ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಕಟ್ಟಡಗಳ ನಿರ್ಮಾಣ: ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುವ ಆತಂಕ

ವಿಮಾನ ನಿಲ್ದಾಣದ ಸುತ್ತ ಎನ್‌ಒಸಿ ಇಲ್ಲದೆ ಬಡಾವಣೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ
Published 9 ಜನವರಿ 2024, 5:49 IST
Last Updated 9 ಜನವರಿ 2024, 5:49 IST
ಅಕ್ಷರ ಗಾತ್ರ

ಕಲಬುರಗಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯದೆ ಕಲಬುರಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನಲ್ಲಿ ಭೂ ಮಾಲೀಕರು ಬಡಾವಣೆಗಳ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿರುವ ಬಗ್ಗೆ ನಿಲ್ದಾಣದ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಿಲ್ದಾಣದ ರನ್‌ವೇನಿಂದ ಸುಮಾರು 500 ಮೀಟರ್‌ ಅಂತರದಲ್ಲಿ ನಿಲ್ದಾಣದ ಕಾಂಪೌಂಡ್‌ ಸಮೀಪದಲ್ಲೇ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ಕಟ್ಟಡಗಳ ಎತ್ತರದಿಂದಾಗಿ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ. ನಾಗರಿಕ ವಿಮಾನಯಾನದ ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ಇದ್ದಲ್ಲಿ ವಿಮಾನಗಳ ಸೇವೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಭಾರತೀಯ ವಿಮಾನ ಕಾಯ್ದೆ ಮತ್ತು ಶಾಸನಬದ್ಧ ನಿಯಮ ಜಿಎಸ್‌ಆರ್‌ 751 (ಇ) ಅನ್ವಯ ಯಾವುದೇ ಕಟ್ಟಡ, ಕಾರ್ಖಾನೆ, ಗೋಪುರ, ಚಿಮಣಿ ಸೇರಿದಂತೆ ಇತರೆ ಎತ್ತರದ ಕಟ್ಟಡ ನಿರ್ಮಾಣಕ್ಕೂ ಮುನ್ನ ಸಂಬಂಧಿಸಿದ ಮಾಲೀಕರು ವಿಮಾನ ನಿಲ್ದಾಣದಿಂದ ಎನ್‌ಒಸಿ ಪಡೆಯಬೇಕು. ಇದು ವಿಮಾನ ನಿಲ್ದಾಣದ ಸುತ್ತಲಿನ 20 ಕಿ.ಮೀ ವ್ಯಾಪ್ತಿಗೆ ಅನ್ವಯಿಸುತ್ತದೆ. ಆದರೆ, ಜಮೀನಿನ ಹಲವು ಮಾಲೀಕರು ಎಎಐನಿಂದ ಎನ್‌ಒಸಿ ಪಡೆದಿದ್ದಾಗಿ ಹೇಳಿ ಬಡಾವಣೆಗಳನ್ನು ಅಭಿವೃದ್ಧಿಗೊಳಿಸಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಮಾನ ನಿಲ್ದಾಣದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಮೀನಿನ ಮಾಲೀಕರೊಬ್ಬರಿಗೆ 2022ರ ಆಗಸ್ಟ್‌ನಲ್ಲಿ 3.75 ಮೀಟರ್‌ ಎತ್ತರದ ಒಂದು ಕಟ್ಟಡ ನಿರ್ಮಾಣಕ್ಕೆ ಎನ್‌ಒಸಿ ನೀಡಲಾಗಿತ್ತು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಅದೇ ಜಾಗದಲ್ಲಿ ಬಹು ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ನೈಟ್‌ಲ್ಯಾಂಡಿಂಗ್‌ಗೆ ಅನುಮತಿ ಸಿಕ್ಕಿದ್ದರಿಂದ ಎನ್‌ಒಸಿ ನಿಯಮಗಳು ಮತ್ತಷ್ಟು ಕಠಿಣವಾಗುತ್ತವೆ. ಹೀಗಾಗಿ, ಇನ್ನೊಮ್ಮೆ ಎನ್‌ಒಸಿ ಪಡೆಯಬೇಕು. ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು’ ಎಂದರು.

‘ವಿಮಾನ ನಿಲ್ದಾಣದ ಪಕ್ಕದಲ್ಲೇ ಕೊಳೆಗೇರಿಗಳಂತಹ ಮನೆಗಳು ನಿರ್ಮಾಣವಾದರೆ ಯಥೇಚ್ಛ ತ್ಯಾಜ್ಯ ಸೃಷ್ಟಿಯಾಗುತ್ತದೆ. ಅದು ಪಕ್ಷಿಗಳನ್ನು ಆಕರ್ಷಿಸುತ್ತದೆ. ಪಕ್ಷಿಗಳ ಹಾರಾಟವು ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ’ ಎನ್ನುತ್ತಾರೆ ವಿಮಾನ ನಿಲ್ದಾಣದ ತಾಂತ್ರಿಕ ಅಧಿಕಾರಿ.

‘ಬಡಾವಣೆ, ಕಟ್ಟಡ ನಿರ್ಮಾಣದ ಬಗ್ಗೆ ನಿಲ್ದಾಣದ ಅಧಿಕಾರಿಗಳು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಕುಡಾ) ಪತ್ರ ಬರೆದಿದ್ದಾರೆ. ಈಗಗಾಲೇ ಎನ್‌ಒಸಿ ಪಡೆದವರು ಮತ್ತೊಮ್ಮೆ ಎನ್‌ಒಸಿ ಪಡೆಯಬೇಕು ಎಂಬ ಸ್ಪಷ್ಟತೆ ಕೋರಿ ಪತ್ರ ಬರೆಯುತ್ತೇವೆ’ ಎಂದು ‘ಕುಡಾ’ ಜಂಟಿ ನಿರ್ದೇಶಕ ಎಸ್‌.ಎಸ್‌. ಗಾರಂಪಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡಾವಣೆಯ ಅಭಿವೃದ್ಧಿಗೆ ಎನ್‌ಒಸಿ ಪಡೆದ ನಂತರ ನಿವೇಶನಗಳನ್ನು ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುವ ಪ್ರತಿಯೊಬ್ಬರೂ ಎಎಐ ಅಥವಾ ವಿಮಾನ ನಿಲ್ದಾಣದಿಂದ ಎನ್‌ಒಸಿ ಪಡೆದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೊಡುತ್ತೇವೆ. ಅದು ಸಹ ಕಿ.ಮೀ. ವ್ಯಾಪ್ತಿಗೆ ಅನುಗುಣವಾಗಿ, ಎಎಐ ಸೂಚಿಸಿದ ಎತ್ತರಕ್ಕೆ ಸೀಮಿತವಾಗಿ ಇರಲಿದೆ’ ಎಂದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹಾರಾಟ ನಿರತ ತರಬೇತಿಯ ಲಘು ವಿಮಾನ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹಾರಾಟ ನಿರತ ತರಬೇತಿಯ ಲಘು ವಿಮಾನ
ಪ್ರಯಾಣಿಕರ ಸುರಕ್ಷತೆ ಹಾಗೂ ವಿಮಾನ ನಿಲ್ದಾಣದ ಬೆಳವಣಿಗೆಯ ದೃಷ್ಟಿಯಿಂದ ನಿಲ್ದಾಣದ ವ್ಯಾಪ್ತಿಯಲ್ಲಿ ಎಎಐ ನಿಯಮಗಳ ಪಾಲನೆ ಮುಖ್ಯವಾಗುತ್ತದೆ
-ಚಿಲಕಾ ಮಹೇಶ ವಿಮಾನ ನಿಲ್ದಾಣದ ನಿರ್ದೇಶಕ
ಬೆಟ್ಟದ ಮೇಲಿನ ಮರಗಳ ತೆರವು ಬಗ್ಗೆ ಯಾವುದೇ ದೂರು ಪತ್ರ ಬಂದಿಲ್ಲ. ನಿಲ್ದಾಣದ ಸುತ್ತ ಪ್ರಾಣಿಗಳ ಓಡಾಟ ಹೆಚ್ಚಾದ ಬಗ್ಗೆ ದೂರು ಬಂದಿತ್ತು. ತಕ್ಷಣವೇ ಅವುಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲಾಗಿತ್ತು
-ಸುಮಿತ್ ಪಾಟೀಲ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಲಬುರಗಿ

ತೆರವಾಗದ ಕಾಂಪೌಂಡ್, ಮರಗಳು

ಶ್ರೀನಿವಾಸ ಸರಡಗಿ ರಸ್ತೆಯ ಬದಿಯ ರನ್‌ವೇನಿಂದ ರಾತ್ರಿ ವೇಳೆಯ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಬೆಟ್ಟದ ತುದಿ ಅದರ ಮೇಲಿನ ಮರಗಳು ಹಾಗೂ ಬ್ರಹ್ಮಕುಮಾರಿಯ ಈಶ್ವರೀಯ ವಿಶ್ವವಿದ್ಯಾಲಯದ ತಡೆಗೋಡೆ ಇನ್ನೂ ತೆರವಾಗಿಲ್ಲ. ವಿಮಾನ ಇಳಿಸಲು ಮತ್ತು ಹಾರಿಸುವಾಗ 2 ಕಿ.ಮೀ. ವ್ಯಾಪ್ತಿಯಲ್ಲಿ ನೆಲಮಟ್ಟದಿಂದ 350 ಮೀಟರ್ ಅಂತರದಲ್ಲಿ ಯಾವುದೇ ಅಡೆತಡೆ ಇರಬಾರದು ಎಂಬುದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ನಿಯಮ. ಆದರೆ ರನ್‌ವೇಯ ಕಲಬುರಗಿ ರಸ್ತೆ ಮಾರ್ಗದ ಸುತ್ತ 27 ಹಾಗೂ ಸೇಡಂ ರಸ್ತೆಯ ಕಡೆ 9 ಅಡೆತಡೆಗಳಿವೆ. ಈ ಪೈಕಿ ಕೆಲವನ್ನು ತೆರವುಗೊಳಿಸಲಾಗಿದೆ. ಬೆಟ್ಟದ ತುದಿ ಬೆಟ್ಟದ ಮೇಲಿನ ಮರಗಳು ಹಾಗೂ ತಡೆಗೋಡೆ ಹಾಗೆಯೇ ಉಳಿದಿದೆ ಎನ್ನುತ್ತಾರೆ ನಿಲ್ದಾಣದ ಅಧಿಕಾರಿಗಳು.

ಜಂಟಿ ಪರಿಶೀಲನೆ
ಜಿಲ್ಲಾಧಿಕಾರಿ ‘ಹೊಸ ಬಡಾವಣೆಗಳನ್ನು ಅಭಿವೃದ್ಧಿ ಮಾಡುವವರಿಗೆ ತಹಶೀಲ್ದಾರ್‌ ಮೂಲಕ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ವಿಮಾನ ನಿಲ್ದಾಣದ ನಿರ್ದೇಶಕರು ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಜಂಟಿ ಪರಿಶೀಲನೆ ನಡೆಸಿ ವರದಿಯನ್ನು ತರಿಸಿಕೊಳ್ಳಲಾಗುವುದು. ವರದಿಯ ಪ್ರಕರ ಸಂಬಂಧಪಟ್ಟವರಿಗೆ ಸೂಚನೆ ಕೊಡುತ್ತೇವೆ’ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT