ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜಿಮ್ಸ್‌ ಆಸ್ಪತ್ರೆಯಲ್ಲೂ ‘ಓಮೈಕ್ರಾನ್‌’ ಲ್ಯಾಬ್‌

Last Updated 4 ಡಿಸೆಂಬರ್ 2021, 16:17 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೊರೊನಾ ವೈರಾಣು ಪತ್ತೆ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸಲಾಗಿದ್ದು, ‘ಓಮೈಕ್ರಾನ್‌’ ಪತ್ತೆಗೆ ಬೇಕಾದ ತಂತ್ರಜ್ಞಾನ ಅಳವಡಿಸಲಾಗಿದೆ. ರೂಪಾಂತರಿ ವೈರಾಣು ಪತ್ತೆ ಮಾಡುವ ಪರೀಕ್ಷೆ ಇನ್ನು ಎರಡು ವಾರಗಳಲ್ಲಿ ಆರಂಭವಾಗಲಿದೆ.

ಜಿನೋಮಾಫ್‌ ವೈರಾಣು ರೂಪಾಂತರಗೊಂಡು ಓಮೈಕ್ರಾನ್‌ ಆಗಿದೆ. ‘ಜಿನೋಮ್‌ ಸಿಕ್ವೆನ್ಸಿಂಗ್‌’ ಪರೀಕ್ಷೆಯ ಮೂಲಕ ಮಾತ್ರ ಇದನ್ನು ದೃಢಪಡಿಸಲು ಸಾಧ್ಯ. ಕಳೆದ ವಾರ ರಾಜ್ಯದ ಆರು ಕಡೆಗಳಲ್ಲ ಏಕಕಾಲಕ್ಕೆ ಜಿನೋಮ್‌ ಸಿಕ್ವೆನ್ಸಿಂಗ್‌ ಲ್ಯಾಬ್‌ ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದರಲ್ಲಿ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲೇ ಮೊದಲ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ಇದರ ತರಬೇತಿ ಪಡೆದ ಒಬ್ಬ ವಿಜ್ಞಾನಿ ಹಾಗೂ ಆರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‘ಸದ್ಯ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮಾತ್ರ ಜಿನೋಮ್‌ ಸಿಕ್ವೆನ್ಸಿಂಗ್‌ ಲ್ಯಾಬ್‌ ಕಾರ್ಯಾರಂಭ ಮಾಡಿದೆ. ಈ ಪ್ರಕರಣಗಳು ಹೆಚ್ಚುತ್ತ ಸಾಗಿದರೆ ಕಲಬುರಗಿಯಲ್ಲೇ ಎರಡನೆಯದಾಗಿ ಕಾರ್ಯಾರಂಭ ಮಾಡಲಿದೆ. ಅಲ್ಲಿಯವರೆಗೆ ಓಮೈಕ್ರಾನ್‌ ಪತ್ತೆಗೆ ಮಾದರಿಗಳನ್ನು ಬೆಂಗಳೂರಿಗೇ ಕಳುಹಿಸಲಾಗುವುದು’ ಎಂದು ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ‘‍ಪ್ರಜಾವಾಣಿ’ಗೆ ಮಾಹಿತಿ
ನೀಡಿದರು.

‘ಸದ್ಯ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ವೈರಾಣು ಈಗಲೂ ಪತ್ತೆಯಾಗುತ್ತಿದೆ. ಅದರಲ್ಲೂ ಲಕ್ಷಣಗಳು ಇಲ್ಲದವರೇ ಹೆಚ್ಚು. ಇದೂವರೆಗೆ ರೂಪಾಂತರಿಗಳಾದ ಡೆಲ್ಟಾ ಅಥವಾ ಓಮೈಕ್ರಾನ್‌ ಸೋಂಕಿನ ಲಕ್ಷಣಗಳು ಯಾರಲ್ಲೂ ಪತ್ತೆಯಾಗಿಲ್ಲ. ಒಂದು ವೇಳೆ ರೂಪಾಂತರಿ ಕಾಣಿಸಿಕೊಂಡರೆ ಜನ ಭಯಪಡಬೇಕಾಗಿಲ್ಲ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಜಿಮ್ಸ್‌ನಲ್ಲಿ ಇವೆ. ಬೆಡ್‌, ಆಕ್ಸಿಜನ್‌, ವೈದ್ಯರು, ಐಸೋಲೇಷನ್‌ ವಾರ್ಡ್‌ಗಳಿಗೂ ಸಮಸ್ಯೆ ಇಲ್ಲ. ಆದರೆ, ಈ ವೈರಾಣು ಅಷ್ಟು ಗಂಭೀರವಾಗಿ ಕಾಣಿಸಿಕೊಳ್ಳುವ ಸೂಚನೆಗಳು ಇನ್ನೂ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರ ನೀಡಿದ ನಿರ್ದೇಶನಗಳನ್ನು ಸದ್ಯಕ್ಕೆ ಪಾಲಿಸಲಾಗುತ್ತಿದೆ’ ಎನ್ನುವುದು ಅವರ ವಿವರ.

ಜಿಲ್ಲೆಯಲ್ಲಿ ಐದು ಕಡೆ ಕೊರೊನಾ ವೈರಾಣು ಪತ್ತೆ ಲ್ಯಾಬ್‌ಗಳಿವೆ. ಜಿಮ್ಸ್‌ನ ಲ್ಯಾಬ್‌ನಲೇ ದಿನಕ್ಕೆ 6,000 ಮಾದರಿಗಳನ್ನು ತಪಾಸಣೆ ಮಾಡಬಹುದು. ಆದರೆ, ಕೋವಿಡ್ ಲಕ್ಷಣಗಳು ಕಂಡುಬರುವುದು ಕಡಿಮೆಯಾಗಿದ್ದು, ದಿನಕ್ಕೆ 2,000 ಮಾದರಿ ತಪಾಸಣೆ ಮಾಡಲಾಗುತ್ತಿದೆ. ಇದರಲ್ಲಿ ಕಳೆದ ಎರಡು ವಾರಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಪಾಸಿಟಿವ್‌ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ ಎಂಬುದು ಪ್ರಯೋಗಾಲಯದ ಮಾಹಿತಿ.

ತಪಾಸಣೆ ಹೆಚ್ಚಳ: ‘ಓಮೈಕ್ರಾನ್‌ ಜಿಲ್ಲೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಗೆ ನಿರ್ದೇಶನ ಬಂದಿದೆ. ಈಗಾಗಲೇ ಇಂಥ ಪ್ರಕರಣಗಳು ನಮ್ಮಲ್ಲಿ ಇರಬಹುದೇ ಎಂದೂ ಪರಿಶೀಲಿಸಲಾಗುತ್ತಿದೆ. ಪ್ರತಿದಿನ ಲ್ಯಾಬ್‌ ಟೆಸ್ಟಿಂಗ್‌ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಜನ ಈಗಲೇ ಎಚ್ಚೆತ್ತುಕೊಳ್ಳಬೇಕು. ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಹೇಳಿದರು.

‘ಅಫಜಲಪುರ ಹಾಗೂ ಆಳಂದ ತಾಲ್ಲೂಕಿನ ಗಡಿ ಚೆಕ್‌ಪೋಸ್ಟ್‌ಗಳಲ್ಲೂ ಆರೋಗ್ಯ ಸಿಬ್ಬಂದಿ ನಿಯೋಜಿಸಿ ತಪಾಸಣೆ ತೀವ್ರಗೊಳಿಸಲಾಗಿದೆ. ಬೇರೆ ರಾಜ್ಯದಿಂದ ಬರುವವರು ಆರ್‌ಟಿಪಿಸಿಆರ್ ವರದಿ ನೀಡಬೇಕು ಅಥವಾ ಎರಡೂ ಲಸಿಕೆಗಳನ್ನು ಹಾಕಿಸಿಕೊಂಡ ಪ್ರಮಾಣ ಪತ್ರ ತೋರಿಸಬೇಕು. ಒಂದು ವೇಳೆ ಜ್ವರ ಅಥವಾ ಇತರೇ ಕೋವಿಡ್ ಲಕ್ಷಣಗಳು ಕಂಡುಬಂದರೆ ಇವೆರಡೂ ಪ್ರಮಾಣಪತ್ರ ಇದ್ದರೂ ಜಿಲ್ಲೆಗೆ ಪ್ರವೇಶ ನೀಡಲಾಗುವುದಿಲ್ಲ. ಸ್ಥಳದಿಂದಲೇ ಅವರನ್ನು ಹೆಚ್ಚಿನ ತಪಾಸಣೆಗೆ ಕಳುಹಿಸಲಾಗುತ್ತದೆ’ ಎಂದು ಅವರು ಹೇಳಿದರು.

ರೈಲ್ವೆ, ಬಸ್‌ ನಿಲ್ದಾಣದಲ್ಲಿ ಇನ್ನೂ ತಪಾಸಣೆ ಇಲ್ಲ: ಓಮೈಕ್ರಾನ್‌ ಕಾಣಿಸಿಕೊಂಡ ಬೆಂಗಳೂರಿನಿಂದ ಪ್ರತಿ ದಿನ ಅಪಾರ ಜನ ರೈಲು ಹಾಗೂ ಬಸ್‌ಗಳಲ್ಲಿ ನಗರದ ಕಡೆಗೆ ಬರುತ್ತಿದ್ದಾರೆ. ಗಡಿಗಳ ಮೂಲಕ ಬರುವವರನ್ನು ತಪಾಸಣೆ ಮಾಡುವಂತೆ ಇಲ್ಲಿ ಯಾವುದೇ ರೀತಿಯ ಕ್ರಮ ವಹಿಸಿಲ್ಲ. ಹೀಗಾಗಿ, ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳ ಹಲವು ಜನ ರೈಲು, ಬಸ್‌ಗಳಲ್ಲಿ ನಿರರ್ಗಳವಾಗಿ ಸಂಚರಿಸುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT