ವಾಡಿ: ವಾಡಿ ವಲಯದ ಅತ್ಯಂತ ಪುರಾತನ ಶಾಲೆಯೆಂದು ಖ್ಯಾತಿ ಪಡೆದ ನಿಜಾಮರ ಕಾಲದಲ್ಲಿ ಆರಂಭಗೊಂಡ ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆಗೆ ಹೊಸ ಕೋಣೆಗಳ ಭಾಗ್ಯ ಒಲಿದು ಬಂದಿದೆ.
ನಿಜಾಮರು ಬಂದಾಗ ಉಳಿದುಕೊಳ್ಳಲು ಸುಮಾರು 100 ವರ್ಷಗಳ ಹಿಂದೆ ನಿರ್ಮಿಸಿದ್ದ ಪ್ರವಾಸಿ ಬಂಗಲೆಯನ್ನು ನಂತರ ಉರ್ದು ಶಾಲೆಯಾಗಿ ಬದಲಾಯಿಸಿಕೊಳ್ಳಲಾಗಿತ್ತು. ನಂತರ 1987ರಲ್ಲಿ ಕನ್ನಡ ಮಾಧ್ಯಮದ ಕನ್ಯಾ ಪ್ರಾಥಮಿಕ ಶಾಲೆಯಾಗಿ ಬದಲಾಯಿಸಿಕೊಳ್ಳಲಾಯಿತು. ಕಟ್ಟಡ ಹಳೆಯದಾಗಿದ್ದರಿಂದ ಮಳೆ ಬಂದಾಗ ಸೋರಿ ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆ ಉಂಟಾಗುತ್ತಿತ್ತು. ಗಾಳಿ ಬೆಳಕು ಇಲ್ಲದ ಅವೈಜ್ಞಾನಿಕ ಕಟ್ಟಡದಲ್ಲಿ ಮಕ್ಕಳ ಕಲಿಕೆ ಹೇಗೋ ನಡೆಯುತ್ತಿತ್ತು. ದೊಡ್ಡ ಕೋಣೆಗಳನ್ನು ವಿಭಾಗಿಸಿ ಚಿಕ್ಕ ಕೋಣೆಗಳನ್ನಾಗಿ ಮಾಡಿಕೊಳ್ಳಲಾಗಿತ್ತು. ಆಟದ ಮೈದಾನ ಕೊರತೆ ಮಕ್ಕಳ ಸಂತಸದ ಕಲಿಕೆಗೆ ಅಡ್ಡಿಯಾಗಿತ್ತು. ಅದರ ಒಂದು ಭಾಗವನ್ನು ಪುರಸಭೆಗೆ ಬಿಟ್ಟು ಕೊಡಲಾಗಿದ್ದರಿಂದ ಮತ್ತಷ್ಟು ಇಕ್ಕಟ್ಟಿನಲ್ಲಿ ಮಕ್ಕಳ ಕಲಿಕೆ ನಡೆಯುತ್ತಿತ್ತು. ಸರ್ಕಾರ ಎರಡು ಹೊಸ ಕೋಣೆಗಳನ್ನು ಈಚೆಗೆ ನಿರ್ಮಿಸಿದೆ.
‘2022 ಅ. 31ರಂದು ‘ಪ್ರಜಾವಾಣಿ’ ವಿಸ್ತ್ರತ ವರದಿ ಪ್ರಕಟಿಸಿ ಮಕ್ಕಳ ಕಲಿಕೆಗೆ ಹೊಸ ಕೋಣೆಗಳ ಅವಶ್ಯಕತೆ ಕುರಿತು ಮನವರಿಕೆ ಮಾಡಿಕೊಟ್ಟಿತ್ತು.
ಎಸಿಸಿ ಸಿಎಸ್ಆರ್ ವಿಭಾಗದ ಮುಖ್ಯ ವ್ಯವಸ್ಥಾಪಕ ವೀರೇಶ ಎಂ. ಅವರು ಪ್ರಜಾವಾಣಿ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಶಾಲಾ ಸುಧಾರಣೆಗೆ ಕಾರ್ಖಾನೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.
ಈಗ ಅದಾನಿ ಒಡೆತನದ ಎಸಿಸಿ ಸಿಮೆಂಟ್ ಕಾರ್ಖಾನೆಯ ಅದಾನಿ ಫೌಂಡೇಶನ್ ವತಿಯಿಂದ ₹20 ಲಕ್ಷ ವೆಚ್ಚದಲ್ಲಿ ಹೊಸ ಕೋಣೆಗಳ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಹಳೆಯ ಕಟ್ಟಡ ಕೆಡವಿ ಹಾಕಿದ್ದು ಬುಧವಾರ ಹೊಸ ಕಟ್ಟಡಕ್ಕೆ ಅಡಿಗಲ್ಲು ಹಾಕಲಿದೆ. ಇದು ಸಾರ್ವಜನಿಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.
ಶೈಕ್ಷಣಿಕ ಸುಧಾರಣೆಗೆ ಎಸಿಸಿ ಧನ ಸಹಾಯ ಮಾಡುತ್ತಿದೆ. ಪಟ್ಟಣದ ಅತ್ಯಂತ ಹಳೆಯ ಶಾಲೆ ದುಸ್ಥಿತಿ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿನ ಸುದ್ದಿ ನೋಡಿದ ಬಳಿಕ ಶಾಲಾ ಸುಧಾರಣೆಗೆ ನಮ್ಮ ಅದಾನಿ ಫೌಂಡೇಶನ್ ಮುಂದಾಗಿದೆ. ಬುಧವಾರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಎಸಿಸಿ ಸಿಎಸ್ಆರ್ ವಿಭಾಗದ ಮುಖ್ಯ ವ್ಯವಸ್ಥಾಪಕ ವೀರೇಶ ಎಂ. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.