ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರೇ ಅಪಮಾನ ಸಹಿಸಿಕೊಳ್ಳದೇ ರಾಜೀನಾಮೆ ನೀಡಿ: ಮಾಜಿ ಶಾಸಕ ಬಿ.ಆರ್‌. ಪಾಟೀಲ

ಕೇಂದ್ರದ ವಿರುದ್ಧ ಬೀದಿಗಳಿದು ಹೋರಾಟ ಮಾಡಲು ಮಾಜಿ ಶಾಸಕ ಬಿ.ಆರ್‌. ಪಾಟೀಲ ಆಗ್ರಹ
Last Updated 19 ಮಾರ್ಚ್ 2021, 9:52 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅನ್ಯಾಯವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಆದರೆ, ಅಪಮಾನವನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳಬಾರದು. ರೈಲ್ವೆ ವಿಭಾಗೀಯ ಕಚೇರಿಯನ್ನು ರದ್ದು ಮಾಡುವ ಮೂಲಕ ಕೇಂದ್ರ ಸರ್ಕಾರವು ಸಂಸದ ಡಾ.ಉಮೇಶ ಜಾಧವ ಅವರಿಗೆ ಸಂಸತ್ತಿನಲ್ಲಿಯೇ ಅಪಮಾನ ಮಾಡಿದೆ. ಇದನ್ನು ಖಂಡಿಸಿ ಅವರು ರಾಜೀನಾಮೆ ನೀಡಿ ಹೊರಬರಬೇಕು. ಅವರೊಂದಿಗೆ ಹೋರಾಟಕ್ಕೆ ನಾವೂ ಕೈಜೋಡಿಸುತ್ತೇವೆ’ ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

‘ವಿಭಾಗೀಯ ಕಚೇರಿಯ ಮಹತ್ವದ ಕುರಿತು ನಮ್ಮ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಅಲ್ಲಿ ಮಾತ್ರ ಮಾತನಾಡಿದರೆ ಸಾಲದು. ಈ ಜನರ ಮುಂದೆ ಬಂದು ನಿಲ್ಲಬೇಕು. ಜನರ ಧ್ವನಿಯನ್ನು ಒಟ್ಟುಗೂಡಿಸಿ ನಿಂತಾಗ ಮಾತ್ರ ಸರ್ಕಾರ ಮಣಿಯುತ್ತದೆ. ಈ ವಿಚಾರದಲ್ಲಿ ಸಂಸದರು ಒಬ್ಬಂಟಿಯಲ್ಲ; ಅವರೊಂದಿಗೆ ನಾವೆಲ್ಲ ಇದ್ದೇವೆ. ಕೇಂದ್ರದ ಧೋರಣೆ ಖಂಡಿಸಿ ಅವರು ಬೀದಿಗಿಳಿದು ನಿಂತರೆ ಜನರ ಮುಂದೆ ಮರಿಯಾದೆ ಉಳಿಯುತ್ತದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕಲ್ಯಾಣ ಕರ್ನಾಟಕವನ್ನು ‘ಟಾರ್ಗೆಟ್‌’ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮವಹಿಸಿ ಮಂಜೂರು ಮಾಡಿಸಿದ್ದ ಎಲ್ಲ ಯೋಜನೆಗಳನ್ನೂ ಮೋದಿ ಹಿಂದಕ್ಕೆ ಪಡೆಯುತ್ತಿದ್ದಾರೆ. ವಿಭಾಗೀಯ ರೈಲ್ವೆ ಕಚೇರಿಯನ್ನು ರದ್ದುಮಾಡಲು ನಿಜವಾದ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಕಲಬುರ್ಗಿಯಲ್ಲಿ ಎಲ್ಲ ಮೂಲಸೌಕರ್ಯ ಇದ್ದರೂ ‘ಏಮ್ಸ್‌’ ಅನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿ ಸ್ಥಾಪಿಸಬೇಕಿದ್ದ ಆಹಾರ ಸಂಸ್ಕರಣಾ ಘಟಕವೂ ಧಾರವಾಡಕ್ಕೆ ಹೋಗಿದೆ. ಜವಳಿ ಪಾರ್ಕ್‌ಅನ್ನು ಮೈಸೂರಿಗೆ ಸ್ಥಳಾಂತರಿಸಿದ್ದಾರೆ. ಮೈಸೂರು ಭಾಗದಲ್ಲಿ ಹತ್ತಿ ಬೆಳೆಯುವುದೇ ಇಲ್ಲ. ಹಾಗಿದ್ದರೆ ಪಾರ್ಕ್‌ ಅನ್ನು ಅಲ್ಲಿಗೆ ಏಕೆ ಸ್ಥಳಾಂತರಿಸಲಾಯಿತು? ಚಿತ್ತಾಪುರದಲ್ಲಿ ಸ್ಥಾಪಿಸಬೇಕಿದ್ದ ‘ನಿಮ್ಜ್‌’ ಅನ್ನೂ ಕೈಬಿಡಲಾಗಿದೆ. ಯಾದಗಿರಿಯಲ್ಲಿ ಸ್ಥಾಪಿಸಬೇಕಿದ್ದ ರೈಲ್ವೆ ಕೋಚ್‌ ಕಾರ್ಖಾನೆಯನ್ನೂ ಸ್ಥಳಾಂತರಿಸಲಾಗಿದೆ... ಹೀಗೆ ಈ ಭಾಗದ ಎಲ್ಲ ಪ್ರಮುಖ ಯೋಜನೆಗಳನ್ನು ಸ್ಥಳಾಂತರಿಸಲು ಕಾರಣ ಕೊಡಿ’ ಎಂದೂ ಅವರು ಒತ್ತಾಯಿಸಿದರು.

‘ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಜಿಲ್ಲೆಯಲ್ಲಿ ಇದ್ದರೂ ಇದರ ಸ್ಕಿಲ್‌ ಎಕ್ಸ್‌ಲೆನ್ಸ್‌ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಉದ್ದೇಶವೇನು? ಇದಕ್ಕೆ ಹೆಚ್ಚುವರಿಯಾಗಿ ₹ 100 ಕೋಟಿ ವೆಚ್ಚವಾಗುತ್ತದೆ. ವಿಶ್ವವಿದ್ಯಾಲಯ ಒಂದೆಡೆಯಾದರೆ, ಅದರ ಸ್ಕಿಲ್‌ ಎಕ್ಸ್‌ಲೆನ್ಸ್‌ ಕೇಂದ್ರ ಇನ್ನೊಂದು ದಿಕ್ಕಿಗೆ ಇರುವುದು ಯಾವ ಲೆಕ್ಕಾಚಾರ? ಸೊಲ್ಲಾಪುರ– ಕಲಬುರ್ಗಿ– ಶಮ್ಶಾಬಾದ್‌ ರಾಷ್ಟ್ರೀಯ ಹೆದ್ದಾರಿ ಹಾಗೂ ಲಾತೂರ್‌– ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಗಳು ಯುಪಿಎ ಸರ್ಕಾರದ ಅವಧಿಯಲ್ಲಿ ಮಂಜೂರಾದವು. ಅವುಗಳನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಕಲ್ಯಾಣ ಕರ್ನಾಟಕ ಭಾಗ ಈ ರಾಜ್ಯದಲ್ಲಿಯೇ ಇದೆ ಎಂಬ ಅರಿವಾದರೂ ಸರ್ಕಾರಕ್ಕೆ ಇದೆಯೇ?’ ಎಂದು ಬಿ.ಆರ್‌. ಪಾಟೀಲ ಆಕ್ರೋಶ ಹೊರಹಾಕಿದರು.

‘ಈ ಎಲ್ಲ ಕ್ರಮಗಳ ವಿರುದ್ಧ ಈ ಭಾಗದ ಎಲ್ಲ ಸಂಸದರೇ ಮುಂದೆ ಬಂದು ಪ್ರತಿಭಟಿಸಬೇಕು. ಇಲ್ಲದಿದ್ದರೆ ನಾವು ಸಂಸದರ ಮನೆಗಳ ಮುಂದೆ ಧರಣಿ ನಡೆಸಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.

ಚಿಂತಕ ಪ್ರೊ.ಆರ್‌.ಕೆ. ಹುಡಗಿ, ಶೌಕತ್‌ಅಲಿ ಆಲೂರ, ದತ್ತಾತ್ರೇಯ ಇಕ್ಕಳಕಿ, ಗಣೇಶ ಪಾಟೀಲ ಇದ್ದರು.

26ರಂದು ದುಂಡು ಮೇಜಿನ ಸಭೆ

‘ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯುವ ಬಗ್ಗೆ ಚರ್ಚಿಸಲು ಮಾರ್ಚ್‌ 26ರಂದು ಈ ಭಾಗದ ಸಮಾನ ಮನಸ್ಕರ, ವಿವಿಧ ಸಂಘಟನೆಗಳ, ಧಾರ್ಮಿಕ ಮುಖಂಡರ ಹಾಗೂ ಪಕ್ಷಗಳ ದುಂಡು ಮೇಜಿನ ಸಭೆ ಕರೆಯಲಾಗುವುದು’ ಎಂದು ಬಿ.ಆರ್‌. ಪಾಟೀಲ ತಿಳಿಸಿದರು.

‘ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು. 371ಜೆ ಪಡೆಯುವಾಗ ನಡೆಸಿದ ಹೋರಾಟದ ಮಾದರಿಯಲ್ಲೇ ಮತ್ತೊಂದು ಹೋರಾಟ ರೂಪಿಸಲಾಗುವುದು’ ಎಂದರು.

‘ಅಲ್ಲದೇ ಏಪ್ರಿಲ್‌ ಮೊದಲ ವಾರದಲ್ಲಿ ಸರ್ವ ಪಕ್ಷಗಳ, ಸರ್ವ ಧರ್ಮಗಳ, ವೈದ್ಯರು, ವಕೀಲರು, ಉದ್ಯಮಿಗಳು, ನೌಕರರು ಸೇರಿದಂತೆ ಎಲ್ಲ ವರ್ಗಗಳ ಮುಖಂಡರ ಸಭೆ ಕರೆಯಲಾಗುವುದು. ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಂಸದ ಡಾ.ಉಮೇಶ ಜಾಧವ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರನ್ನೂ ಆಹ್ವಾನಿಸಲಾಗುವುದು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT