ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಗೆ 180 ಸಿಬ್ಬಂದಿ ನೀಡಲು ಕೋರಿಕೆ

ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಮನವಿ ಮಾಡಿದ ಸಂಸದ
Last Updated 16 ಏಪ್ರಿಲ್ 2021, 15:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ತುರ್ತಾಗಿ ನಿಯೋಜನೆ ಮಾಡಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಅವರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅನಿಲಕುಮಾರ ಅವರಲ್ಲಿ ಮನವಿ ಮಾಡಿದರು.

ಕೋವಿಡ್‌ ತಡೆಗೆ ನಗರದಲ್ಲಿ ಶುಕ್ರವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ, ‘ಜಿಮ್ಸ್‌ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ’ ಎಂದು ಗಮನಕ್ಕೆ ತಂದರು.‌

ಆಗ ಅನಿಲಕುಮಾರ ಅವರಿಗೆ ಕರೆ ಮಾಡಿದ ಸಂಸದರು, ‘ಜಿಮ್ಸ್‌ಗೆ ತುರ್ತಾಗಿ ಅಗತ್ಯವಿರುವ 10 ಲ್ಯಾಬ್ ಟೆಕ್ನಿಷಿಯನ್, 20 ಡಾಟಾ ಎಂಟ್ರಿ ಆಪರೇಟರ್, 10 ವೈದ್ಯರು, 40 ಜನ ಗ್ರೂಪ್ ‘ಡಿ’ ಸಿಬ್ಬಂದಿ ಹಾಗೂ 100 ಸ್ಟಾಫ್‌ ನರ್ಸ್‌ಗಳನ್ನು ಪೂರೈಸಬೇಕು’ ಎಂದೂ ಕೋರಿದರು.

‘ಅಗತ್ಯ ಸಿಬ್ಬಂದಿ ವ್ಯವಸ್ಥೆ ಮಾಡಲಗುವುದು’ ಎಂದು ಅನಿಲಕುಮಾರ ಪ್ರತಿಕ್ರಿಯಿಸಿದರು.

‘ಕೋವಿಡ್‌ ಕಾರಣ ಜನರಲ್ಲಿ ಉಂಟಾದ ಭಯ ನಿವಾರಣೆ ಮಾಡಲು ಅಧಿಕಾರಿಗಳು ಕಾರ್ಯಕ್ರಮ ಹಾಕಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಹಿಂದೆ ಸರಿಯಬಾರದು’ ಎಂದೂ ಸಂಸದ ನಿರ್ದೇಶನ ನೀಡಿದರು.

‘ರೆಮ್‌ ಡಿಸಿವಿರ್‌’ ಇಂಜೆಕ್ಷನ್ ತೆಗೆದುಕೊಂಡರೆ ಮಾತ್ರ ಕೋವಿಡ್‌ನಿಂದ ಗುಣಮುಖರಾಗಬಹುದು ಎಂದು ಜನ ಭಾವಿಸಿದ್ದಾರೆ. ಇದು ತಪ್ಪು ಕಲ್ಪನೆ. ಜನರ ಮನಸ್ಸಿನಿಂದ ಇದನ್ನು ಹೋಗಲಾಡಿಸಲು ತಜ್ಞ ವೈದ್ಯರ ಸಮಿತಿ ರಚಿಸಬೇಕು. ಸಮಿತಿಯ ಶಿಫಾರಸಿನಂತೆ ವೈದ್ಯರು ನಡೆಯಬೇಕು’ ಎಂದೂ ಹೇಳಿದರು.

‘ಲಕ್ಷಣಗಳು ಇಲ್ಲದವರನ್ನು ಆಸ್ಪತ್ರೆಗೆ ದಾಖಲಿಸದೇ, ಮನೆಯಲ್ಲಿಯೇ ಆರೈಕೆ ಮಾಡುವುದು ಸೂಕ್ತ. ಭಯದಿಂದ ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯರು ಇದನ್ನು ಅವರಿಗೆ ತಿಳಿಸಿ ಹೇಳಬೇಕು. ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಹೆಲ್ಪ್ ಡೆಸ್ಕ್’ ತೆರೆಯಬೇಕು.‌ ಜನರು ಯಾವುದಕ್ಕೂ ಪರದಾಡಂತೆ ನೋಡಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಕೆ.ಎಸ್.ರಾಜೇಶ, ಜಿಲ್ಲಾ ಅರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಫಿವುದ್ದಿನ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ, ಇ.ಎಸ್.ಐ.ಸಿ ಆಸ್ಪತ್ರೆಯ ಡೀನ್ ಡಾ.ಲೋಬೊ, ಡಿ.ಎಸ್.ಒ ಡಾ.ಶಿವಕುಮಾರ್ ದೇಶಮುಖ, ಡಿ.ಎಲ್.ಒ ಡಾ.ರಾಜಕುಮಾರ ಕುಲಕರ್ಣಿ ಸೇರಿದಂತೆ ಆರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿಗಳು ಇದ್ದರು.

ಜಿಲ್ಲಾಡಳಿತಕ್ಕೆ ಸ್ಪಂದಿಸದ ಜನ

‘ಸೋಂಕಿತರ ಪ್ರಮಾಣ ನಗರದಲ್ಲಿಯೇ ಶೇ70ರಷ್ಟಿದೆ. ಅಂತರ ಕಾಯ್ದುಕೊಳ್ಳುವಲ್ಲಿ ಜನರ ಸ್ಪಂದನೆ ಸಿಗುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಬೇಸರ ವ್ಯಕ್ತಪಡಿಸಿದರು.

‘ಈ ಮೊದಲು ಖಾಸಗಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಬೆಡ್‍ಗಳನ್ನು ಸೋಂಕಿತರಿಗೆ ಮೀಸಲಿರಿಸಲಾಗುತ್ತಿತ್ತು. ಈಗ ಪ್ರಕರಣಗಳು ಹೆಚ್ಚಾದಂತೆ ಇದರ ಪ್ರಮಾಣ ಶೇ 50ಕ್ಕೆ ಏರಿಸಲಾಗಿದೆ’ ಎಂದರು.‌

20 ಸಾವಿರ ಡೋಸ್‌ ವ್ಯಾಕ್ಸಿನ್‌

ಜಿಲ್ಲೆಗೆ 17 ಸಾವಿರ ಕೋವಿಶಿಲ್ಡ್ ಹಾಗೂ 3 ಸಾವಿರ ಕೋವ್ಯಾಕ್ಸಿನ್ ಲಸಿಕೆಗಳನ್ನು ತರಿಸಲಾಗುತ್ತಿದೆ. ಐ.ಸಿ.ಯೂ.ಗಳಲ್ಲಿ ಪದೇಪದೇ ಆಕ್ಸಿಜನ್ ಸಿಲೆಂಡರ್ ಬದಲಾವಣೆ ಮಾಡುವುದನ್ನು ತಪ್ಪಿಸಲು ಗ್ಯಾಸ್ ಸಿಲಿಂಡರ್ ಮತ್ತು ಜಂಬೊ ಸಿಲಿಂಡರ್‌ಗಳನ್ನು ಕೊಯಮತ್ತೂರು ಹಾಗೂ ಹೈದರಾಬಾದ್‌ನಿಂದ, ಲಿಕ್ವಿಡ್ ಸಿಲಿಂಡರ್‌ಗಳನ್ನು ಬಳ್ಳಾರಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಜ್ಯೋತ್ಸ್ನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT