ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ: ಏಕಕಾಲಕ್ಕೆ ಎರಡು ಹೆದ್ದಾರಿಗಳಲ್ಲಿ ಪರದಾಟ

Published 11 ಜುಲೈ 2024, 4:12 IST
Last Updated 11 ಜುಲೈ 2024, 4:12 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಕೋಡ್ಲಿ ಕ್ರಾಸ್ ಮತ್ತು ಕೋಡ್ಲಿ ಊರೊಳಗೆ ಸಂಚರಿಸಲು ಇರುವ ಎರಡು ರಾಜ್ಯಹೆದ್ದಾರಿಗಳು ಕಾಮಗಾರಿ ಕೈಗೊಳ್ಳುವ ನೆಪದಲ್ಲಿ ಏಕಕಾಲಕ್ಕೆ ಕೆದರಿ ಹಾಕಲಾಗಿದೆ. ಕಾಮಗಾರಿಯು ಸಮಯಕ್ಕೆ ಸರಿಯಾಗಿ ನಡೆಯದೆ ನನೆಗುದಿಗೆ ಬಿದ್ದ ಪರಿಣಾಮ ಜನರು ಪರದಾಡುವಂತಾಗಿ ಹಿಡಿಶಾಪ ಹಾಕುತ್ತಿದ್ದಾರೆ.

ಫಿರೋಜಾಬಾದ್-ಕಮಲಾಪುರ ರಾಜ್ಯಹೆದ್ದಾರಿ-125 ಮತ್ತು ಉಮ್ಮರ್ಗಾ ಗಡಿ-ಸುಲೇಪೇಟ್ ರಾಜ್ಯಹೆದ್ದಾರಿ-32 ಈ ಎರಡು ಹೆದ್ದಾರಿಗಳು ಕೋಡ್ಲಿ ಕ್ರಾಸ್‌ನಲ್ಲಿ ಒಂದಕ್ಕೊಂದು ಸೇರಿಕೊಳ್ಳುತ್ತವೆ. ಚಿಂಚೋಳಿ-ಮಹಾಗಾಂವ ಕ್ರಾಸ್ ಮತ್ತು ಚಿಂಚೋಳಿ-ಕಾಳಗಿ-ಕಲಬುರಗಿ ಹಾಗೂ ಕಾಳಗಿ-ಚಿಟಗುಪ್ಪ-ಹುಮನಾಬಾದ್‌ ನಡುವೆ ಸಂಚರಿಸುವ ಎಲ್ಲಾ ವಾಹನಗಳು ಇದೇ ಮಾರ್ಗ ಅವಲಂಬಿಸಿ, ಎರಡೂ ಹೆದ್ದಾರಿ ಕೂಡಿಕೊಳ್ಳುವ ಕೋಡ್ಲಿ ಕ್ರಾಸ್ ‘ವೃತ್ತ’ವಾಗಿ ನಿರ್ಮಾಣಗೊಂಡಿದೆ. ಹೀಗಾಗಿ ಇಲ್ಲಿ ನಿಲ್ಲುವ ವಾಹನಗಳ ಸಂಖ್ಯೆ ಹೆಚ್ಚಿದ್ದು ಸುತ್ತಲಿನ ಹಳ್ಳಿಗಳ ಪ್ರಯಾಣಿಕರ ದಂಡೇ ಇಲ್ಲಿರುತ್ತದೆ. ಈ ವೃತ್ತದ ಅಭಿವೃದ್ಧಿಗೋಸ್ಕರ ಸಂಬಂಧಪಟ್ಟ ಇಲಾಖೆ ಹೆದ್ದಾರಿ ಅಕ್ಕಪಕ್ಕದ ಎಲ್ಲಾ ಅಂಗಡಿ ಮುಂಗಟ್ಟುಗಳು ದೂರ ಸರಿಸಿ ಚಿಂಚೋಳಿ ಮತ್ತು ಕೋಡ್ಲಿ ಊರೊಳಗಿನ ಮಾರ್ಗದ ಹೆದ್ದಾರಿಯ ಅಗಲೀಕರಣಕ್ಕೆ ಮುಂದಾಗಿದೆ.

ಈ ಕೆಲಸ ಎರಡು ವರ್ಷಗಳಿಂದ ನಡೆಯುತ್ತಿದ್ದು ಇನ್ನೂ ಪೂರ್ಣಗೊಳ್ಳದೆ ಆಮೆ ಗತಿ ಅನುಸರಿಸಿದೆ. ಹೆದ್ದಾರಿ ಬದಿಯ ಚರಂಡಿ ನಿರ್ಮಾಣದ ಕೆಲಸ ಕಬ್ಬಿಣದ ಸರಳುಗಳಲ್ಲೇ ಉಳಿದುಕೊಂಡಿದೆ. ಮಳೆ ಬಂದಾಗ ಮುರುಮ್ ಕೆಸರಾಗಿ ಎಲ್ಲರಿಗೂ ಸಿಡಿಯುತ್ತಿದ್ದು ಕಾಲುಜಾರಿ ಬೀಳುವವರ ಸಂಖ್ಯೆ ಹೆಚ್ಚಿದೆ. ಪ್ರಯಾಣಿಕರಿಗೆ ನಿಲ್ಲಲು ಆಸರೆ ಇಲ್ಲದಂತಾಗಿದೆ. ಊರೊಳಗಿನ ಮಾರ್ಗದಲ್ಲಿ ಹೆದ್ದಾರಿಯ ಅರ್ಧಭಾಗ ಕೆದರಿಹಾಕಿ ಇನ್ನರ್ಧ ಹಾಗೆ ಬಿಡಲಾಗಿದ್ದು ವಾಹನಗಳು ಎದುರು ಬದುರಾಗಿ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ರಾತ್ರಿವೇಳೆ ಮತ್ತು ಮಳೆ ಬರುತ್ತಿರುವಾಗ ಸಂಚರಿಸುವವರ ಗೋಳು ಹೇಳತೀರದಾಗಿದೆ ಎನ್ನುತ್ತಾರೆ ನೊಂದವರು. ಈ ಎಲ್ಲ ಗೋಳು ನಿವಾರಣೆಗೆ ಅನೇಕ ಬಾರಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರತಿಭಟನಾಕಾರರು.

ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರು ಕೂಡಲೇ ಗಮನಹರಿಸಿ ಕಾಮಗಾರಿಗೆ ಚುರುಕು ಕೊಡಿಸಿ ಜನರ ನೋವು ನಿವಾರಿಸಬೇಕೆಂದು ಸ್ಥಳೀಯರು ಕೋರಿದ್ದಾರೆ.

ಕಾಳಗಿ ತಾಲ್ಲೂಕಿನ ಕೋಡ್ಲಿ ಕ್ರಾಸ್‌ನಿಂದ ಕೋಡ್ಲಿ ಊರೊಳಗೆ ಬರುವ ಮುಖ್ಯರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ
ಕಾಳಗಿ ತಾಲ್ಲೂಕಿನ ಕೋಡ್ಲಿ ಕ್ರಾಸ್‌ನಿಂದ ಕೋಡ್ಲಿ ಊರೊಳಗೆ ಬರುವ ಮುಖ್ಯರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ
ಈ ಹೆದ್ದಾರಿ ಕಾಮಗಾರಿ ಜನರ ಜೀವ ತೆಗೆದುಕೊಳ್ಳುತ್ತಿದೆ. ಕೇಳಿದಾಗೊಮ್ಮೆ ಒಂದಿಷ್ಟು ಕೆಲಸ ಮಾಡ್ತಾರೆ. ಆಮೇಲೆ ಅಷ್ಟಕ್ಕೆ ಬಿಡ್ತಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಜಿಲ್ಲಾಧಿಕಾರಿಗೂ ಮನವಿ ಮಾಡಲಾಗಿದೆ
ಬಸವರಾಜ ಕೋಲಕುಂದಿ ಕಾಂಗ್ರೆಸ್ ಕಿಸಾನ್‌ ಘಟಕದ ಅಧ್ಯಕ್ಷ
ಹೆದ್ದಾರಿ ಅಗೆದುಹಾಕಿ ಅಷ್ಟಕ್ಕೆ ಬಿಟ್ಟಿರುವುದು ಓಡಾಡುವ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಆಟೋ ಸವಾರರು ಅಂತೂ ಸಿಕ್ಕಾಪಟ್ಟೆ ನಷ್ಟ ಅನುಭವಿಸುತ್ತಿದ್ದಾರೆ.
ಮಲ್ಲಪ್ಪ ಚಿಂತಕೋಟಿ ಗ್ರಾ.ಪಂ ಸದಸ್ಯ ಕೋಡ್ಲಿ
ಕೋಡ್ಲಿ ಕ್ರಾಸ್ ನಿಂದ ಕೋಡ್ಲಿ ಊರೊಳಗೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಬರುವ ಸ್ಥಿತಿಯಿದೆ. ಚಿಟಗುಪ್ಪ ಮಾರ್ಗದ ಪ್ರಯಾಣಿಕರ ಗೋಳು ಕೇಳೋರು ಇಲ್ಲದಂತಾಗಿದೆ.
ಆನಂದಕುಮಾರ ಜಾಧವ ಗ್ರಾ.ಪಂ ಸದಸ್ಯ ಸೇರಿಬಡಾ ತಾಂಡಾ
ಕಾಮಗಾರಿಗೆ ಅಡಚಣೆಯಾಗುವ ವಿದ್ಯುತ್ ಕಂಬಗಳು ಮತ್ತು ಗಿಡಗಳ ಸ್ಥಳಂತರ ಮಾಡಲಾಗುತ್ತಿದೆ. ಇದು ಮುಗಿದ ಕೂಡಲೇ ಹೆದ್ದಾರಿ ಕಾಮಗಾರಿ ಮುಂದುವರಿಸಲು ತಿಳಿಸಿದ್ದೇನೆ.
-ಮಲ್ಲಿಕಾರ್ಜುನ ದಂಡಿನ್ ಎಇಇ ಪಿಡಬ್ಲ್ಯುಡಿ ಉಪವಿಭಾಗ ಕಾಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT