ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿ. ಕೋರ್ಸ್‌ ಆರಂಭಕ್ಕೆ ಜಿಮ್ಸ್‌ಗೆ ಅನುಮತಿ

24 ವಿದ್ಯಾರ್ಥಿಗಳು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಮಾಡಲು ಎಂಸಿಐ ಒಪ್ಪಿಗೆ
Last Updated 7 ಅಕ್ಟೋಬರ್ 2021, 15:53 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ವೈದ್ಯಕೀಯ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವೈದ್ಯಕೀಯ ಸ್ನಾತಕೋತ್ತರ (ಪಿ.ಜಿ) ಕೋರ್ಸುಗಳನ್ನು ಆರಂಭಿಸಲು ಅನುಮೋದನೆ ಸಿಕ್ಕಿದೆ. ಇದರಿಂದಾಗಿ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್‌ನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ.

ವಿವಿಧ ವಿಭಾಗಳಲ್ಲಿ 24 ವಿದ್ಯಾರ್ಥಿಗಳಿಗೆ ಪಿ.ಜಿ ಪ್ರವೇಶ ನೀಡಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮೋದನೆ ನೀಡಿದೆ. ಹೀಗಾಗಿ, ರಾಜ್ಯ ಸರ್ಕಾರವು ನೀಟ್ ಫಲಿತಾಂಶ ಆಧರಿಸಿ ಸೀಟುಗಳನ್ನು ಹಂಚಿಕೆ ಮಾಡಲಿದೆ ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದ್ದಾರೆ.

ಸೀಟುಗಳ ವಿವರ: ಜಿಮ್ಸ್‌ನಲ್ಲಿ ಜನರಲ್ ಮೆಡಿಸಿನ್ ವಿಭಾಗಕ್ಕೆ 5, ಜನರಲ್ ಸರ್ಜರಿ ವಿಭಾಗದಲ್ಲಿ 4, ಪಿಡಿಯಾಟ್ರಿಕ್ಸ್ ವಿಭಾಗಕ್ಕೆ 4, ಪೋರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ 3, ಅನಸ್ತೇಷಿಯಾ 4, ಕಮ್ಯುನಿಟಿ ಮೆಡಿಸಿನ್ ವಿಭಾಗದಲ್ಲಿ 4 ಸೇರಿದಂತೆ 24 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಎಂಸಿಐ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಕಟ್ಟಡ ಪರಿಶೀಲನೆಗೆ ತಜ್ಞರ ತಂಡ ಪರಿಶೀಲಿಸಲಿದೆ.

ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯು ಜನರಲ್ ಮೆಡಿಸಿನ್, ಸರ್ಜರಿಯಲ್ಲಿ ತಲಾ 11, ಎಂಎಸ್ ಒಬಿಜಿ, ಆರ್ಥೋಪೆಡಿಕ್ ಮತ್ತು ಎಂಡಿ– ಪಿಡಿಯಾಟ್ರಿಕ್ ವಿಭಾಗಕ್ಕೆ ತಲಾ 7, ಅನಸ್ತೇಷಿಯಾ ಮತ್ತು ಕಮ್ಯುನಿಟಿ ಮೆಡಿಷಿನ್ ಮತ್ತು ಪ್ಯಾಥಾಲಜಿ ವಿಭಾಗಕ್ಕೆ ತಲಾ 9, ಎಂ.ಎಸ್ ಆಪ್ತಮಾಲೋಜಿ ಮತ್ತು ಇಎನ್‌ಟಿ, ಫೋರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ತಲಾ 5 ಸೇರಿದಂತೆ 90 ಸೀಟುಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿತ್ತು.

ಜಿಮ್ಸ್‌ನಲ್ಲಿ ಈ ವರ್ಷದಿಂದಲೇ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಅನುಮತಿ ಸಿಕ್ಕಿದೆ. 24 ಸೀಟುಗಳು ಮಂಜೂರಾಗಿವೆ. 101 ಪ್ರಾಧ್ಯಾಪಕರಿದ್ದಾರೆ. ಭಾರತೀಯ ವೈದ್ಯಕೀಯ ಶಿಕ್ಷಣ ಮಂಡಳಿಯ ಮಾನದಂಡದಂತೆ ಅಗತ್ಯ ಸೌಲಭ್ಯಗಳಿವೆ. ಪ್ರವೇಶ ಪ್ರಕ್ರಿಯೆ ಕೂಡಲೇ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜನವರಿಯಲ್ಲಿ ಆರ್‌ಜಿಯುಎಚ್‌ಎಸ್‌ ಅನುಮತಿ: ಜಿಮ್ಸ್‌ನಲ್ಲಿ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ರಾಜೀವಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌)ವು ಕಳೆದ ಜನವರಿಯಲ್ಲಿ ಅನುಮತಿ ನೀಡಿತ್ತು. ಸಿಂಡಿಕೇಟ್‌ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಎಂಸಿಐ ಮಾನದಂಡಗಳ ಅನ್ವಯ ಕೋರ್ಸುಗಳನ್ನು ಆರಂಭಿಸುವ ಷರತ್ತಿಗೊಳಪಟ್ಟು ಒಪ್ಪಿಗೆ ನೀಡಲಾಗಿತ್ತು.

ಕೊರೊನಾದಿಂದಾಗಿ ಉಂಟಾಗಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಸರ್ಕಾರ ಜಿಮ್ಸ್ ವೈದ್ಯಕೀಯ ಕಾಲೇಜು ಸೇರಿ ಯಾವುದೇ ಕಾಲೇಜುಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‍ಗಳನ್ನು ಆರಂಭಿಸಲು ಅನುಮತಿ ನೀಡಿರಲಿಲ್ಲ. ಪಿ.ಜಿ. ಕೋರ್ಸ್ ಆರಂಭಿಸಲು ಇನ್ನಷ್ಟು ವೈದ್ಯಕೀಯ ಸಲಕರಣೆಗಳು ಮತ್ತು ಪ್ರಯೋಗಾಲಯಗಳನ್ನು ಆರಂಭಿಸಬೇಕಾಗುತ್ತದೆ. ಜತೆಗೆ ಹೆಚ್ಚುವರಿ ಪ್ರಾಧ್ಯಾಪಕರ ಅಗತ್ಯವಿರುತ್ತದೆ. ಇದಕ್ಕೆ ಹಣ ನೀಡಲು ಆಗುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ, ಜಿಮ್ಸ್‌ನಲ್ಲಿ ಪಿ.ಜಿ. ಕೋರ್ಸ್ ಆರಂಭಿಸಬೇಕು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ. ಉಮೇಶ ಜಾಧವ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT