ಭಾನುವಾರ, ಜುಲೈ 25, 2021
25 °C
ಆರ್‌ಟಿಒ, ಕೆಜಿಐಡಿಯಿಂದ ದತ್ತಾಂಶ ಸಂಗ್ರಹಿಸಿದ ಆಹಾರ ಇಲಾಖೆ; ನೋಟಿಸ್‌ಗೆ ಸಿದ್ಧತೆ

ಕಲಬುರ್ಗಿ: 123 ಅನರ್ಹರ ಬಿಪಿಎಲ್ ಕಾರ್ಡ್‌ಗೆ ಕಂಟಕ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಆದ್ಯತಾ ಕುಟುಂಬಗಳಿಗೆ (ಬಿಪಿಎಲ್‌) ಇರುವ ಮಾನದಂಡಗಳನ್ನು ಮೀರಿ ಆರ್ಥಿಕವಾಗಿ ಸಬಲರಿದ್ದವರೂ ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದ 123 ಜನರನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅವರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ.

ಕೋವಿಡ್‌ ಬರುವುದಕ್ಕೂ ಮುನ್ನ ಅನರ್ಹ ಬಿ‍ಪಿಎಲ್‌ ಕಾರ್ಡುದಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಂಡಿತ್ತು. ಕೋವಿಡ್‌ ಸೋಂಕು ವ್ಯಾಪಕವಾದ ಬಳಿಕ ಆ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿತ್ತು. ಇದೀಗ ಲಾಕ್‌ಡೌನ್ ತೆರವಾಗಿರುವುದರಿಂದ ಅಂಥವರ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು, ನೋಟಿಸ್‌ ನೀಡಲಾಗುತ್ತದೆ. ಸೂಕ್ತ ಸಮಜಾಯಿಷಿ ನೀಡದಿದ್ದಲ್ಲಿ ಎಷ್ಟು ವರ್ಷ ಆಹಾರ ಧಾನ್ಯವನ್ನು ಪಡೆದಿರುತ್ತಾರೋ ಅಷ್ಟು ವರ್ಷದ ಆಹಾರ ಧಾನ್ಯದ ಮಾರುಕಟ್ಟೆ ದರವನ್ನು ವಸೂಲಿ ಮಾಡಲು ನಿರ್ಧರಿಸಿದ್ದಾರೆ.

ದತ್ತಾಂಶ ಸಂಗ್ರಹ: ಆದ್ಯತಾ ಕುಟುಂಬದ ಪಡಿತರ ಚೀಟಿಯನ್ನು ಹೊಂದುವವರಿಗೆ ನಾಲ್ಕು ಚಕ್ರದ ವಾಹನ (ಜೀವನಕ್ಕೆ ಆಧಾರವಾದ ವಾಣಿಜ್ಯ ಮಿನಿ ವಾಹನ ಹೊರತುಪಡಿಸಿ), ನಗರ ಪ್ರದೇಶದಲ್ಲಿ 1,000 ಚದರ ಅಡಿ ಹಾಗೂ ಅದಕ್ಕಿಂತ ಹೆಚ್ಚಿನ ಜಾಗದಲ್ಲಿ ಸ್ವಂತ ಮನೆ, ವಾರ್ಷಿಕ ₹ 1.2 ಲಕ್ಷಕ್ಕಿಂತ ಅಧಿಕ ಆದಾಯ ಹಾಗೂ 3 ಹೆಕ್ಟೇರ್‌ಗಿಂತ ಹೆಚ್ಚಿನ ಆಸ್ತಿ ಇರಬಾರದು. ಈ ಅಂಶಗಳನ್ನು ಪತ್ತೆ ಹಚ್ಚುವ ಸಲುವಾಗಿ ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಹಾಗೂ ಕೆಜಿಐಡಿ ಮತ್ತು ಕಂದಾಯ ಇಲಾಖೆಯಿಂದ ದತ್ತಾಂಶವನ್ನು ಸಂಗ್ರಹಿಸುತ್ತದೆ. ಹೀಗೆ ಪತ್ತೆಯಾದವರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅವರಿಗೆ ನೋಟಿಸ್‌ ನೀಡಲಾಗುತ್ತಿದೆ ಎಂದು ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶಾಂತಗೌಡ ಜಿ. ಗುಣಕಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆದಾಯ ತೆರಿಗೆ ಪಾವತಿಸುವವರನ್ನೂ ಗುರುತಿಸಿ ಅವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿತ್ತು. ಆದರೆ, ಬಹುತೇಕ ಜನರು ವರಮಾನ ಇಲ್ಲದಿದ್ದರೂ ದಾಖಲೆಗಾಗಿ ಐಟಿ ರಿಟರ್ನ್‌ ಫೈಲ್‌ ಮಾಡಲು ಪಾನ್ ಕಾರ್ಡ್‌ ಹೊಂದಿದ್ದರು. ಹೀಗಾಗಿ, ಅವರ ಕಾರ್ಡ್‌ಗಳನ್ನು ಪುನಃ ನವೀಕರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 27,613 ಕಾರ್ಡ್‌ ವಿತರಣೆ ಬಾಕಿ

ಆದ್ಯತಾ ‍ಪಡಿತರ ಚೀಟಿಗಳನ್ನು ನೀಡುವಂತೆ ಜಿಲ್ಲೆಯಲ್ಲಿ 27,613 ಜನರು ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ ಅವುಗಳಿಗೆ ಅನುಮೋದನೆ ನೀಡುತ್ತಿಲ್ಲ ಎಂದು ಶಾಂತಗೌಡ ಗುಣಕಿ ತಿಳಿಸಿದರು.

ಇವುಗಳಲ್ಲಿ ಬಹುತೇಕ ಕಾರ್ಡುದಾರರು ಒಂದೇ ಕುಟುಂಬಕ್ಕೆ ಸೇರಿದ್ದು, ಅವರಿಗೆ ಆದ್ಯತಾ ಪಡಿತರ ಚೀಟಿಯಡಿ ಆಹಾರ ಧಾನ್ಯ ನೀಡಲಾಗುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕೇಂದ್ರ ಕಚೇರಿಯೇ ಅನುಮೋದನೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಅವುಗಳಿಗೆ ಅನುಮೋದನೆ ನೀಡಿಲ್ಲ. ಆದರೆ, ಯಾರಿಗೆ ಕಾರ್ಡ್‌ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಮಾಹಿತಿಯನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇವೆ.

ಸರ್ಕಾರದ ಸೂಚನೆ ಮೇರೆಗೆ ಕೋವಿಡ್ ಸಾಂಕ್ರಾಮಿಕ ಹೆಚ್ಚಾಗಿದ್ದ ಏಪ್ರಿಲ್, ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡಲಾಗಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು