ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಪ್ರೋತ್ಸಾಹ: ಪ್ರಿಯಾಂಕ್ ಖರ್ಗೆ

Published 28 ಆಗಸ್ಟ್ 2024, 6:10 IST
Last Updated 28 ಆಗಸ್ಟ್ 2024, 6:10 IST
ಅಕ್ಷರ ಗಾತ್ರ

ಕಲಬುರಗಿ: ‘ಕಲಬುರಗಿ ಮಹಾನಗರ ದಿನೇ ದಿನೇ ಬೆಳೆಯುತ್ತಿದ್ದು, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ‌ ಗಣನೀಯ ಅಭಿವೃದ್ದಿ ಹೊಂದುತ್ತಿದೆ. ಹಾಗಾಗಿ, ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮವಹಿಸಿದ್ದು, ಅಕ್ಕಪಕ್ಕದ ಮಹಾನಗರಗಳಂತೆ ಕಲಬುರಗಿ ಮಹಾನಗರ ಕೂಡಾ ಅಭಿವೃದ್ದಿ ಹೊಂದಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ನಗರದ ಸಮಗ್ರ ಅಭಿವೃದ್ದಿಗೆ ತಾವು ಹಾಗೂ ತಮ್ಮ ಸರ್ಕಾರ ಕಟಿಬದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ನೀಲಿ ನಕ್ಷೆ ತಯಾರಿಸಲಾಗುತ್ತಿದೆ. ಸಾರ್ವಜನಿಕರ‌ ಹಿತದೃಷ್ಟಿ ಹಾಗೂ ಆರ್ಥಿಕ ಅಭಿವೃದ್ದಿಯನ್ನು ಪರಿಗಣಿಸಿ ಅಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕ ವಲಯದ ವಿವಿಧ ಸಂಘ ಸಂಸ್ಥೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿ ಕಲಬುರಗಿಯನ್ನು ವಾಣಿಜ್ಯ ನಗರವನ್ನಾಗಿ ಅಭಿವೃದ್ದಿ‌ಪಡಿಸಲು ಅವಿರತ ಪರಿಶ್ರಮಿಸುತ್ತಿರುವುದಾಗಿ ಸಚಿವರು ಹೇಳಿದ್ದಾರೆ.

ಬಹುಮಹಡಿ ಕಟ್ಟಡಗಳ ನಿರ್ಮಾಣ: ನಗರದ‌ ಜನಸಾಂದ್ರತೆ ಹೆಚ್ಚಾಗುತ್ತಿದ್ದು ನಿವೇಶನಗಳ ದರ ಏರಿಕೆಯಾಗಿದೆ. ಮಧ್ಯಮ ವರ್ಗದ ಜನರ ಅನುಕೂಲತೆ ಹಾಗೂ ಆರ್ಥಿಕ ಅಭಿವೃದ್ದಿಗಾಗಿ ಬಹುಮಹಡಿ ಕಟ್ಟಡಗಳಿಗೆ ಪ್ರೋತ್ಸಾಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರದಲ್ಲಿ ಹೆಚ್ಚು ಹೆಚ್ಚು ಬಹುಮಹಡಿ ಕಟ್ಟಡಗಳು ನಿರ್ಮಾಣಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಸ್ತಾವನೆ: ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರವನ್ನು 11.5 ಮೀಟರ್ ಗಳಿಂದ 15 ಮೀಟರ್‌ಗಳವರೆಗೆ ಏರಿಸುವ ಉದ್ದೇಶದಿಂದ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಯ ಕಲಂ 13 (ಇ) ಅಡಿಯಲ್ಲಿ ವಲಯ ನಿಯಮಾವಳಿಗೆ ತಿದ್ದುಪಡಿ ತರಲು ನಗರಾಭಿವೃದ್ದಿ‌ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನಿರ್ದೇಶನ‌ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಸಲ್ಲಿಸಿದ ಪ್ರಸ್ತಾವನೆಗೆ ಸಂಬಂಧಿಸಿದಂತೆ ನಗರಾಭಿವೃದ್ದಿ‌ ಇಲಾಖೆ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಅಗತ್ಯ ಸಲಹೆ ಹಾಗೂ ಸೂಚನೆ ನೀಡಿದ್ದೆ. ಪರಿಣಾಮವಾಗಿ, ನಗರಾಭಿವೃದ್ದಿ ಇಲಾಖೆ ನಿಯಮಾವಳಿಗೆ ಅಗತ್ಯ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಅಗಸ್ಟ್ 26 ರಂದು ಹೊರಡಿಸಿದ್ದು, 30 ದಿನಗಳ ಒಳಗಾಗಿ ಏನಾದರೂ ಆಕ್ಷೇಪಣೆ ಹಾಗೂ ಸಲಹೆಗಳಿದ್ದರೆ ಸಲ್ಲಿಸುವಂತೆ ಸಾರ್ವಜನಿಕರಿಗೆ ಕೋರಿದೆ ಎಂದು ಸಚಿವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT