ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ | ಬಿಸಿಲು ಹೆಚ್ಚಳ: ರೇಷ್ಮೆ ಮರಿಗಳು ಸಾವು

Published 9 ಮೇ 2024, 5:52 IST
Last Updated 9 ಮೇ 2024, 5:52 IST
ಅಕ್ಷರ ಗಾತ್ರ

ಅಫಜಲಪುರ: ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿರುವುದರಿಂದ ರೇಷ್ಮೆ ಮರಿಗಳು ಸಾಯುತ್ತಿದ್ದು, ಹೀಗಾಗಿ ರೈತರಿಗೆ ರೇಷ್ಮೆ ಕೃಷಿಯಿಂದ ಹಾನಿ ಆಗುತ್ತಿದೆ. ರೇಷ್ಮೆ ಹುಳು ಸಾಕಾಣಿಕೆಗೆ ತಂಪಾದ ವಾತಾವರಣ ಬೇಕು. ಉಷ್ಣಾಂಶ ಹೆಚ್ಚಳವಾಗಿರುವುದರಿಂದ ರೇಷ್ಮೆ ಹುಳ ಸಾಕಾಣಿದಾರರು ಪರದಾಡುತ್ತಿದ್ದಾರೆ. ಸಾಕಷ್ಟು ರೈತರು ರೇಷ್ಮೆ ಕೃಷಿಯನ್ನೇ ಕೈಬಿಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ರೇಷ್ಮೆ ಇಲಾಖೆಯ ಪ್ರಭಾರಿ ಅಧಿಕಾರಿಗಳಾದ ಅನಿಲ್ ಕುಸಮಿ ಮಾಹಿತಿ ನೀಡಿ, ರೇಷ್ಮೆ ಹುಳ ಸಾಕಾಣಿಕೆ ಮಾಡಬೇಕಾದರೆ 26 ರಿಂದ 30 ಡಿಗ್ರಿ ವರೆಗೆ ಉಷ್ಣಾಂಶ ಇರಬೇಕು. ಆದರೆ, ಈ ವರ್ಷ ಉಷ್ಣಾಂಶ ಮಿತಿಮೀರಿದ್ದರಿಂದ ರೇಷ್ಮೆ ಕೃಷಿ ಸಾಧ್ಯವಾಗುವುದಿಲ್ಲ. ರೈತರಿಗೆ ನಾವು ಈಗಾಗಲೇ ರೇಷ್ಮೆ ಕೃಷಿಯನ್ನ ಮಾಡುವುದು ನಿಲ್ಲಿಸುವಂತೆ ಹೇಳಿದ್ದೇವೆ. ಆದರೂ ಕೆಲವು ರೈತರು ಮುಂದುವರಿಸುತ್ತಾರೆ. ಇಷ್ಟೊಂದು ಬಿಸಿಲಿನ ತಾಪಕ್ಕೆ ರೇಷ್ಮೆ ಹುಳುಗಳು ಸತ್ತು ಹೋಗುತ್ತವೆ. ರೇಷ್ಮೆ ಕೃಷಿಯನ್ನು ಮುಂದುವರೆಸಿರುವ ರೈತರು ಹುಳ ಸಾಕಾಣಿಕೆ ಶೆಡ್ಡುಗಳ ಮೇಲೆ ಬಾಳೆದಿಂಡುಗಳನ್ನು ಮತ್ತು ಇತರ ತಂಪು ವಾತಾವರಣ ನಿರ್ಮಿಸುವ ವಸ್ತುಗಳನ್ನು ಹಾಕಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕಿನಲ್ಲಿ 85 ರೈತರು 159 ಎಕರೆಯಲ್ಲಿ ರೇಷ್ಮೆ ವ್ಯವಸಾಯ ಮಾಡುತ್ತಾರೆ. ಅಂತರ್ಜಲ ಮಟ್ಟ ಕಡಿಮೆಯಾಗಿದ್ದರಿಂದ ರೇಷ್ಮೆ ಬೆಳೆಯುವ ಪ್ರದೇಶ ಕಡಿಮೆಯಾಗಲಿದೆ. ರೈತರು ವರ್ಷದಲ್ಲಿ ನಾಲ್ಕು ಬಾರಿ ರೇಷ್ಮೆ ಗೂಡು ಮಾರಾಟ ಮಾಡಬಹುದು. ಆದರೆ, ಇನ್ನು ಎರಡು ತಿಂಗಳು ಉಷ್ಣಾಂಶ ಹೆಚ್ಚಿರುವುದರಿಂದ ಯಾವ ರೈತರು ರೇಷ್ಮೆ ಕೃಷಿ ಮಾಡಲು ತಯಾರಿ ಮಾಡಿಕೊಳ್ಳಬಾರದು. ಈಗಾಗಲೇ ಜಿಲ್ಲಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಬಿಸಿಲಿನ ತಾಪ ಹೆಚ್ಚಾಗುವುದರಿಂದ ರೇಷ್ಮೆ ಕೃಷಿಗೆ ಈ ವಾತಾವರಣ ಯೋಗ್ಯ ಆಗುವುದಿಲ್ಲ ಎಂದು ಅವರು ತಿಳಿಸಿದರು.

ಮಾಶಾಳ ಗ್ರಾಮದ ರೇಷ್ಮೆ ಬೆಳೆಗಾರ ಸಂತೋಷ್ ಗಂಜಿ ಮಾತನಾಡಿ, ‘ನಾನು 3 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿದ್ದೇನೆ. ತಾಲೂಕಿನ ಗೊಬ್ಬುರ್( ಬಿ) ಗ್ರಾಮದಲ್ಲಿ ವೀರಭದ್ರೇಶ್ವರ ಜಾಕಿ ಕೇಂದ್ರದಿಂದ ₹3600 ಕೊಟ್ಟು 100 ರೇಷ್ಮೆ ಮರಿಗಳು ಖರೀದಿ ಮಾಡಿದ್ದೇನೆ. ರೇಷ್ಮೆ ಮರಿಗಳಿಗೆ 15 ದಿನಗಳವರೆಗೆ ಸೊಪ್ಪು ಹಾಕಿ ಮೇಯಿಸಿದ್ದೇನೆ. ಆದರೆ, ಇನ್ನೂ ಎರಡು ಮೂರು ದಿನದಲ್ಲಿ ರೇಷ್ಮೆ ಮರಿಗಳು ಗೂಡುಕಟ್ಟೆ ರೇಷ್ಮೆ ತಯಾರಿ ಮಾಡುತ್ತಿದ್ದವು. ಅಷ್ಟರೊಳಗಾಗಿ ಉಷ್ಣಾಂಶ ತಾಪಕ್ಕೆ ರೇಷ್ಮೆ ಹುಳಗಳು ಸತ್ತು ಹೋಗಿವೆ. ಹೀಗಾಗಿ ನನಗೆ ₹1 ಲಕ್ಷ ಹಾನಿಯಾಗಿದೆ. 100 ಮೊಟ್ಟೆಗೆ ಉತ್ತಮ ಇಳುವರಿ ಸಿಗಬೇಕಾದರೆ 100 ಕೆ.ಜಿ. ಗೂಡು ಬರಬೇಕು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೂಡು ₹400ಗೆ ಹರಾಜಾಗುತ್ತಿದೆ. ಕಳೆದ ವರ್ಷ ಬಿಸಿಲು ಕಡಿಮೆ ಇತ್ತು. ರೇಷ್ಮೆ ಕೃಷಿ ಲಾಭವಾಗಿತ್ತು ಎಂದು ಹೇಳುತ್ತಾರೆ.

ರೇಷ್ಮೆ ಮರಿಗಳಿಗೆ ಸೊಪ್ಪು ಹಾಕಿರುವುದು
ರೇಷ್ಮೆ ಮರಿಗಳಿಗೆ ಸೊಪ್ಪು ಹಾಕಿರುವುದು
ಉಷ್ಣಾಂಶ ಹೆಚ್ಚಳದಿಂದ ರೇಷ್ಮೆ ವ್ಯವಸಾಯಕ್ಕೆ ಹಾನಿಯಾಗಿದ್ದು ನಮಗೆ ಮಾಹಿತಿ ಇದೆ. ಆದರೆ ಸರ್ಕಾರದಿಂದ ಪರಿಹಾರ ನೀಡಲು ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಆದರೂ ಸರ್ಕಾರ ಕೇಳಿದರೆ ಮಾಹಿತಿ ಕೊಡುತ್ತೇವೆ. ರೇಷ್ಮೆ ವ್ಯವಸಾಯದಿಂದ ಹಾನಿಗೊಳಗಾದ ರೈತರಿಗೆ ನರೇಗಾ ಯೋಜನೆ ಅಡಿಯಲ್ಲಿ ಸಹಾಯ ಮಾಡಲು ಅವಕಾಶದ ಕುರಿತು ಮೇಲಾಧಿಕಾರಿಗಳೊಂದಿಗೆ ಮಾತನಾಡಲಾಗುವುದು
ಅನಿಲ್ ಕುಸಮಿ ರೇಷ್ಮೆ ಇಲಾಖೆಯ ಪ್ರಭಾರಿ ಅಧಿಕಾರಿ
ರೇಷ್ಮೆಹುಳು ಸಾಕಣಿಕೆಗೆ ಉಷ್ಣಾಂಶ 26 ಡಿಗ್ರಿಯಷ್ಟು ಇರಬೇಕು. ತೇವಾಂಶ 60 ಡಿಗ್ರಿಯಷ್ಟಿರಬೇಕು. ಆದರೆ ದಿನದಿಂದ ದಿನಕ್ಕೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಲೇ ಇದೆ. ಹುಳು ಸಾಕಾಣಿಕೆ ಮನೆಗಳ ಸುತ್ತಲೂ ನೆಟ್ ಕಟ್ಟಿದರೂ ಬಿಸಿಗಾಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಗೋಣಿ ಚೀಲ ಕಟ್ಟಿ ಅರ್ಧಗಂಟೆಗೊಮ್ಮೆ ನೀರು ಹಾಕುತ್ತಿದ್ದೇವೆ. ಆದರೂ ಕಷ್ಟವಾಗುತ್ತಿದೆ.
ಸಂತೋಷ್ ಗಂಜಿ ರೇಷ್ಮೆ ಬೆಳೆಗಾರ ಮಾಶಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT