ಗುರುವಾರ , ಸೆಪ್ಟೆಂಬರ್ 23, 2021
22 °C

‘ಡೋಂಟ್‌ ವರಿ ದೊಸ್ತ್‌, ನಾನದೇನಿ...’

ನಿರೂಪಣೆ: ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

‘ಡೋಂಟ್‌ ವರಿಲೇ ದೋಸ್ತ್‌, ನಾನದೇನಿ. ನಿಂಗ್‌ ಏನೂ ಆಗಾಕ್‌ ಬಿಡುದಿಲ್ಲ...’

ನನಗೆ ಕೋವಿಡ್‌ ಪಾಸಿಟಿವ್‌ ಎಂದು ಗೊತ್ತಾದಾಗ ಸ್ನೇಹಿತ ಪ್ರಭವ್‌ ಪಟ್ಟಣಕರ್‌ ಹೇಳಿದ ಮೊದಲ ಮಾತಿದು. ಆತನ ವಿಶ್ವಾಸಾರ್ಹ ಮಾತು ಕೇಳಿ ನನಗೆ ಭಯ ಕಡಿಮೆಯಾಯಿತು.

ಕೋವಿಡ್‌ ಎರಡನೇ ನಮ್ಮ ಪಾಡಿಗೆ ಹೆಚ್ಚು ಸಂಕಷ್ಟ ತಂದೊಡ್ಡಿತು. ಸಣ್ಣ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡಿರುವ ನನಗೆ ಮೊದಲನೆ ಅಲೆಯ ಸಂದರ್ಭದಲ್ಲೇ ಸಾಕಷ್ಟು ನಷ್ಟವಾಗಿತ್ತು. ಲಾಕ್‌ಡೌನ್‌ ತೆರವಾದರೂ ಸರಿಯಾದ ವ್ಯಾಪಾರವಿಲ್ಲ. ಎರಡನೇ ಅಲೆಗೆ ಮತ್ತೆ ಲಾಕ್‌ಡೌನ್‌ ಘೋಷಣೆಯಾದಾಗ ನಾನು ಜರ್ಜರಿತನಾದೆ. ಇದರ ಮಧ್ಯೆಯೇ ನನಗೂ ಕೊರೊನಾ ವೈರಾಣು ಅಂಟಿಕೊಂಡಿದ್ದರಿಂದ ದಿಕ್ಕೇ ತೋಚದಂತಾಯಿತು. ಮನೆಯ ಹಿರಿಯರು, ಕುಟುಂಬದವರು ತುಂಬ ಚಿಂತೆಗೀಡಾದರು.

ಸರ್ಕಾರಿ ಆಸ್ಪತ್ರೆ ಸೇರುವುದಕ್ಕೆ ಬೆಡ್‌ಗಳ ಕೊರತೆ ಕಾಡುತ್ತಿತ್ತು. ಖಾಸಗಿ ಆಸ್ಪತ್ರೆ ಸೇರಿ ವೆಚ್ಚ ಭರಿಸುವಷ್ಟು ಶಕ್ತಿ ನನಗಿರಲಿಲ್ಲ. ಹಗಲು– ರಾತ್ರಿ ಪ್ರಾಣಭಯದಲ್ಲೇ ಕಳೆಯುತ್ತಿದ್ದೆ. ಆ ಕ್ಷಣಕ್ಕೆ ನನ್ನ ನೆರವಿಗೆ ಬಂದಿದ್ದು ನನ್ನ ಸ್ನೇಹಿತ ಪ್ರಭು ಪಟ್ಟಣ.

ನನಗೆ ಕೋವಿಡ್‌ ಆಗಿದೆ ಎಂದಾಕ್ಷಣ ನೇರವಾಗಿ ಮನೆಗೆ ಬಂದ ಪ್ರಭು ನಾನು ಸುರಕ್ಷಿತವಾಗಿ ಇರುವಂತೆ ನೋಡಿಕೊಂಡ. ಮನೆಯರಿಗೆ ಅಂಟಿಕೊಳ್ಳದಂತೆ ನಾವಿಬ್ಬರೇ ಹೇಗೆ ಇದನ್ನು ನಿಭಾಯಿಸಬೇಕು ಎಂದು ಗೆಳೆಯನೇ ನಿರ್ಧಸಿದ. ಅಲ್ಲಿಲ್ಲಿ ಚರ್ಚೆ ಮಾಡಿ ಕೊನೆಗೆ ಕೋವಿಡ್‌ ಆಸ್ಪತ್ರೆಗೆ ಸೇರಿಸಿದ. ವಾರ್ಡಿನಲ್ಲಿ ಇದ್ದಷ್ಟೂ ದಿನ ಊಟ, ತಿಂಡಿಯ ಚೌಕಾಶಿ ಮಾಡಿದ. ನಾನು ಹೆದರಿಕೊಂಡಾಗ ಸಲುಗೆಯಿಂದಲೇ ಬೈದು ಧೈರ್ಯ ಹೇಳಿದ.

ನಾನು ಗುಣಮುಖವಾದ ಮೇಲೂ ಹಣಕಾಸಿನ ನೆರವು ನೀಡಿ ಬೆಂಬಲಕ್ಕೆ ನಿಂತ. ನಷ್ಟದಿಂದ ಚಿಂತೆಗೀಡಾಗಿದ್ದ ನನ್ನಲ್ಲಿ ಮತ್ತೆ ಬದುಕುವ ಹಂಬಲ ಮೂಡಿಸಿದ್ದು ನನ್ನ ದೋಸ್ತ.

–ಸಂದೇಶ ಕಲಬುರ್ಗಿ, ವಿದ್ಯಾನಗರ ನಿವಾಸಿ

 

ಗೆಳೆಯರ ಧೈರ್ಯದಿಂದ ಕೋವಿಡ್‌ ಗೆದ್ದೆ

ಸ್ನೇಹಕ್ಕಿಂತ ಗಟ್ಟಿಯಾದ ಬಂಧ ಇನ್ನೊಂದಿಲ್ಲ ಎಂಬುದನ್ನು ನನ್ನ ಗೆಳೆಯರು ನಿರೂಪಿಸಿದರು. ಕೋವಿಡ್‌ ಆದಾಗ ಒಬ್ಬರಿಗೊಬ್ಬರು ಫೋನ್‌ನಲ್ಲಿ ಮಾತನಾಡುವುದಕ್ಕೂ ಹಿಂಜರಿಯುವ ಇಂಥ ದಿನಗಳಲ್ಲಿ ನನ್ನ ಜತೆಗೆ ಇದ್ದವರು ನನ್ನ ಗೆಳೆಯರು ಮಾತ್ರ.

ಸೋಂಕಿತ ಗೆಳೆಯನೊಬ್ಬನ ನೇರ ಸಂಪರ್ಕಕ್ಕೆ ಬಂದ ಕಾರಣ ನಾನು ಸ್ವಯಂ ಕ್ವಾರಂಟೈನ್‌  ಆಗಿದ್ದೆ. ಐದು ದಿನದ ಬಳಿಕ ನನಗೂ ಪಾಸಿಟಿವ್‌ ಇರುವುದು ದೃಢಪಟ್ಟಿತು. ಗೆಳಯರು ಓಡಿ ಬಂದು ನನಗೆ ಧೈರ್ಯ ತುಂಬಿದರು.

ಜಿಮ್ಸ್‌ ಆಸ್ಪತ್ರೆಯಲ್ಲಿ ಒಂದು ಬೆಡ್‌ ವ್ಯವಸ್ಥೆ ಮಾಡಿ ದಾಖಲಿಸಿದರು. ನಾನು ಪೂರ್ಣ ಗುಣಮುಖ ಆಗುವವರೆಗೆ ಗೆಳೆಯ ವೀರೇಶಗೌಡ ಪಾಟೀಲ ಮಧ್ಯಾಹ್ನ ಹಾಗೂ ರಾತ್ರಿ ನನ್ನ ಊಟದ ಜವಾಬ್ದಾರಿ ಹೊತ್ತುಕೊಂಡ. ಇನ್ನೊಬ್ಬ ಗೆಳೆಯ ಅಂಬರೀಶ ಪ್ರತಿ ದಿನ ತಹರೇವಾರು ತಿಂಡಿ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಸುವ ತಿನಿಸು ತಂದು ಕೊಟ್ಟ. ಶಂಭುಲಿಂಗ ಬಳಬಟ್ಟಿ ಮತ್ತು ಸಂಗಮೇಶ ಕೊಟಾಳೆ ನನ್ನ ಔಷಧೋಪಚಾರ, ಆಮ್ಲಜನಕದ ಪ್ರಮಾಣ, ರಕ್ತದೊತ್ತಡ ಮುಂತಾದವುಗಳ ಡಾಟಾ ಸಂಗ್ರಹಿಸಿ ಅಪಡೇಟ್‌ ಮಾಡುತ್ತಲೇ ಇದ್ದರು.

ನನಗೂ ನನ್ನ ಕುಟುಂಬ ವರ್ಗದವರಿಗೂ ಸಂಪರ್ಕ ಕೊಂಡಿಯಾಗಿ ನಿಂತಿದ್ದು ನನ್ನ ಗೆಳೆಯರು. ಇದರಿಂದ ಮನೆಯ ಹಿರಿಯರಲ್ಲಿ ಕೂಡ ತುಸು ಧೈರ್ಯ ಬಂತು. ನಾನು ಬೇಗ ಗುಣವಾಗುವುದಕ್ಕೆ ಬೇಕಾದ ಎಲ್ಲ ಸರ್ಕಸ್‌ ಮಾಡಿದರು. ಕೋವಿಡ್‌ನಂಥ ಸಂಕಷ್ಟದಲ್ಲೂ ಕೈಬಿಡದ ಗೆಳೆಯರಿಗೆ ಥ್ಯಾಂಕ್ಸ್‌ ಹೇಳಿದರೆ ಬಹಳ ಚಿಕ್ಕದಾಗುತ್ತದೆ. ಅವರು ಮಾಡಿದ್ದು ಸಹಾಯಲ್ಲ, ಉಪಕಾರವಲ್ಲ, ಜವಾಬ್ದಾರಿಯೂ ಅಲ್ಲ. ಕೇವಲ ಸ್ನೇಹ ಮಾತ್ರ ಎಲ್ಲ ಸಮಯದಲ್ಲೂ, ಎಲ್ಲದಕ್ಕೂ ಗಟ್ಟಿಯಾಗಿ ನಿಲ್ಲಬಲ್ಲದು.

–ಲಕ್ಷ್ಮಿಕಾಂತ ಜೋಳದ, ಖಾಸಗಿ ಉದ್ಯೋಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.