದಲ್ಲಿ ಪ್ರಧಾನಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಸಂವಿಧಾನ ಉಳಿಯುತ್ತದೆ. ಅದು ಸಮಾನತೆಯ ಬದುಕು ಸ್ವಾತಂತ್ಯ ಹಕ್ಕುಗಳನ್ನು ಕೊಡುತ್ತದೆ. ಹೀಗಾಗಿ ಸಂವಿಧಾನ ಉಳಿಸಿಕೊಳ್ಳಲು ನಾವೆಲ್ಲರೂ ಬಹಳಷ್ಟು ಪ್ರಯತ್ನ ಮಾಡಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಿ.ಜಿ.ಸಾಗರ ಅಭಿಪ್ರಾಯಪಟ್ಟರು. ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಜಾತಿ ನಿಂತ ನೀರು. ಆದರೆ ಬಡತನ ಶಾಶ್ವತವಲ್ಲ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಅದರಿಂದ ಅಭಿವೃದ್ಧಿ ಸಾಧ್ಯ’ ಎಂದರು. ‘ಒಳಮೀಸಲಾತಿ ಜಾರಿಗೆ ಬರಬೇಕು. ಅದು ವೈಜ್ಞಾನಿಕವಾಗಿ ಇರಬೇಕು. 2011ರ ಜನಗಣತಿ ಆಧಾರದಲ್ಲೇ ಜಾರಿಗೊಳಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಮ್ಮೇಳನದ ನಿರ್ಣಯಗಳು

  • ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಸಮ್ಮೇಳನದ ನಿರ್ಣಯಗಳನ್ನು ಓದಿದರು.

  • ಕೆಕೆಆರ್‌ಡಿಬಿಯಿಂದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡಬೇಕು.

  • ಜಿಲ್ಲೆಯ ಪ್ರಧಾನ ಬೆಳೆಯಾದ ತೊಗರಿಗೆ ಬೆಂಬಲ ಬೆಲೆ ಒದಗಿಸುವುದು

  • ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತ ಚಳವಳಿ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕು.

  • ಕನ್ನಡ ಮಾಧ್ಯಮದಲ್ಲಿ ಓದಿದ ಯುವಕರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳಲ್ಲಿ ಸೂಕ್ತ ಮೀಸಲಾತಿ ನೀಡುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT