ಗುರುವಾರ , ಅಕ್ಟೋಬರ್ 22, 2020
21 °C
ವರುಣನ ಆರ್ಭಟಕ್ಕೆ ಕೊಚ್ಚಿಹೋದ ಬೆಳೆ, ರಸ್ತೆ, ಸೇತುವೆಗಳು, ತತ್ತರಿಸಿದ ಸೇಡಂ ತಾಲ್ಲೂಕಿನ ಜನ

ತಗ್ಗದ ಪ್ರವಾಹ: ಜನರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ತಾಲ್ಲೂಕಿನಲ್ಲಿ ಕಾಗಿಣಾ ನದಿ ಪ್ರವಾಹದ ಆರ್ಭಟ ಮುಂದುವರಿದ್ದು, ನದಿದಂಡೆಯ ಮೇಲಿರುವ ಗ್ರಾಮಗಳ ಜನ ಇನ್ನೂ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಕಾಗಿಣಾ ನದಿದಂಡೆಯ ತೆಲ್ಕೂರ, ಹೆಡ್ಡಳ್ಳಿ, ಬಿಬ್ಬಳ್ಳಿ, ಸಟಪಟನಹಳ್ಳಿ, ಮಳಖೇಡ, ಸಂಗಾವಿ(ಎಂ), ಮೀನಹಾಬಾಳ ಗ್ರಾಮಗಳಲ್ಲಿ ನದಿ ನೀರು ಬುಧವಾರ ರಾತ್ರಿಯೇ ನುಗ್ಗಿತ್ತು. ಗುರುವಾರ ಕೂಡ ನೀರಿನ ಪ್ರಮಾಣ ತಗ್ಗದ ಕಾರಣ ಜನ ಕಂಗಾಲಾಗಿದ್ದಾರೆ. ಗುರುವಾರ ಇಡೀ ದಿನ ಮನೆಯ ಸ್ವಚ್ಛತೆ ಹಾಗೂ ಧವಸ ಧಾನ್ಯಗಳ ರಕ್ಷಣೆ ಮಾಡುವುದರಲ್ಲಿಯೇ ಹರಸಾಹಸ ಪಡುವಂತಾಯಿತು.

ಕಾಗಿಣಾ ನದಿ ದಂಡೆಯ ಮೇಲಿರುವ ಬೆಳೆಗಳು ಕೊಚ್ಚಿಹೋಗಿದ್ದು, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ನೀರು ನುಗ್ಗಿದ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಕಗ್ಗತ್ತಲಿನ ಮಧ್ಯೆಯೇ ಕಾಲ ಕಳೆಯುವಂತಾಗಿದೆ. ಒಂದೆಡೆ ನೀರಿನ ಆರ್ಭಟಕ್ಕೆ ಭಯಪಡುವಂತಾದರೆ, ಮತ್ತೊಂದೆಡೆ ವಿದ್ಯುತ್ ಕಡಿತದಿಂದ ಭಯ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

37 ಜನರ ರಕ್ಷಣೆ: ತೆಲ್ಕೂರ ಗ್ರಾಮದ ಹೊರವಲಯದಲ್ಲಿ ಸಿಲುಕಿದ್ದ 30ಕ್ಕೂ ಅಧಿಕ ಮೀನುಗಾರು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ್ದ 7 ಜನರನ್ನು ಎನ್‌ಡಿಆರ್‌ಎಫ್ ತಂಡ ಗುರುವಾರ ಬೆಳಗಿನ ಜಾವ ರಕ್ಷಿಸಿದೆ. ಲಾಹೋಡ್ ಸೇತುವೆ ಮೇಲಿಂದ ನದಿ ನೀರು ಉಕ್ಕಿ ಹರಿದಿರುವುದರಿಂದ ರಸ್ತೆ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

ಎರಡನೇ ದಿನವೂ ಮಳಖೇಡ ಸೇತುವೆ ಬಂದ್: ಬೆಣ್ಣೆತೊರಾ ಮತ್ತು ಚಂದ್ರಂಪಳ್ಳಿ ಸೇರಿದಂತೆ ಮೇಲ್ಗಡೆಯಿಂದ ಕಾಗಿಣಾ ನದಿಗೆ ನೀರು ಬಿಡುತ್ತಿರುವುದರಿಂದ ಕಾಗಿಣಾ ನದಿ ನೀರಿನ ಪ್ರವಾಹ ಹೆಚ್ಚಿದ್ದು, ಎರಡನೇ ದಿನವೂ ಜಿಲ್ಲಾ ಕೇಂದ್ರದಿಂದ ಸೇಡಂ ಸಂಪರ್ಕ ಕಡಿತೊಂಡಿತ್ತು.

ಚಿತ್ತಾಪುರ, ರಾವೂರ, ಮಾರ್ಗವೂ ಸಹ ಬಂದ್ ಆಗಿದೆ. ಇದರಿಂದಾಗಿ ಜಿಲ್ಲಾ ಕೇಂದ್ರಕ್ಕೆ ತೆರಳು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು. ಮಳಖೇಡ ಸೇತುವೆ ಬಂದ್ ಆಗಿದ್ದರಿಂದ ಮಳಖೇಡ ರಸ್ತೆ ಮೇಲೆ 2 ಕಿ.ಮೀ.ಗೂ ಅಧಿಕ ಸರತಿ ಸಾಲಿನಲ್ಲಿ ಲಾರಿಗಳು ನಿಂತಿದ್ದವು. ಸಾಯಂಕಾಲ ಮಳಖೇಡ ಸಮೀಪದ ಸೇತುವೆ ಮೇಲಿಂದ ನೀರಿನ ಮಟ್ಟ ಕಡಿಮೆಯಾದ ಮೇಲೆ ಚಿತ್ತಾಪುರಕ್ಕೆ ಲಾರಿಗಳು ಸಂಚರಿಸಿದವು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು