ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡೋತಿ ಸೇತುವೆ ಮುಳುಗಡೆ

Last Updated 18 ಸೆಪ್ಟೆಂಬರ್ 2020, 3:19 IST
ಅಕ್ಷರ ಗಾತ್ರ

ಚಿತ್ತಾಪುರ: ಧಾರಾಕಾರ ಮಳೆ ಹಾಗೂ ಜಿಲ್ಲೆಯ ವಿವಿಧ ಜಲಾಶಯಗಳಿಂದ ಬಿಟ್ಟ ನೀರಿನಿಂದ ಕಾಗಿಣಾ ನದಿಯು ತುಂಬಿ ಹರಿಯುತ್ತಿದೆ. ತಾಲ್ಲೂಕಿನ ದಂಡೋತಿ ಸೇತುವೆ ನೀರಲ್ಲಿ ಮುಳುಗಡೆಯಾಗಿದೆ.

ಮಂಗಳವಾರ ರಾತ್ರಿ ಸೇತುವೆ ಮುಳುಗಿ ದಂಡೋತಿ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಬುಧವಾರ ಮಧ್ಯಾಹ್ನ ಪ್ರವಾಹ ಇಳಿಮುಖವಾಗಿ ರಾತ್ರಿ ಸೇತುವೆ ಸಂಚಾರ ಮುಕ್ತವಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗುರುವಾರ ನಸುಕಿನ ಜಾವ ಮತ್ತೆ ಪ್ರವಾಹ ಹೆಚ್ಚಾಗಿ ಸೇತುವೆ ಮೇಲೆ ಆರಡಿ ನೀರು ಹರಿಯುತ್ತಿದೆ.

ದಂಡೋತಿ ಸೇತುವೆ ಮಾರ್ಗವಾಗಿ ದಿನಾಲೂ ಸೇಡಂ, ಕಾಳಗಿ ಮತ್ತು ಕಲಬುರ್ಗಿಗೆ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಸಂಚಾರದ ಮಾರ್ಗ ಬದಲಾಯಿಸಲಾಗಿದೆ. ಚಿತ್ತಾಪುರ ಕೇಂದ್ರಸ್ಥಾನದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಅಧಿಕಾರಿ ನೌಕರರು ಶಹಾಬಾದ್ ಮೂಲಕ ಬಂದು ಹೋಗುತ್ತಿದ್ದಾರೆ.

ಕಾಳಗಿ ತಾಲ್ಲೂಕಿನ ಬೆಣ್ಣತೊರಾ ಜಲಾಶಯ ಹಾಗೂ ಚಿಂಚೋಳಿ ತಾಲ್ಲೂಕಿನ ಮುಲ್ಲಾಮಾರಿ, ನಾಗರಾಳ, ಚಂದ್ರಂಪಳ್ಳಿ ಜಲಾಶಯಗಳಿಂದ ನೀರು ಬಿಟ್ಟಿದ್ದರಿಂದ ಎಲ್ಲಾ ಜಲಾಶಯಗಳ ನೀರು ಸೇಡಂ ತಾಲ್ಲೂಕಿನ ಮಳಖೇಡ ಹತ್ತಿರ ಕಾಗಿಣಾ ನದಿಗೆ ಸೇರಿ ತಾಲ್ಲೂಕಿನಲ್ಲಿ ಹರಿಯುತ್ತವೆ.

ಸತತ ಮೂರು ದಿನಗಳಿಂದ ಕಾಗಿಣಾ ನದಿಯು ಭೋರ್ಗರೆಯುತ್ತಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಮಾರ್ಗದಿಂದ ಕಲಬುರ್ಗಿಗೆ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಶಹಾಬಾದ್ ಮಾರ್ಗದಿಂದ ಸಂಚರಿಸುತ್ತಿವೆ. ಸೇಡಂಗೆ ಸಂಚರಿಸುತ್ತಿದ್ದ ಬಸ್ ಮರಗೋಳ ಕ್ರಾಸ್ ಮೂಲಕ ನೇರವಾಗಿ ಮಳಖೇಡ ಮಾರ್ಗವಾಗಿ ಸಂಚರಿಸುತ್ತಿವೆ. ಕಾಳಗಿ ಘಟಕದ ಬಸ್ ಸಂಚಾರ ಬಂದ್ ಮಾಡಲಾಗಿದೆ.

ಕಾಗಿಣಾ ನದಿಯ ಉತ್ತರಕ್ಕೆ ಇರುವ ಗ್ರಾಮಗಳ ಜನರು ತಮ್ಮ ಕೆಲಸ ಕಾರ್ಯಗಳಿಗೆ ಭಾಗೋಡಿ ಸೇತುವೆ ಮೂಲಕ ಚಿತ್ತಾಪುರ ಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ. ಭಾಗೋಡಿ ಸೇತುವೆ ಅತೀ ಎತ್ತರ ಇರುವುದರಿಂದ ಕಾಗಿಣಾ ನದಿ ಉಕ್ಕಿ ಹರಿದರೂ ಗ್ರಾಮೀಣ ಜನರು ನಿರಾಂತಕವಾಗಿ ಪಟ್ಟಣಕ್ಕೆ ಬಂದು ಹೋಗಲು ತುಂಬಾ ಅನುಕೂಲವಾಗಿದೆ. ಕಾಗಿಣಾ ನದಿಗೆ ಕಟ್ಟಿರುವ ಮುಡಬೂಳ, ಮುತ್ತಗಾ, ಶಂಕರವಾಡಿ, ಗೋಳಾ ಮತ್ತು ಇಂಗಳಗಿ ಬಾಂದಾರ ಸೇತುವೆಗಳು ಗುರುವಾರವೂ ಪ್ರವಾಹದಲ್ಲಿ ಮುಳಗಡೆಯಾಗಿವೆ.

ಮುತ್ತಗಾ ಸೇತುವೆ ಮುಳಗಡೆಯಿಂದ ಚಿತ್ತಾಪುರ ಮತ್ತು ಶಹಾಬಾದ್ ನಗರ ಮತ್ತು ಹಳ್ಳಿಗಳ ಸಂಪರ್ಕ ಬಂದ್ ಆಗಿದೆ. ಇಂಗಳಗಿ ಮತ್ತು ಗೋಳಾ ಸೇತುವೆ ಮುಳುಗಡೆಯಿಂದ ಚಿತ್ತಾಪುರ ತಾಲ್ಲೂಕಿನ ಕೆಲವು ಗ್ರಾಮಗಳು ಶಹಾಬಾದ್ ನಗರ ಮತ್ತು ಹಳ್ಳಿಗಳಿಂದ ಸಂಪರ್ಕ ಕಡಿದುಕೊಂಡಿವೆ.

ನದಿಯಲ್ಲಿ ಕೊಚ್ಚಿ ಹೋದ ವಿದ್ಯುತ್ ತಂತಿ: ತಾಲ್ಲೂಕಿನ ದಂಡೋತಿ ಗ್ರಾಮಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾಗಿಣಾ ನದಿ ದಂಡೆಯಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬದ ತಂತಿಗೆ ಪ್ರವಾಹದ ನೀರು ತಾಗಿ ಕಂಬ ಉರುಳಿ ಬಿದ್ದಿದೆ. ಪ್ರವಾಹದಲ್ಲಿ ತಂತಿ ಕೊಚ್ಚಿ ಹೋಗಿದೆ. ನಿರಂತರ ಜ್ಯೋತಿ ಸೌಲಭ್ಯ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT