ಆರೋಗ್ಯ ಕೇಂದ್ರದಲ್ಲೇ ಇದೆ ಪ್ರೌಢಶಾಲೆ!

ಕಲಬುರ್ಗಿ: ತಾಲ್ಲೂಕಿನ ಫಿರೋಜಾ ಬಾದ್ ಗ್ರಾಮದಲ್ಲಿ ಪ‍್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಕಟ್ಟಿದ ಕಟ್ಟಡದಲ್ಲೇ ಪ್ರೌಢಶಾಲೆ ನಡೆಸಲಾಗುತ್ತಿದೆ! ಕನ್ನಡ ಹಾಗೂ ಉರ್ದು ಮಾಧ್ಯಮ ಸೇರಿ ಒಟ್ಟು 120 ಮಕ್ಕಳು, 12 ಶಿಕ್ಷಕ ಸಿಬ್ಬಂದಿ ಇದ್ದು, ಶಾಲೆ ಶುರುವಾದರೆ ಇವರಿಗೆಲ್ಲ ಈ ಪಾಳು ಕಟ್ಟಡವೇ ದಿಕ್ಕು..!
ನಿಜಾಮ್‌ಶಾಹಿ ಆಡಳಿತದ ಕೇಂದ್ರನೆಲೆಯಾಗಿದ್ದ ಈ ದೊಡ್ಡ ಗ್ರಾಮವು ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಆದರೆ, ಶೈಕ್ಷಣಿಕ ಸೌಕರ್ಯಗಳ ವಿಚಾರದಲ್ಲಿ ಅಷ್ಟಕ್ಕಷ್ಟೇ. ಪ್ರೌಢಶಾಲೆ ಮಕ್ಕಳಿಗಾಗಿ ಇದೂವರೆಗೆ ಸ್ವಂತ ಕಟ್ಟಡವೇ ಇಲ್ಲ. ಕೊರೊನಾ ಕಾರಣದಿಂದ ಈಗ ತರಗತಿಗಳು ನಡೆಯುತ್ತಿಲ್ಲ. ಆದರೆ, ಇಷ್ಟು ವರ್ಷ ಮಕ್ಕಳು, ಶಿಕ್ಷಕರು ಈ ಅವ್ಯವಸ್ಥೆಯ ಕುಲುಮೆಯಲ್ಲೇ ನಲುಗಿದ್ದಾರೆ.
1ರಿಂದ 8ನೇ ತರಗತಿ ಯವರೆಗೆ ಗ್ರಾಮದೊಳಗೆ ಸರ್ಕಾರಿ ಶಾಲೆ ಇದೆ. 9 ಹಾಗೂ 10ನೇ ತರಗತಿಗೆ ಹೋಗ ಬೇಕೆಂದರೆ ಊರಿ ನಿಂದ ಮೂರು ಕಿ.ಮೀ ದೂರದ ಪುನರ್ವಸತಿ ಕೇಂದ್ರಕ್ಕೆ ಹೋಗಬೇಕು. ಅಲ್ಲಿರುವುದು ಕೂಡ ಸ್ವಂತ ಕಟ್ಟಡವಲ್ಲ; ಪಾಳುಬಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲೇ ಕಲಿಕೆ ಸಾಗಿದೆ.
‘2010ರಲ್ಲಿ ಭೀಮಾ ಸಂತ್ರಸ್ತರಿಗಾಗಿ ಈ ಪುನರ್ವಸತಿ ಪ್ರದೇಶ ನಿರ್ಮಿಸಲಾಗಿದೆ. ಆ ಸಂದರ್ಭದಲ್ಲಿ ಊರಿನ ವ್ಯಕ್ತಿಯೊಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಎಕರೆ ಜಮೀನು ದಾನ ಮಾಡಿದ್ದರು. ಮೂರು ಕೊಠಡಿಗಳ ಒಂದು ಕಟ್ಟಡ ಸಿದ್ಧವಾದ ಮೇಲೆ, ಈ ಜಮೀನು ದಾನದ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಲ್ಲಿಗೆ ಆರೋಗ್ಯ ಕೇಂದ್ರದ ಕೆಲಸ ನಿಂತುಹೋಯಿತು’ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಸಂಖ್ಯೆ ಹೆಚ್ಚಾದಾಗ, ಪ್ರೌಢಶಾಲೆ ಮಕ್ಕಳಿಗೆ ಬೇರೆ ಕಟ್ಟಡ ಅನಿವಾರ್ಯವಾಯಿತು. ಆಗಿನಿಂದ ಪಾಳುಬಿದ್ದ ಈ ಕಟ್ಟಡದಲ್ಲೇ ಶಾಲೆ ನಡೆಸಲು ಆರಂಭಿಸಲಾಗಿದೆ.
‘ಇಲ್ಲ’ಗಳ ಆಗರ: ಕಟ್ಟಡದ ಮಧ್ಯದ ಎರಡು ಗೋಡೆಗಳನ್ನು ಒಡೆದು ನಾಲ್ಕು ಕೊಠಡಿ ಮಾಡಲಾಗಿದೆ. ಕೇವಲ 40 ಮಕ್ಕಳು ಕುಳಿತುಕೊಳ್ಳಬಹುದಾದ ಜಾಗದಲ್ಲಿ 120 ಮಕ್ಕಳು ಕಲಿಯಬೇಕು. ಸಣ್ಣ ಸ್ಟೋರ್‌ರೂಮ್ ಅನ್ನೇ ಶಿಕ್ಷಕರಿಗಾಗಿ ಸ್ಟಾಫ್‌ರೂಮ್ ಮಾಡಲಾಗಿದೆ. ಪಾಠ ನಡೆಯುವ ಕೋಣೆಯ ಪಕ್ಕದಲ್ಲೇ ಮುಖ್ಯಶಿಕ್ಷಕರಿಗೆ ಕುರ್ಚಿ, ಟೇಬಲ್ ಇಡಲಾಗಿದೆ
ಅಷ್ಟೇ. ಎಲ್ಲ ಕಡೆ ನೆಲದ ಪರ್ಸಿ, ಗೋಡೆಗಳ ಸಿಮೆಂಟ್ ಕಿತ್ತುಹೋಗಿದೆ. ಸುತ್ತಲೂ ಮುಳ್ಳಿನಪೊದೆ ಬೆಳೆದುಕೊಂಡಿದೆ.
ನಾಲ್ವರು ಶಿಕ್ಷಕರು, ಎಂಟು ಮಂದಿ ಶಿಕ್ಷಕಿರು, ಬಾಲಕರು– ಬಾಲಕಿಯರು ಸೇರಿ ಯಾರಿಗೂ ಶೌಚಾಲಯ ಇಲ್ಲ. ಕುಡಿಯುವ ನೀರಿಲ್ಲ. ಸುರಕ್ಷತೆಗೆ ಕಾಂಪೌಂಡ್ ಇಲ್ಲ. ಆಟದ ಮೈದಾನವಿಲ್ಲ. ಇನ್ನೂ ಅಚ್ಚರಿಯೆಂದರೆ, ವಿದ್ಯುತ್ ಸಂಪರ್ಕವೇ ಇಲ್ಲ. ಹೀಗಾಗಿ, ಫ್ಯಾನ್‌ಗಳು ಇದ್ದೂ ಇಲ್ಲದಂತಾಗಿದೆ. ಬೇಸಿಗೆಯಲ್ಲಿ ಮಕ್ಕಳು, ಶಿಕ್ಷಕರ ಸಂಕಷ್ಟ ಹೇಳತೀರದು.
ಸದ್ಯ ಆನ್‌ಲೈನ್ ತರಗತಿಗಳು ನಡೆದ ಕಾರಣ ಶಿಕ್ಷಕರು ಶಾಲೆಗೆ ಬರುತ್ತಿದ್ದು, ಈ ಪಾಳುಕಟ್ಟಡದಲ್ಲೇ ದಿನ ದೂಡುತ್ತಿದ್ದಾರೆ.
ಬಾಕ್ಸ್–1
‘₹ 1.25 ಕೋಟಿ ಮಂಜೂರು’
ಫಿರೋಜಾಬಾದ್ ಪ್ರೌಢಶಾಲೆ ಕಟ್ಟಡಕ್ಕೆ ₹ 1.25 ಕೋಟಿ ಅನುದಾನ ಮಂಜೂ ರಾಗಿದೆ. ಆದರೆ, ಗ್ರಾಮದಲ್ಲಿ ಎಲ್ಲಿಯೂ ಸರ್ಕಾರಿ ಜಾಗವಿಲ್ಲ. ಯಾರೂ ಜಾಗ ದಾನ ಕೊಡದ ಕಾರಣ ಕಟ್ಟಡ ನನೆಗುದಿಗೆ ಬಿದ್ದಿರುವುದಾಗಿ ಹಿಂದಿನ ಕ್ಷೇತ್ರಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ ಎಂಬುದು ಈ ಶಾಲೆಯ ಮುಖ್ಯಶಿಕ್ಷಕ ಅಲ್ಲಾವುದ್ದೀನ್ ಅವರ ಹೇಳಿಕೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ಅಶೋಕ ಭಜಂತ್ರಿ, ‘ಈ ಶಾಲೆಯ ತುರ್ತು ಅಗತ್ಯಗಳ ಬಗ್ಗೆ ನಿಗಾ ವಹಿಸಲು ಸೂಚಿಸುತ್ತೇನೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.