ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ; ವಿಜೇತ ಅಭ್ಯರ್ಥಿಗಳ ಬೆಂಬಲಿಗರ ವಿಜಯೋತ್ಸವ

Last Updated 30 ಡಿಸೆಂಬರ್ 2020, 10:56 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನಲ್ಲಿ ಡಿ.22ರಂದು ನಡೆದ 14 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪಟ್ಟಣದಲ್ಲಿ ಬುಧವಾರ ನಡೆಯಿತು.

ಮೊದಲ ಸುತ್ತಿನ ಮತ ಎಣಿಕೆ ಮಧ್ಯಾಹ್ನ 2 ಗಂಟೆಗೆ ಮುಗಿದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ ಅಭ್ಯರ್ಥಿಗಳು ಗೆಲುವು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಇಲ್ಲಿನ ಜಗದ್ಗುರು ರೇವಣಸಿದ್ದೇಶ್ವರ ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುವ ಮುನ್ನವೇ ಸುತ್ತಲಿನ ಹಳ್ಳಿಗಳ ಜನರು ಬೈಕ್, ಆಟೊ, ಜೀಪು, ಟಂಟಂ, ಕಾರು ಮತ್ತಿತರ ವಾಹನಗಳ ಮೂಲಕ ಕಾಲೇಜಿನತ್ತ ಬರತೊಡಗಿದರು.

ಅಭ್ಯರ್ಥಿ ಅಥವಾ ಏಜೆಂಟ್ ಎಣಿಕೆ ಕೇಂದ್ರದೊಳಗೆ ಪ್ರವೇಶ ಮಾಡಿದರೆ, ಅವರ ಬೆಂಬಲಿಗರು ಹೊರಭಾಗದಲ್ಲಿ ನಿಂತುಕೊಂಡಿದ್ದರು. ಪೊಲೀಸ್ ಠಾಣೆಯ ರಸ್ತೆ ಮತ್ತು ಗೋಟೂರ ರಸ್ತೆ, ಜೆಸ್ಕಾಂ ಕಚೇರಿ ಜನರಿಂದ ಗಿಜುಗಿಡುತ್ತಿದ್ದವು. ಅಕ್ಕಪಕ್ಕದ ಹೊಲಗಳಲ್ಲಿ ಜನರು ತಂಡೋಪ ತಂಡವಾಗಿ ಸೇರಿದರು.

ಮತ ಎಣಿಕೆ ಆರಂಭವಾಗುತ್ತಿದ್ದಂತೆ ಹೊರಗಿದ್ದ ಜನರ ಕಿವಿಗಳು ಫಲಿತಾಂಶಕ್ಕಾಗಿ ಧ್ವನಿವರ್ಧಕದ ಕಡೆಗೆ ನಿಮಿರತೊಡಗಿದವು. ಶಬ್ದ ಕೇಳಿಬರುತ್ತಿದ್ದಂತೆ ಮತ್ತು ತಮ್ಮ ಏಜೆಂಟ್ ಅಥವಾ ಅಭ್ಯರ್ಥಿ ಹೊರಗಡೆ ಬರುತ್ತಿದ್ದಂತೆ ಗೆದ್ದ ಅಭ್ಯರ್ಥಿಯ ಜನರು ಸಂತಸ ತಡೆಯದೆ ಬ್ಯಾರಿಕೇಡ್ ಒಳನುಗ್ಗಿ ಬರುತ್ತಿರುವುದು ಕಂಡುಬಂತು.

ಸ್ಥಳೀಯ ಪಿಎಸ್ಐ ದಿವ್ಯಾ ಶ್ರೀಶೈಲ ಅಂಬಾಟಿ ತಮ್ಮ ಜೀಪಿನ ಧ್ವನಿವರ್ಧಕದ ಮೂಲಕ ಜನರು ಒಳನುಗ್ಗದಂತೆ ಸೂಚಿಸಿದರು. ಒಳನುಗ್ಗಿದವರಿಗೆ ಪೊಲೀಸರು ಲಾಠಿ ಮೂಲಕ ಚದುರಿಸಲು ಮುಂದಾದರು. ಈ ಮಧ್ಯೆ ಹೋಟೆಲ್, ಕಬ್ಬಿನ ಹಾಲು, ಕುಡಿಯುವ ನೀರಿನ ವ್ಯಾಪಾರ ಜೋರಾಗಿತ್ತು.

ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಡಿ.ಬಿ.ಕಟ್ಟಿಮನಿ, ರಟಕಲ್ ಪಿಎಸ್ಐ ಶಿವಶಂಕರ ಸುಬೇದಾರ, ಮಾಡಬೂಳ ಪಿಎಸ್ಐ ವಿಜಯಕುಮಾರ ನಾಯಕ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT