ಶನಿವಾರ, ಡಿಸೆಂಬರ್ 3, 2022
21 °C

ಹಿಂದಿ ಕಲಿತರೆ ವ್ಯವಹಾರ ಸುಲಭ: ಡಾ.ಭೀಮಸಿಂಗ್ ರಾಠೋಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ದೇಶದ ಬಹುಪಾಲು ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಭಾಷೆ ರಾಷ್ಟ್ರಭಾಷೆಯೂ ಆಗಿದೆ. ಸಂವಹನ ಸಂಪರ್ಕ ಹಾಗೂ ಕಲಿಕಗೆ ಅತ್ಯಂತ ಸರಳ ಭಾಷೆಯಾಗಿದೆ. ಹಿಂದಿ ಕಾರಣದಿಂದಲೇ ದೇಶದ ಕೋಟ್ಯಂತರ ಜನ ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಪ್ರೇಮಚಂದ್‌ ಸಾಹಿತ್ಯ ಸಂಘದ ನಿರ್ದೇಶಕ ಡಾ.ಭೀಮಸಿಂಗ್ ರಾಠೋಡ ತಿಳಿಸಿದರು.

ಪ್ರೇಮಚಂದ್‌ ಸಾಹಿತ್ಯ ಸಂಘದಿಂದ ಸಮೀಪದ ತಾಜಸುಲ್ತಾನಪುರದಲ್ಲಿರುವ ಕೆಎಸ್‌ಆರ್‌ಪಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಹಿಂದಿ ದಿವಸ್‌ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾಷೆ ಕಲಿಕೆಯಲ್ಲಿ ತಾರತಮ್ಯ ಸಲ್ಲ. ಮಾತೃಭಾಷೆಯೊಂದಿಗೆ ರಾಷ್ಟ್ರದ ಭಾಷೆ, ವಿದೇಶಿ ಭಾಷೆಗಳನ್ನೂ ನಾವು ಕಲಿಯಬೇಕು’ ಎಂದರು.

‘ಬಹು ಭಾಷಿಕರಿಗೆ ದೇಶದಲ್ಲಿ ಹೆಚ್ಚು ಗೌರವ ಮತ್ತು ಉನ್ನತ ಉದ್ಯೋಗಗಳು ಲಭಿಸುತ್ತವೆ. ಅದಕ್ಕಾಗಿ ಮಾತೃಭಾಷೆಗೆ ಮಾತ್ರ ಸೀಮಿತರಾಗದೆ ರಾಷ್ಟ್ರದಲ್ಲಿ ಚಾಲ್ತಿ ಇರುವ ಇತರ ಭಾಷೆಗಳನ್ನೂ ಕಲಿತರೆ ಉದ್ಯೋಗ, ವ್ಯಾಪಾರ, ವ್ಯವಹಾರ, ಸಂಶೋಧನೆಗೆ ಹೆಚ್ಚು ಸಾಧ್ಯತೆಗಳು ಸಿಗುತ್ತವೆ. ಹಿಂದಿ ಭಾಷಾ ಜ್ಞಾನ ಹೊಂದಿದ್ದರೆ ದೇಶದ ಕ್ಷೇತ್ರದ ಹಲವಾರು ಉದ್ಯೋಗ ಗಿಟ್ಟಿಸಬಹುದು. ಇದರಿಂದ ರಾಜ್ಯದಲ್ಲಿ ಸ್ಪರ್ಧೆಯೂ ಕಡಿಮೆಯಾಗುತ್ತದೆ’ ಎಂದರು.

‘ಹಿಂದಿ ಭಾಷೆ ಹೆಚ್ಚು ಬರವುದರಿಂದಲೇ ಬಿಹಾರ, ಉತ್ತರಪ್ರದೇಶ ರಾಜ್ಯದವರು ದೇಶದ ತುಂಬ ಉನ್ನತ ನಾಗರಿಕ ಸೇವಾ ಹುದ್ದೆಗಳನ್ನು ಪಡೆದಿದ್ದಾರೆ. ಕುಗ್ರಾಮಗಳ ರೈಲ್ವೆ ನಿಲ್ದಾಣಗಳಲ್ಲಿನ ಗಂಟೆ ಬಾರಿಸುವ ಹುದ್ದೆಯಿಂದ ಹಿಡಿದು ಐಎಎಸ್‌ನಂಥ ಉನ್ನತ ಹುದ್ದೆಗಳನ್ನೂ ಆ ಭಾಗದ ಜನ ಹೆಚ್ಚು ಪಡೆದಿದ್ದಾರೆ’ ಎಂದು ಅವರು ವಿವರಿಸಿದರು.

‘ಕಲ್ಯಾಣ ಕರ್ನಾಟಕದ ಬಹುತೇಕ ಕಾರ್ಮಿಕರು ಬೇರೆಬೇರೆ ಕಡೆ ಉದ್ಯೋಗ, ಶಿಕ್ಷಣಕ್ಕೆ ವಲಸೆ ಹೋಗುತ್ತಾರೆ. ಹಿಂದಿ ಭಾಷೆ ಗೊತ್ತಿಲ್ಲದೇ ಸಾಕಷ್ಟು ಅನ್ಯಾಯ ಅನುಭವಿಸುತ್ತಾರೆ. ಹಾಗಾಗಿ, ಹಿಂದಿ ಕಲಿಯಲು ಆಸಕ್ತಿ ತೋರಬೇಕು’ ಎಂದರು.

ಮುಖಂಡರಾದ ಜಗದೀಶ್ ಬೇಲೂರ್, ಶೀತಲ್ ಜಾಧವ, ಶೈಲಶ್ರೀ, ಇಶರತ್ ಪರ್ವಿನ್ ಮಾತನಾಡಿದರು. ಚಂದ್ರಕಲಾ, ಜಗದೇವಿ ವೇದಿಕೆ ಮೇಲಿದ್ದರು. ಈಶ್ವರಿ ನಿರೂಪಿಸಿದರು. ಕಾವೇರಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು