ಬುಧವಾರ, ಜನವರಿ 27, 2021
24 °C
ಮಸೀದಿ, ದರ್ಗಾಗಳಲ್ಲಿ ಅನ್ನದಾನ ಮಾಡಿದ ಮುಸ್ಲಿಮರು, ಅನ್ಯಧರ್ಮೀಯರಿಗೂ ಶುಭಾಶಯ ಕೋರಿದ ಗಣ್ಯರು

ಕಲಬುರ್ಗಿ: ಈದ್‌ ಸರಳವಾದರೂ ಸಂಭ್ರಮ ಮಿಗಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಈದ್‌ ಮಿಲಾದ್‌ ಸಂಭ್ರಮ ಮನೆ ಮಾಡಿತು. ಕೊರೊನಾ ವೈರಾಣು ಭೀತಿಯ ಕಾರಣ ಈ ಬಾರಿ ಅದ್ಧೂರಿ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೂ ಸಂಭ್ರಮಕ್ಕೇನೂ ಕೊರತೆ ಇಲ್ಲ.

ಪ್ರವಾದಿ ಮಹಮದ್‌ ಪೈಗಂಬರ್‌ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಈ ಹಬ್ಬ ಮುಸ್ಲಿಮರಿಗೆ ಅತಿ ದೊಡ್ಡ ಆಚರಣೆ. ಸಾಂಪ್ರದಾಯಿಕವಾಗಿ ಈದ್‌ ಮಿಲಾದ್‌ ಎಂದರೂ ಇದರ ಮೂಲ ಹೆಸರು ‘ಈದ್‌ ಮಿಲಾದ್‌ ಉನ್‌– ನಬಿ’ ಎಂದು. ಈ ಉರ್ದು ಪದವು ನಾಡಿನಾದ್ಯಂತ ‘ಈದ್‌ ಮಿಲಾದ್‌’ ಎಂದೇ ಜನಜನಿತವಾಗಿದೆ.‌

ಹಬ್ಬದ ಅಂಗವಾಗಿ ಗುರುವಾರ ರಾತ್ರಿಯಿಂದಲೇ ಬಹುಪಾಲು ಮಸೀದಿ, ದರ್ಗಾ ಹಾಗೂ ಮದರಸಾಗಳಲ್ಲಿ ಇನ್ನಿಲ್ಲದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪ್ರವಾದಿಗಳು ಹುಟ್ಟಿದ ಖುಷಿ ಸಂದರ್ಭಕ್ಕಾಗಿ ಬಡವರಿಗೆ ಅನ್ನದಾನ ಮಾಡುವುದು ಹಬ್ಬದ ವಿಶೇಷ. ಹಾಗಾಗಿ, ಮಸೀದಿಗಳಲ್ಲಿ ಗುರುವಾರ ತಡರಾತ್ರಿಯೇ ವಿವಿಧ ಬಗೆಯ ಸಿಹಿ ತಿಂಡಿ ಹಾಗೂ ಬಿರಿಯಾನಿಗಳು ಸಿದ್ಧಗೊಂಡವು. ಶುಕ್ರವಾರ ನಸುಕಿನ 5 ಗಂಟೆಗೇ ಊಟ ನೀಡುವ ಪ್ರಕ್ರಿಯೆ ಆರಂಭಿಸಲಾಯಿತು.

ಇನ್ನೊಂದೆಡೆ, ಮುಸ್ಲಿಮರ ಮನೆಗಳಲ್ಲೂ ಎಲ್ಲಿಲ್ಲದ ಸಂಭ್ರಮ. ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳು ಹಾಗೂ ಇತರ ಧರ್ಮೀಯರನ್ನೂ ಮನೆಗೆ ಆಹ್ವಾನಿಸಿ, ಸಿಹಿ ಹಾಗೂ ಕರಿದ ಪದಾರ್ಥಗಳ ಭೂರಿ ಭೋಜನ ಮಾಡಿಸಿದರು.

ಪುರುಷರು, ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಹಾಕಿಕೊಂಡು ಲವಲವಿಕೆಯಿಂದ ಓಡಾಡಿದರು. ಬಹುಪಾಲು ಮಂದಿ ಮನೆಗಳಲ್ಲೇ ಅಲ್ಲಾಹುನ ಪ್ರಾರ್ಥನೆ ಹಾಗೂ ನಮಾಜ್‌ ಮಾಡಿದರು. ಮಸೀದಿಗಳಲ್ಲಿ ನಮಾಜ್‌ಗೆ ಬಂದವರಿಗೆಲ್ಲ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ಕಡ್ಡಾಯ ಮಾಡಲಾಗಿತ್ತು. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವ ಜವಾಬ್ದಾರಿಯನ್ನು ಆಯಾ ಮಸೀದಿ ಹಾಗೂ ದರ್ಗಾಗಳ ಮೇಲುಸ್ತುವಾರಿ ಸಮಿತಿಗಳಿಗೇ ವಹಿಸಲಾಗಿತ್ತು.

ರಾತ್ರಿಗೆ ಇಮ್ಮಡಿಸಿದ ವೈಭವ: ಸ್ತಬ್ದಚಿತ್ರಗಳ ಮೆರವಣಿಗೆ ಜುಲೂಸ್‌ ಇಲ್ಲ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ಸಂಭ್ರಮವೂ ಯಥಾವತ್ತಾಗಿ ನಡೆಯಿತು. ನಗರದ ಪ್ರಮುಖ ರಸ್ತೆಗಳನ್ನು, ಮಸೀದಿ, ದರ್ಗಾ, ಮನೆಗಳನ್ನು ಬಣ್ಣಬಣ್ಣದ ವಿದ್ಯುದ್ದೀಪಾಲಂಕಾರದಿಂದ ಸಿಂಗರಿಸಲಾಗಿದೆ.

ಇಲ್ಲಿನ ಮುಸ್ಲಿಂ ಚೌಕ್‌ ಕೇಂದ್ರವಾಗಿರಿಸಿಕೊಂಡು– ದರ್ಗಾ ರಸ್ತೆ, ಸಾತ್‌ ಗುಂಬಜ್‌, ಚುನ್ನಿ ಮಾರ್ಕೆಟ್‌, ಕಪಡಾ ಬಜಾರ್‌, ಸೂಪರ್‌ ಮಾರ್ಕೆಟ್‌, ಎಪಿಎಂಸಿ ರಸ್ತೆ, ಗಂಜ್‌ ಪ್ರದೇಶದ ಕೊನೆಯವರೆಗೂ ಸಾಲುಸಾಲು ಸರಗಳ ದೀಪಾಲಂಕಾರ ಕಣ್ಣು ಕೋರೈಸುವಂತಿದೆ.

ಅಂತ್ರಾಸವಾಡಿಯ ರಸ್ತೆ ಇಕ್ಕೆಲಗಳಲ್ಲೂ ಯುವಕರು ವೈವಿಧ್ಯಮಯ ಸ್ತಬ್ಧಚಿತ್ರಗಳನ್ನು ನಿರ್ಮಿಸಿ, ಚಿತ್ತಾಪಹಾರಿ ಅಲಂಕಾರ ಮಾಡಿದ್ದಾರೆ. ‌ಸಂಜೆ 7ರ ಸುಮಾರಿಗೆ ಈ ರಸ್ತೆಗೆ ಸಾವಿರಾರು ಸಂಖ್ಯೆಯ ಜನ ಹರಿದುಬಂದರು. ಯುವಕ, ಯುವತಿಯರು, ಮಕ್ಕಳು ಸ್ತಬ್ಧಚಿತ್ರಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.  ಹಲವರು ಕುಟುಂಬ ಸಮೇತರಾಗಿ ಬಂದು ಫೋಟೊಗೆ ಪೋಸ್‌ ನೀಡಿದರು.

ಹಳೆ ಜೇವರ್ಗಿ ರಸ್ತೆ, ರೈಲು ನಿಲ್ದಾಣದ ಮಾರ್ಗ, ಎಪಿಎಂಸಿ ಸರ್ಕಲ್‌, ಹುಮನಾಬಾದ್‌ ರಿಂಗ್‌ ರಸ್ತೆ, ಖೂನಿ ಹವಾಲಾ, ಇಸ್ಲಾಂ ಕಾಲೊನಿ, ಗಾಜಿ ಮೊಹಲ್ಲ, ಕೆಬಿಎನ್‌ ದರ್ಗಾ, ಎಂಎಸ್‌ಕೆ ಮಿಲ್‌ ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ಸಂಭ್ರಮ ಮನೆ ಕಂಡುಬಂತು.

ಅತ್ತರ್‌ನ ಘಮಲು, ಮಕ್ಕಾ– ಮದೀನಾ ಮಾದರಿ ಸೆಳೆತ

ಕಲಬುರ್ಗಿ: ನಗರದಲ್ಲಿ ಅಲಂಕಾರ ಮಾಡಿದ ಎಲ್ಲ ರಸ್ತೆಗಳಲ್ಲೂ ಇಡೀ ದಿನ ಅತ್ತರ್‌ನ ಘಮಲು ಹರಡಿಕೊಂಡಿತು. ಹಬ್ಬಕ್ಕೆಂದು ಹೊಸಬಟ್ಟೆ, ಒಡವೆ ಖರೀದಿಸಿದ ಮುಸ್ಲಿಂ ಯುವಕ, ಯುವತಿಯರಂತೂ ಅತ್ತರ್‌ ಪೂಸಿಕೊಂಡು ಸ್ನೇಹಿತರೊಂದಿಗೆ ಓಡಾಡಿ ಸಂಭ್ರಮಿಸಿದರು.

ಅಂತ್ರಾಸವಾಡಿಯಲ್ಲಿ ಯುವಕರು ಮಕ್ಕಾ ಹಾಗೂ ಮದೀನಾ ಮಸೀದಿಗಳ ಮಾದರಿಯನ್ನೇ ಅನುಸರಿಸಿ, ಪಿಒಪಿ ಮಸೀದಿಗಳನ್ನು ನಿರ್ಮಿಸಿದ್ದರು. ಮೂಲ ಮಸೀದಿಗಳು ಇರುವಂತೆಯೇ ಅಲಂಕಾರವನ್ನೂ ಮಾಡಿದ್ದರು. ಇವುಗಳನ್ನು ನೋಡಲು ಹಲವರು ಮುಗಿಬಿದ್ದರು. ಮಕ್ಕಳಿಗೂ ತೋರಿಸಿ ಸಂಭ್ರಮಿಸಿದರು.

ಮಕ್ಕಳಾದಿ ಆಗಿ ಹಿರಿಯರೆಲ್ಲರೂ ಒಬ್ಬರಿಗೊಬ್ಬರು ಅಪ್ಪಿಕೊಂಡು ಈದ್‌ ಶುಭಾಶಯ ಕೋರುವುದು ಸಾಮಾನ್ಯವಾಗಿತ್ತು. ಮಹಿಳೆಯರು ಒಡವೆ, ಹೊಸ ಉಡುಗೆಯಲ್ಲಿ ಅಲಂಕಾರ ಮಾಡಿಕೊಂಡು ಮಿಂಚಿದರು. ಪುರುಷರು ಬಿಳಿ ನಿಲುವಂಗಿ, ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡು ಮುಬಾರಕ್‌ ವಿನಿಮಯ ಮಾಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.