ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ವಿಮಾನ ನಿಲ್ದಾಣಕ್ಕೆ ರಷ್ಯಾ ತಂತ್ರಜ್ಞಾನ

Published 28 ಆಗಸ್ಟ್ 2023, 4:55 IST
Last Updated 28 ಆಗಸ್ಟ್ 2023, 4:55 IST
ಅಕ್ಷರ ಗಾತ್ರ

ಮಲ್ಲಿಕಾರ್ಜುನ ನಾಲವಾರ

ಕಲಬುರಗಿ: ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭ ಹಾಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ನೆರವಾಗಲು ರಷ್ಯಾ ಮೂಲದ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್‌ನ(ಐಎಲ್‌ಎಸ್‌) ಉಪಕರಣಗಳನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಳವಡಿಸುವ ಕಾಮಗಾರಿ ನಡೆಯುತ್ತಿದೆ.

ಸುಮಾರು 10 ವರ್ಷಗಳನ್ನು ಪೂರೈಸಿದ ವಿಮಾನ ನಿಲ್ದಾಣಗಳಿಗೆ ಪೂರೈಸುವಂತಹ ಐಎಲ್‌ಎಸ್‌ ಸಾಧನಗಳನ್ನು ಕಲಬುರಗಿ ನಿಲ್ದಾಣಕ್ಕೆ ಪೂರೈಸಲಾಗುತ್ತಿದೆ. ರಷ್ಯಾ ನಿರ್ಮಿತಿ ಅತ್ಯಾಧುನಿಕ ಐಎಲ್‌ಎಸ್‌ ಉಪಕರಣಗಳು 2024ರ ಆರಂಭಿಕ ತಿಂಗಳಲ್ಲಿ ಕಾರ್ಯಾರಂಭ ಮಾಡಬಹುದು.

ಮಂಜು ಕವಿದ ವಾತಾವರಣ, ಜೋರಾಗಿ ಬೀಳುವ ಮಳೆ, ಕಡಿಮೆ ಬೆಳಕು ಇದ್ದಾಗಲೂ ಐಎಲ್‌ಎಸ್‌ ಉಪಕರಣವು ಪೈಲಟ್‌ಗೆ ನಿಖರವಾಗಿ ತಾಂತ್ರಿಕ ಮಾರ್ಗದರ್ಶನ ಹಾಗೂ ಸಂದೇಶಗಳನ್ನು ರವಾನಿಸುತ್ತದೆ. 550 ಮೀಟರ್‌ ಎತ್ತರದಿಂದ ರನ್‌ವೇ ಅನ್ನು ಸುಲಲಿತವಾಗಿ ನೋಡಬಹುದು. ರನ್‌ವೇ ಕೇಂದ್ರ ವಿದ್ಯುತ್(ಸೆಂಟ್ರಲ್‌ ಲೈಟಿಂಗ್) ಜಾಲವು ಸ್ಪಷ್ಟವಾದ ಹಾದಿ ತೋರಿಸುತ್ತದೆ.

ಕಲಬುರಗಿ–ಗೋವಾ ನಡುವೆ ಅ.28ರ ಬಳಿಕ ವಿಮಾನ ಸೇವೆ ಆರಂಭಿಸುವ ಬಗ್ಗೆ ಅಲಯನ್ಸ್ ಏರ್ ಸಂಸ್ಥೆ ಜತೆಗೆ ಮಾತುಕತೆ ನಡೆಯುತ್ತಿದ್ದು ಇನ್ನು ಅಂತಿಮ ಆಗಿಲ್ಲ
ಚಿಲಕಾ ಮಹೇಶ, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ

ಪ್ರತಿಕೂಲ ವಾತಾವರಣ ಇದ್ದರೆ ವಿಮಾನಗಳು ಅನಗತ್ಯವಾಗಿ ಹಾರಾಟ, ಇಲ್ಲವೆ ಬೇರೊಂದು ನಿಲ್ದಾಣದಲ್ಲಿ ಇಳಿಸಬೇಕಾಗುತ್ತದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗೂ ಇಂಧನದ ಹೊರೆಯಾಗುತ್ತದೆ. ಹೀಗಾಗಿ, ಐಎಲ್‌ಎಸ್‌ ಅಳವಡಿಕೆಯು ಇಂತಹ ಹಲವು ಸಮಸ್ಯೆಗಳಿಗೆ ಇತಿಶ್ರೀ ಹಾಡಲಿದೆ.

‘ರಷ್ಯಾದಿಂದ ಬರುತ್ತಿರುವ ಐಎಲ್‌ಎಸ್‌ ಉಪಕರಣಗಳು ನೆಲಮಟ್ಟದಿಂದ ಕಾರ್ಯಿರ್ವಹಿಸುವ ರಡಾರ್ ಆಧಾರಿತ ತಂತ್ರಜ್ಞಾನವಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ವಿಮಾನ ಭೂಸ್ಪರ್ಶ ಮಾಡಲು ತರಂಗಗಳ(ಫ್ರಿಕ್ವೆನ್ಸಿ) ಮೂಲಕ ಪೈಲಟ್‌ಗೆ ಸಂದೇಶ ರವಾನೆ ಆಗುತ್ತದೆ. ಆ ಸಂದೇಶಗಳನ್ನು ಅನುಸರಿಸಿ ವಿಮಾನವನ್ನು 3 ಡಿಗ್ರಿ ಕೋನದಲ್ಲಿ ತಿರುವು ಪಡೆದು ನಿಧಾನಕ್ಕೆ ರನ್‌ವೇ ಮೇಲೆ ಇಳಿಸಬಹುದು’ ಎನ್ನುತ್ತಾರೆ ನಿಲ್ದಾಣದ ಅಧಿಕಾರಿ.

‘ರನ್‌ವೇ ಸಮೀಪದಲ್ಲೇ ಐಎಲ್‌ಎಸ್‌ ಸ್ಥಾಪಿಸಲಾಗುತ್ತದೆ. ಫೈಬರ್‌ನಂತಹ ಸಲಕರಣೆಗಳನ್ನು ಆಂಟೆನಾಗಳಲ್ಲಿ ಬಳಸುವುದರಿಂದ ವಿಮಾನಗಳು ತಾಕಿದ ತಕ್ಷಣವೇ ಅವು ನೆಲಕ್ಕೆ ಬೀಳುತ್ತವೆ. ಇದರಿಂದ ವಿಮಾನಗಳಿಗೆ ಯಾವುದೇ ತರಹದ ಹಾನಿ ಆಗುವುದಿಲ್ಲ’ ಎಂದರು.

ನಿಲ್ದಾಣದ ಸಮೀಪ ಪೈಲಟ್ ತರಬೇತಿದಾರರಿಗೆ ವಸತಿ ನಿಲಯ ನಿರ್ಮಿಸಿ ಅಂಗವಿಕಲ ಪ್ರಯಾಣಿಕರಿಗೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಆಸನಗಳನ್ನೂ ಕಲ್ಪಿಸಬೇಕು.
ನರಸಿಂಹ ಮೆಂಡನ್, ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯ

ಪ್ರಗತಿಯಲ್ಲಿ ಕಾಮಗಾರಿ

ನಿಲ್ದಾಣದ ಎಂಜಿನಿಯರ್‌ಗಳು ಐಎಲ್‌ಎಸ್‌ ಸಂಬಂಧಿತ ಸಿವಿಲ್ ಕಾಮಗಾರಿಯನ್ನು ಕಳೆದ ಒಂದು ತಿಂಗಳಿಂದ ನಡೆಸುತ್ತಿದ್ದಾರೆ. ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆ ಬಳಿಕ ವಿದ್ಯುತ್ ಜೋಡಣೆ ಕೈಗೆತ್ತಿಕೊಳ್ಳುವರು. ಕೊನೆಯ ಹಂತದಲ್ಲಿ ದೆಹಲಿಯ ತಜ್ಞರ ತಂಡ ಭೇಟಿ ಕೊಟ್ಟು, ಕಾಮಗಾರಿಯ ಗುಣಮಟ್ಟ ಮತ್ತು ಡಿಜಿಸಿಎ ಮಾರ್ಗದರ್ಶನಗಳ ಅನುಸರಣೆಯನ್ನು ಪರಿಶೀಲಿಸುವರು.

ದೆಹಲಿಯ ಪರಿಣಿತ ಎಂಜಿನಿಯರಿಗಳು ಬಂದು 30–40 ದಿನಗಳ ಕಾಲ ಐಎಲ್‌ಎಸ್‌ ಉಪಕರಣಗಳನ್ನು ಜೋಡಿಸುವರು. ಆ ನಂತರ ದೆಹಲಿಯ ವಿಶೇಷ ವಿಮಾನವು ಸುಮಾರು 4 ಗಂಟೆ ನಿಲ್ದಾಣದ ಸುತ್ತ ಹಾರಾಟ ನಡೆಸಿ, ಐಎಲ್‌ಎಸ್‌ನ ಕಾರ್ಯಕ್ಷಮತೆ, ಸಂದೇಶ ರವಾನಿಸುವಿಕೆ, ನ್ಯಾವಿಗೇಷ್‌ನಂತಹ ಕಾರ್ಯಗಳನ್ನು ಪರೀಕ್ಷಿಸಿ, ಪೈಲಟ್‌ ನಿಯಮ ಪಾಲನೆಗಳನ್ನೂ ರಚಿಸುವರು.

ಐಎಲ್‌ಎಸ್‌ಗೆ ₹11 ಕೋಟಿ ವೆಚ್ಚ

‘ಸಿವಿಲ್ ಕಾಮಗಾರಿಯಿಂದ ಹಿಡಿದು ಐಎಲ್‌ಎಸ್ ಉಪಕರಣಗಳ ಜೋಡಣೆ ಹಾಗೂ ಪೈಲಟ್ ಮಾರ್ಗದರ್ಶಿ ವಿನ್ಯಾಸದವರೆಗೆ ಸುಮಾರು ₹11 ಕೋಟಿ ವೆಚ್ಚ ಆಗಬಹುದು’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು. ‘ಉಪಕರಣಗಳಿಗೆ ₹3 ಕೋಟಿ ಸಿವಿಲ್ ಕಾಮಗಾರಿಗೆ ₹4–5 ಕೋಟಿ ವಿದ್ಯುತ್ ದೀಪಗಳ ಜೋಡಣೆಗೆ ₹1 ಕೋಟಿ ಸೇರಿ ಇತರೆ ಕಾರ್ಯಗಳಿಗೆ ಒಟ್ಟು ಅಂದಾಜು ₹ 11 ಕೋಟಿ ವೆಚ್ಚ ಆಗಬಹುದು. ಈಗಾಗಲೇ ರಷ್ಯಾದಿಂದ ಒಂದು ಉಪಕರಣ ದೆಹಲಿ ತಲುಪಿದ್ದು ಇನ್ನೆರಡು ಸಾಧನಗಳು ಬರಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT