ಮಂಗಳವಾರ, ಸೆಪ್ಟೆಂಬರ್ 27, 2022
27 °C
ವರ್ಷಗಳೇ ಕಳೆದರೂ ಆಗದ ಸ್ಥಳಾಂತರ ಪ್ರಕ್ರಿಯೆ; ಸರ್ಕಾರದಿಂದಲೂ ಸಿಗದ ಸ್ಪಂದನೆ

ಕಿರು ಮೃಗಾಲಯದ ಅಭಿವೃದ್ಧಿಗೆ ನಿರಾಸಕ್ತಿ

ಮಲ್ಲಪ್ಪ ಪಾರೇಗಾಂವ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಎಸ್‌.ಎಂ.ಪಂಡಿತ ರಂಗಮಂದಿರ ಹಿಂಬದಿಯಿರುವ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅತ್ತ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಇತ್ತ ಅದರ ಸ್ಥಳಾಂತರ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಒಟ್ಟಾರೆ ಅತಂತ್ರ ಸ್ಥಿತಿ ತಲೆದೋರಿದ್ದು, ಪ್ರಾಣಿಗಳನ್ನು ವೀಕ್ಷಿಸಲು ಬರುವ ಜನರ ಸಂಖ್ಯೆಯೂ ಕಡಿಮೆಯಾಗಿದೆ.

ಕಿರು ಮೃಗಾಲಯದಲ್ಲಿನ ಪ್ರಾಣಿಗಳು ಬೇಸಿಗೆಯ ಚುರುಗುಟ್ಟುವ ಬಿಸಿಲಿಗೆ ಒಂದು ರೀತಿಯ ಸಮಸ್ಯೆ ಅನುಭವಿಸಿದರೆ, ಮಳೆಗಾಲದಲ್ಲಿ ನುಗ್ಗುವ ಮಳೆ ನೀರಿನಿಂದ ತೊಂದರೆ ಎದುರಿಸುತ್ತಿವೆ. ನೀರು ಹೊರಹಾಕಲು ಸಾಧ್ಯವಾಗದೇ ಮತ್ತು ಪರಿಸ್ಥಿತಿ ನಿಭಾಯಿಸಲು ಆಗದೇ ಮೃಗಾಲಯದ ಸಿಬ್ಬಂದಿ ಅಸಹಾಯಕ ಸ್ಥಿತಿ ಎದುರಿಸುತ್ತಿದ್ದಾರೆ.

‘ಚಿತ್ತಾಪುರ ತಾಲ್ಲೂಕಿನ ಮಾಡಬೂಳಕ್ಕೆ ಹೇಗಿದ್ದರೂ ಸ್ಥಳಾಂತರ ಆಗಲಿದೆ. ಇನ್ನು ಏಕೆ ಅಭಿವೃದ್ಧಿ ಎಂಬ ಕಾರಣಕ್ಕೆ ಕಿರುಮೃಗಾಲಯದತ್ತ ನಿರ್ಲಕ್ಷ್ಯ ತೋರಲಾಗಿದೆಯೇ ಅಥವಾ ಸಮರ್ಪಕ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತಿಲ್ಲವೇ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಕಿರುಮೃಗಾಲಯಕ್ಕೆ ಬರುವ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಕಿರುಮೃಗಾಲಯದಲ್ಲಿ ಎಲ್ಲೆಡೆ ನೀರು ಆವರಿಸಿಕೊಂಡಿದ್ದು, ದುರ್ನಾತ ಬೀರುತ್ತಿದೆ. ಎಲ್ಲಿ ಬೇಕೆಂದಲ್ಲಿ ಕೆಸರು ವ್ಯಾಪಿಸಿದ್ದು, ಜನರಿಗೆ ಓಡಾಡಲು ಕಷ್ಟವಾಗುತ್ತಿದೆ. ಇಡೀ ಆವರಣದ ಸ್ವಚ್ಛತಾ ಕಾರ್ಯವೂ ಸಹ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಅಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗಟ್ಟಿದೆ.

‘ವಿಶಾಲ ಆವರಣ ಹೊಂದಿರುವ ಕಿರು ಮೃಗಾಲಯವನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿ ಪಡಿಸಲು ಅವಕಾಶವಿದೆ. ಆದರೆ, ನಿರಾಸಕ್ತಿ ಮತ್ತು ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ 80ಕ್ಕೂ ಹೆಚ್ಚು ಪ್ರಾಣಿಗಳಿವೆ ಮತ್ತು ಸಾಕಷ್ಟು ಜನರು ಬರುತ್ತಾರೆ. ಆದರೆ, ಸೌಕರ್ಯಗಳ ತೀವ್ರ ಕೊರತೆಯಿದೆ’ ಎಂದು ಕಾಲೇಜು ವಿದ್ಯಾರ್ಥಿ ಅಮಿತ್ ಪಾಟೀಲ ತಿಳಿಸಿದರು.

‘ಪ್ರಾಣಿಗಳನ್ನು ನೋಡಲು ಮಕ್ಕಳು ಸೇರಿದಂತೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಇಲ್ಲಿ ಕೂರಲು ಸರಿಯಾದ ವ್ಯವಸ್ಥೆಯಿಲ್ಲ. ಕುಡಿಯುವ ನೀರು ಸರಿಯಾಗಿ ಸಿಗುವುದಿಲ್ಲ. ಪ್ರಾಣಿಗಳ ಕುರಿತು ಮಾಹಿತಿ ನೀಡುವಂತಹ ಫಲಕಗಳು ಹಳತಾಗಿವೆ. ಇದು ಕಿರುಮೃಗಾಲಯದ ದುಸ್ಥಿತಿಯಲ್ಲದೇ ಮತ್ತೇನೂ ಅಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕುಸಿದ ಆದಾಯ : ‘ಕೋವಿಡ್‌ ದಿನಗಳಿಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆಗ ತಿಂಗಳಿಗೆ ₹ 1.5 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಿರುಮೃಗಾಲಯಕ್ಕೆ ಬರುವವರೇ ಇಲ್ಲದಂತಾಗಿದೆ. ಹೀಗಾಗಿ ಆದಾಯ ₹ 1 ಲಕ್ಷಕ್ಕೆ ಕಡಿಮೆಯಾಗಿದೆ’ ಎಂದು ಕಿರು ಮೃಗಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ ಪ್ರಮಾಣ ಕಡಿಮೆಯಾದ ಬಳಿಕ ಆದಾಯ ವೃದ್ಧಿಯಾಗುವ ನಿರೀಕ್ಷೆ ಇತ್ತು. ಆದರೆ, ಅದು ನೆರವೇರಲಿಲ್ಲ. ಹೀಗಾಗಿ ಇರುವ ಸಂಪನ್ಮೂಲ ಮತ್ತು ಸೌಲಭ್ಯಗಳ ಆಧಾರದ ಮೇಲೆ ಕಿರು ಮೃಗಾಲಯ ನಿರ್ವಹಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಪುಟಾಣಿ ರೈಲು ಸ್ಥಗಿತ : ‘ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಇದ್ದಂತೆ ಇಲ್ಲಿಯೂ ಕೂಡ ಪುಟಾಣಿ ರೈಲು ಇರುವುದು ಕಂಡು ಖುಷಿಯಾಗಿತ್ತು. ಆದರೆ, ಅದು ಸಂಚರಿಸದೇ ಸ್ಥಗಿತಗೊಂಡಿರುವುದು ತಿಳಿದು ತುಂಬಾ ಬೇಸರವಾಯಿತು. ಮಕ್ಕಳಿಗೆ ಪ್ರಾಣಿಗಳನ್ನು ತೋರಿಸಿ, ರೈಲಿನಲ್ಲಿ ಪ್ರಯಾಣಿಸುವ ಆಸೆಯಿತ್ತು. ಆದರೆ, ಅದು ಈಡೇರುತ್ತಿಲ್ಲ’ ಎಂದು ಮಕ್ಕಳ ಪೋಷಕರೊಬ್ಬರು ತಿಳಿಸಿದರು.

‘ಪುಟಾಣಿ ರೈಲು 4 ವರ್ಷಗಳ  ಹಿಂದೆಯೇ ಓಡಾಟ ನಿಲ್ಲಿಸಿದೆ. ಅದು ಡೀಸೆಲ್‌ ಎಂಜಿನ್‌ ಆಗಿದ್ದರಿಂದ ಹೆಚ್ಚು ಶಬ್ದ ಹಾಗೂ ಹೊಗೆಯನ್ನು ಉಗುಳುತ್ತದೆ. 2018ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಕೇಂದ್ರ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಪುಟಾಣಿ ರೈಲನ್ನು ಸ್ಥಗಿತಗೊಳಿಸಲು ಸೂಚಿಸಿದ್ದರು’ ಎಂದು ವಲಯ ಅರಣ್ಯಾಧಿಕಾರಿ ಭೀಮರಾಯ ಶಿಳ್ಳೆಕ್ಯಾತ ತಿಳಿಸಿದರು.

‘ಪ್ರಾಣಿಗಳ ಮತ್ತು ಪರಿಸರದ ಹಿತದೃಷ್ಟಿಯಿಂದ ಅಧಿಕಾರಿಗಳು ವಿದ್ಯುತ್‌ ಚಾಲಿತ ಅಥವಾ ಶಬ್ದ ರಹಿತ ಎಂಜಿನ್‌ ಅಳವಡಿಸಲು ಸೂಚಿಸಿದ್ದರು. ಇದರ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಹೊಸ ಎಂಜಿನ್‌ ಅಳವಡಿಸಿ, ರೈಲು ಓಡಾಟ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಕೋಟ್‌ಗಳು

ಮೃಗಾಲಯದ ಪ್ರಚಾರಕ್ಕಾಗಿ ವನ್ಯಾಪ್ರಾಣಿ ಸಪ್ತಾಹದಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಶಾಲೆಗಳಿಗೂ ಭೇಟಿ ನೀಡಿ, ಮಕ್ಕಳಿಗೆ ಕಿರು ಮೃಗಾಲಯದ ಮಾಹಿತಿ ನೀಡಲಾಗುವುದು.
ಭೀಮರಾಯ ಶಿಳ್ಳೇಕ್ಯಾತ, ವಲಯ ಅರಣ್ಯಾಧಿಕಾರಿ

 

ನಾವು ಸಮೀಪದ ಕಾಲೇಜಿನಲ್ಲಿ ಓದುತ್ತಿದ್ದೇವೆ. ಗೆಳೆಯರೆಲ್ಲರೂ ಕಿರುಮೃಗಾಲಯಕ್ಕೆ ಆಗಾಗ ಭೇಟಿ ನೀಡುತ್ತೇವೆ. ಇಲ್ಲಿ ಪ್ರಾಣಿಗಳನ್ನು ಕಂಡರೆ ಖುಷಿಯಾಗುತ್ತದೆ. ಆದರೆ,ಈಗ ಕೆಸರು ಆವರಿಸಿಕೊಂಡಿದೆ.
ಆದರ್ಶ, ಪಿಯು ವಿದ್ಯಾರ್ಥಿ

ಮಾಡಬೂಳ ಬಳಿ ಜಮೀನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಪಹಣಿ ಪತ್ರಿಕೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಮೃಗಾಲಯ ಎಂಬ ಹೆಸರು ನಮೂದಿಸಲಾಗಿದೆ

-ಉಮಾಕಾಂತ ಹಳ್ಳೆ, ತಹಶೀಲ್ದಾರ್, ಚಿತ್ತಾಪುರ

ಸ್ಥಳಾಂತರ ಪ್ರಕ್ರಿಯೆಗೆ ಹಿನ್ನಡೆ

ಮೈಸೂರು ಮತ್ತು ಹಂಪಿ ಮೃಗಾಲಯಗಳ ಮಾದರಿಯಲ್ಲಿ ಕಲಬುರಗಿ ಕಿರುಮೃಗಾಲಯ ಅಭಿವೃದ್ಧಿಪಡಿಸಲು ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಬಳಿ ರಾಜ್ಯ ಸರ್ಕಾರವು ಅರಣ್ಯ ಇಲಾಖೆಗೆ 42.38 ಎಕರೆ ಜಮೀನು ಮಂಜೂರು ಮಾಡಿತ್ತು.

ಕರ್ನಾಟಕ ಮೃಗಾಲಯ ಪ್ರಾಧಿಕಾರ ನೀಡಿದ್ದ ₹2.5 ಕೋಟಿ ಅನುದಾನದಲ್ಲಿ ಎರಡೂವರೆ ಕಿ.ಮೀ. ಕಾಂಪೌಂಡ್ ಮಾತ್ರ ನಿರ್ಮಾಣವಾಗಿದೆ. ಪ್ರತಿ ವರ್ಷ ನಿಯಮಿತವಾಗಿ ಅನುದಾನ ಬಾರದ ಕಾರಣ ಮೃಗಾಲಯದ ಒಳಾವರಣದ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿದೆ.

‘ಜಮೀನಿನಲ್ಲಿ ಕಾಂಪೌಂಡ್ ಮಾತ್ರ ನಿರ್ಮಾಣವಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮಾವಳಿಯಂತೆ ಪ್ರಾಣಿಪಕ್ಷಿಗಳಿಗೆ ಯೋಗ್ಯ ಹಾಗೂ ಸಕಲ ಸೌಕರ್ಯ ಕಲ್ಪಿಸಬೇಕು. ಇದಕ್ಕೆ ₹32 ಕೋಟಿ ವೆಚ್ಚ ಆಗುತ್ತದೆ. ಅನುದಾನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ರಾಜ್ಯ ಸರ್ಕಾರ ಮತ್ತು ಮೃಗಾಲಯ ಪ್ರಾಧಿಕಾರಕ್ಕೆ ಕೋರಲಾಗಿತ್ತು. ಸಾಮಾಜಿಕ ಅಭಿವೃದ್ಧಿ ನಿಧಿಯಡಿ ಕೆಲ ಕಾರ್ಖಾನೆಗಳಿಗೆ ನೆರವು ಕೋರಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಒಟ್ಟು ₹ 32 ಕೋಟಿ ಅನುದಾನ ಸೇರಿ ಇನ್ನಷ್ಟು ಆರ್ಥಿಕ ನೆರವು ದೊರೆತಲ್ಲಿ ಮಾಡಬೂಳ ಬಳಿ ಮೃಗಾಲಯವನ್ನು ಅಭಿವೃದ್ಧಿಪಡಿಸಬಹುದು. ಎಲ್ಲಾ ನೆರವು ಪಡೆದು ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಉದ್ದೇಶಿಸಿದ್ದೇವೆ’ ಎಂದು ಅವರು ತಿಳಿಸಿದರು.

ದತ್ತು ಪಡೆಯುವವರೇ ಇಲ್ಲ!

ಪ್ರಾಣಿಗಳ ಪಾಲನೆ–ಪೋಷಣೆ ವೆಚ್ಚಗಳು ದುಬಾರಿ ಆಗಿರುವ ಕಾರಣ ಕಿರುಮೃಗಾಲಯ ಆರ್ಥಿಕ ಸಂಕಷ್ಟದಲ್ಲಿದೆ. ಇದನ್ನು ತಗ್ಗಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ, ‘ಪ್ರಾಣಿ–ಪಕ್ಷಿಗಳ ದತ್ತು ಸ್ವೀಕಾರ’ ಯೋಜನೆ ಜಾರಿಗೊಳಿಸಿದೆ. ದತ್ತು ಪಡೆದವರ ಹೆಸರನ್ನು ಆಯಾ ಅವಧಿಗೆ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ.

‘ಒಂದು ವರ್ಷ ದತ್ತು ಪಡೆದರೆ ಭಾವಚಿತ್ರ ಸಮೇತ ಅವರ ಹೆಸರನ್ನು ಪ್ರಕಟಿಸಲಾಗುತ್ತದೆ. ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಪ್ರಾಣಿಗಳನ್ನು ದತ್ತು ಪಡೆಯುವವರ ಕೊರತೆಯಿದೆ’ ಎಂದು ಅಧಿಕಾರಯೊಬ್ಬರು ತಿಳಿಸಿದರು.

‘ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೂವರು ಮಾತ್ರ ಮೃಗಾಲಯದ ಪ್ರಾಣಿ–ಪಕ್ಷಿಗಳನ್ನು ದತ್ತು ಪಡೆದರು. ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ತಮ್ಮ ಪುತ್ರಿ ಹೆಸರಿನಲ್ಲಿ 3 ನವಿಲುಗಳನ್ನು ಒಂದು ವರ್ಷಕ್ಕೆ 2019ರಲ್ಲಿ ದತ್ತು ಪಡೆದಿದ್ದರು. ‘ಇನ್ನರ್‌ ವ್ಹೀಲ್‌ ಕ್ಲಬ್‌ 2018ರಲ್ಲಿ ವರ್ಷದ ಅವಧಿಗೆ 3 ನವಿಲು ಹಾಗೂ 2020ರಲ್ಲಿ ವರ್ಷದ ಅವಧಿಗೆ ಒಂದು ನವಿಲು ಹಾಗೂ ಒಂದು ಚುಕ್ಕೆಜಿಂಕೆ ದತ್ತು ಪಡೆದಿತ್ತು. 2019ರಲ್ಲಿ ವಿಶ್ವನಾಥ ಎಂಬುವರು 3 ತಿಂಗಳ ಅವಧಿಗೆ ನವಿಲನ್ನು ದತ್ತು ಪಡೆದಿದ್ದರು’ ಎಂದು ಅವರು ಮಾಹಿತಿ ನೀಡಿದರು.

ಕಿರು ಮೃಗಾಲಯದ ಒಟ್ಟು ವಿಸ್ತೀರ್ಣ

6.33 ಎಕರೆ

ಒಟ್ಟು ಪ್ರಾಣಿ, ಪಕ್ಷಿಗಳ ಸಂಖ್ಯೆ

85

ಪ್ರಾಣಿ;ಸಂಖ್ಯೆ

ಮೊಸಳೆ; 15
ಆಮೆ; 5
ನರಿ; 4
ಚುಕ್ಕೆ ಜಿಂಕೆ; 3
ಪುನುಗು ಬೆಕ್ಕು; 3
ಕಾಮನ್ ಲಂಗೂರ್; 3
ಹೆಬ್ಬಾವು; 3

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು