ಶನಿವಾರ, ಸೆಪ್ಟೆಂಬರ್ 26, 2020
23 °C
ನಗರದಲ್ಲಿ ಸಂಚರಿಸಲಿವೆ ಸ್ತಬ್ದಚಿತ್ರಗಳು, ಮೈದಾನದಲ್ಲಿ ಪರೇಡ್‌, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ

ಕಲಬುರ್ಗಿ | ಸ್ವಾತಂತ್ರ್ಯ ದಿನ: ಸಂಭ್ರಮದ ಬದಲು ಅರಿವಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈ ಬಾರಿಯ ಸ್ವಾತಂತ್ರ್ಯ ಸಮಾರಂಭದಲ್ಲಿ ಸಾಂಸ್ಕೃತಿಕ ಸಂಭ್ರಮದ ಬದಲಾಗಿ ಕೋವಿಡ್‌ ಜಾಗೃತಿಗೆ ಒತ್ತು ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಶನಿವಾರ (ಆ. 15) ಬೆಳಿಗ್ಗೆ ಇಲ್ಲಿನ ಪೊಲೀಸ್‌ ‍ಪರೇಡ್‌ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳ ಕಲರವ ಇರುವುದಿಲ್ಲ. ಬದಲಾಗಿ ಸಾಂಕೇತಿಕವಾಗಿ ಪೊಲೀಸ್‌ ತುಕಡಿಗಳು, ಹೋಂಗಾರ್ಡ್‌ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್ಎಸ್‌ ಶಿಬಿರಾರ್ಥಿಗಳ ಪರೇಡ್‌ ಮಾತ್ರ ನಡೆಯಲಿವೆ.

ಕೋವಿಡ್-19 ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಇದರ ಕರಿನೆರಳು ಸ್ವಾತಂತ್ರ್ಯ ಸಂಭ್ರಮದ ಮೇಲೂ ಬಿದ್ದಿದೆ. ಮೈದಾನದಲ್ಲಿ ಹೆಚ್ಚಿನ ಜನಸಂದಣಿ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಹಾಗೂ ನಗರ ಪೊಲೀಸ್‌ ಆಯುಕ್ತರ ಕಾರ್ಯಾಲಯ ವಿವಿಧ ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯಾವುದೇ ಶಾಲಾ ಮಕ್ಕಳನ್ನೂ ಸಮಾರಂಭಕ್ಕೆ ಕರೆತರದಂತೆ ಈಗಾಗಲೇ ಸಂಬಂಧಿಸಿದ ಶಾಲೆಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಜಾಗೃತಿಗೆ ಟ್ಯಾಬ್ಲೊ: ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸುವ ಹಾಗೂ ಯಶೋಗಾಥೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಮಾತ್ರ ಶನಿವಾರ ನಗರದಲ್ಲಿ ಸಂಚರಿಸಲಿವೆ. ಅದರಲ್ಲೂ ಕೋವಿಡ್‌ನಿಂದ ರಕ್ಷಣೆ ಪಡೆಯುವ ಬಗೆ ಹಾಗೂ ಮಾಸ್ಕ್‌ ಧಸಿರುವ ಮಹತ್ವಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು, ವಿಶೇಷ ಆಹ್ವಾನಿತರು, ಅಥಿತಿಗಳು ಮಾತ್ರ ಇರುತ್ತಾರೆ. ಸಮಾರಂಭದಲ್ಲೂ ಜನಸಂದಣಿಗೆ ಅವಕಾಶವಿಲ್ಲ. ಒಂದು ವೇಳೆ ಯಾರಾದರೂ ಸಮಾರಂಭ ವೀಕ್ಷಿಸಲು ಬಂದರೆ ಅವರ ಬಳಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಕಡ್ಡಾಯವಾಗಿ ಇರಬೇಕು. ನಿರ್ದಿಷ್ಟ ಅಂತರ ಕಾಯ್ದುಕೊಂಡೇ ಭಾಗವಹಿಸಬೇಕು. ಇದರ ಬಗ್ಗೆ ಸಿಬ್ಬಂದಿ ವಿಶೇಷ ಗಮನ ಹರಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗಾಗಿ ಕೇಂದ್ರ ಗೃಹ ಮಂತ್ರಾಲಯ ಕೆಲವು ನಿರ್ದೇಶನಗಳನ್ನು ನೀಡಿದೆ. ಅವುಗಳನ್ನು  ಚಾಚೂತಪ್ಪದೆ ಪಾಲಿಸುವಂತೆ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ.‌ ಎಲ್ಲಿಯೂ ಅಜಾಗರೂಕತೆ ನಡೆಯದಂತೆ, ಜನಸಂದಣಿ ಆಗದಂತೆ ನಿಗಾ ವಹಿಸಲು ಈಗಾಗಲೇ ಸಭೆ ನಡೆಸಿ ಮಾರ್ಗದರ್ಶನ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಕಚೇರಿಗಳಲ್ಲಿ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಬೇಕು. ನಂತರ ನಗರದ ಪೊಲೀಸ್ ಪರೇಡ್‌ ಮೈದಾನದಲ್ಲಿ  ನಡೆಯುವ ಪ್ರಧಾನ ಕಾರ್ಯಕ್ರಮಕ್ಕೆ ಅಂದು ಬೆಳಿಗ್ಗೆ 8.30ರೊಳಗಾಗಿ ಬಂದು ಸೇರಬೇಕು. ಇಲ್ಲಿ ಸರಿಯಾಗಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಹೇಳಿದರು.

ಸನ್ಮಾನ: ಕೋವಿಡ್ ನಿಯಂತ್ರಣಕ್ಕೆ ದುಡಿಯುತ್ತಿರುವ ವೈದ್ಯರು, ನರ್ಸ್, ಪೌರಕಾರ್ಮಿಕರು ಹಾಗೂ ಸೋಂಕಿನಿಂದ ಗುಣಮುಖರಾದ ಕೆಲವು ರೋಗಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಈ ಮೂಲಕ ಕೋವಿಡ್‌ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ತುಂಬಲು  ಯತ್ನಿಸಲಾಗುವುದು ಎಂಬುದು ಅವರು ಹೇಳಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು