ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿವಿ: ತಂದೆಯ ಆಸೆ ಈಡೇರಿಸಲು 12 ಚಿನ್ನ ಗಳಿಸಿದ ಪೂರ್ಣಿಮಾ

ಗುಲಬರ್ಗಾ ವಿಶ್ವವಿದ್ಯಾಲಯದ 39, 40ನೇ ಘಟಿಕೋತ್ಸವ
Last Updated 28 ಏಪ್ರಿಲ್ 2022, 4:43 IST
ಅಕ್ಷರ ಗಾತ್ರ

ಕಲಬುರಗಿ: ಕೆಲ ವರ್ಷಗಳ ಹಿಂದೆ ನಿಧನರಾದ ತಂದೆಯ ಆಸೆ ಈಡೇರಿಸಲು 12 ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿನಿ. ಅಕ್ಷರವನ್ನೇ ಕಲಿಯದ ಕುಟುಂಬದಿಂದ ಬಂದು 10 ಚಿನ್ನದ ಪದಕದ ಬೆಳೆ ತೆಗೆದ ವಿದ್ಯಾರ್ಥಿ. ತಂದೆಯೊಂದಿಗೆ ಪಾನಿಪೂರಿ ಮಾರುತ್ತ ಕಲಿತ
ಮಗನಿಗೆ ಏಳು ಚಿನ್ನದ ಪದಕ.

ಇವು ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ ಕಂಡು ಬಂದ ಸಾಧನೆಯ ಝಲಕ್‌ಗಳು.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಾಣದಾಳ ಗ್ರಾಮದ ಪೂರ್ಣಿಮಾ ಲಿಂಗಣ್ಣ
ರಾಯಚೂರಿನ ಎಲ್‌ವಿಡಿ ಪದವಿ ಕಾಲೇಜಿನಲ್ಲಿ ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದರು. ನಂತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗಕ್ಕೆ ಸೇರ್ಪಡೆಯಾಗಿ ಇದೀಗ 12 ಪದಕಗಳನ್ನು ಪಡೆದಿದ್ದಾರೆ.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಚಿನ್ನದ ಪದಕಗಳನ್ನು ಪಡೆದ ಬಳಿಕ ಮಾತನಾಡಿದ ಪೂರ್ಣಿಮಾ, ‘ಪಿಯು ಕಾಲೇಜು ಉಪನ್ಯಾಸಕರಾಗಿದ್ದ ತಂದೆ ಲಿಂಗಣ್ಣ ಕೆಲ ವರ್ಷಗಳ ಹಿಂದೆ ಮೃತಪಟ್ಟರು. ನಾನು ಚೆನ್ನಾಗಿ ಓದಿ ಒಂದು ಚಿನ್ನದ ಪದಕ ಪಡೆಯಲಿ ಎಂಬ ಆಸೆ ಇಟ್ಟುಕೊಂಡಿದ್ದರು. ಇಂದು 12 ಪದಕಗಳನ್ನು ಪಡೆದಿದ್ದೇನೆ. ಆ ಖುಷಿಯನ್ನು ಅನುಭವಿಸಲು ತಂದೆಯೇ ಇಲ್ಲ’ ಎಂದು ಕಣ್ಣೀರಿಟ್ಟರು.

ಕನ್ನಡ ವಿಭಾಗದಲ್ಲಿ 10 ಚಿನ್ನದ ಪದಕಗಳನ್ನು ಪಡೆದ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ಮುಷ್ಟೂರಿನ ತಮ್ಮಣ್ಣ ಹಣಮಂತ ಅವರ ಕುಟುಂಬದಲ್ಲಿ ಇಷ್ಟೊಂದು ಓದಿದವರು ಇವರೇ. ತಂದೆ, ತಾಯಿ ಇಬ್ಬರೂ ಅನಕ್ಷರಸ್ಥರು.

‘ಊರಲ್ಲಿ ಎರಡೂವರೆ ಎಕರೆ ಭೂಮಿ ಇದೆ. ಇಷ್ಟೊಂದು ಚಿನ್ನದ ಪದಕ ಪಡೆದು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಖುಷಿಯಾಗಿದೆ. ಸದ್ಯಕ್ಕೆ ಒಂದು ನೌಕರಿ ಹುಡುಕಬೇಕಿದೆ. ಅದಕ್ಕಾಗಿಯೇ 6ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲಿದ್ದೇನೆ. ನಂತರ ಅವಕಾಶ ಸಿಕ್ಕರೆ ಪ್ರಾಧ್ಯಾಪಕ ಹುದ್ದೆಗೆ ಪರೀಕ್ಷೆ ಬರೆಯುತ್ತೇನೆ’ ಎಂದರು ತಮ್ಮಣ್ಣ.

ಪ್ರಾಣಿಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದಿರುವ ಬೀದರ್ ಜಿಲ್ಲೆ ಚಿಟಗುಪ್ಪಾ ಬಳಿಯ ಉಡಬಾಳ ಗ್ರಾಮದ ನಿಹಾಲ್‌ ಪದವಿ ಓದುತ್ತಿದ್ದಾಗ ತಂದೆ ಭರತಲಾಲ್ ಅವರೊಂದಿಗೆ ಪಾನಿಪೂರಿ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಆದಾಯದಲ್ಲಿ ಮನೆ ನಡೆಸಲು ಹಾಗೂ ಶಿಕ್ಷಣಕ್ಕೆ ವ್ಯಯಿಸುತ್ತಿದ್ದರು. ಇದೀಗ ತಮ್ಮ ಬಿಬಿಎಂ ಮುಗಿಸಿ ನೌಕರಿ ಮಾಡುತ್ತಿರುವುದರಿಂದ ತಂದೆಗೆ ವಿಶ್ರಾಂತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT