ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಮೂರ್ನಾಲ್ಕು ತಿಂಗಳಲ್ಲಿ ಬೆಂಗಳೂರಿಗೆ ಹೊಸ ರೈಲು: ಉಮೇಶ ಜಾಧವ ಭರವಸೆ

Published 29 ಜುಲೈ 2023, 16:14 IST
Last Updated 29 ಜುಲೈ 2023, 16:14 IST
ಅಕ್ಷರ ಗಾತ್ರ

ಕಲಬುರಗಿ: ‘ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಲಬುರಗಿ–ಬೆಂಗಳೂರು ಮಧ್ಯೆ ಹೊಸ ರೈಲು ಆರಂಭವಾಗಲಿದೆ. ಬೆಂಗಳೂರಿನಿಂದ ವಾಡಿಗೆ ವಂದೇ ಭಾರತ್ ರೈಲನ್ನು ಓಡಿಸಲು ರೈಲ್ವೆ ಇಲಾಖೆಗೆ ಶೀಘ್ರವೇ ಪ್ರಸ್ತಾವ ಸಲ್ಲಿಸುವೆ’ ಎಂದು ಸಂಸದ ಡಾ. ಉಮೇಶ ಜಾಧವ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಅಧ್ಯಕ್ಷ ಸುನೀಲ ಕುಲಕರ್ಣಿ ಅವರ ‍ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಕಲಬುರಗಿಯಿಂದ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರಿಗೆ ಸಂಚರಿಸುತ್ತಾರೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ಮಾಹಿತಿಯಿಂದ ಗೊತ್ತಾಗಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಹೊಸ ರೈಲು ಓಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಈ ಭಾಗಕ್ಕೆ ರೈಲ್ವೆ ಸೌಲಭ್ಯ ಒದಗಿಸಲು ಸಂಬಂಧಿಸಿದ ಸಚಿವರಿಗೆ ಸೂಚನೆ ನೀಡುವಂತೆ ಸಂಸದೀಯ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರಿಗೂ ಮನವಿ ಮಾಡಿದ್ದೇನೆ. ಅವರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರೈಲ್ವೆ ಹಾಗೂ ನಾಗರಿಕ ವಿಮಾನಯಾನ ಸಚಿವರನ್ನು ಕರೆಸುವ ಭರವಸೆ ನೀಡಿದ್ದು, ಅಂದು ನನಗೂ ಬರುವಂತೆ ಹೇಳಿದ್ದಾರೆ’ ಎಂದರು.

‘ವಂದೇ ಭಾರತ್ ರೈಲನ್ನು ಒಂದು ಬದಿಯಲ್ಲಿ ಗರಿಷ್ಠ 500 ಕಿ.ಮೀ. ಓಡಿಸಬಹುದು. ಹೀಗಾಗಿ, ಆ ಮಿತಿಗಿಂತ ಕಲಬುರಗಿ–ಬೆಂಗಳೂರು ಮಧ್ಯದ ದೂರ ಹೆಚ್ಚಾಗುತ್ತದೆ. ಹೀಗಾಗಿ, 507 ಕಿ.ಮೀ. ದೂರದ ವಾಡಿವರೆಗೆ ಆರಂಭಿಸುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.

‘ರೈಲ್ವೆ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರು ರೈಲ್ವೆ ವಿಭಾಗ ಆರಂಭಿಸಿದ ಬಳಿಕವೇ ಕಲಬುರಗಿಗೆ ಕಾಲಿಡುವುದಾಗಿ ಶಪಥ ಮಾಡಿದ್ದರು. ದುರದೃಷ್ಟವಶಾತ್ ಅವರ ಸಾವಿನ ಬಳಿಕ ರೈಲ್ವೆ ವಿಭಾಗ ಆರಂಭ ಸಾಧ್ಯವಾಗಿಲ್ಲ. ಮೊದಲ ಆದ್ಯತೆ ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು ಓಡಿಸುವುದಕ್ಕೆ ನೀಡುತ್ತೇನೆ. ನಂತರ ವಿಭಾಗೀಯ ಕಚೇರಿ ಆರಂಭಕ್ಕೆ ಪ್ರಯತ್ನ ಮಾಡುವೆ’ ಎಂದು ಜಾಧವ ತಿಳಿಸಿದರು.

‘ನಿತ್ಯ ಬೆಂಗಳೂರು–ಕಲಬುರಗಿ ಮಧ್ಯೆ ವಿಮಾನ ಸಂಚಾರ ಆರಂಭವಾಗಿದೆ. ಮುಂಚೆ ವಾರದಲ್ಲಿ ಕೆಲವು ದಿನ ಸಂಚಾರ ಇರಲಿಲ್ಲ. ಕಲಬುರಗಿ ವಿಮಾನ ನಿಲ್ದಾಣವು ಅತ್ಯಂತ ಸಕ್ರಿಯ ವಿಮಾನ ನಿಲ್ದಾಣವಾಗಿದೆ. ಇಬ್ಬರು ರೋಗಿಗಳನ್ನು ಇಲ್ಲಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ. ಕಲಬುರಗಿಯಿಂದ ಮುಂಬೈ, ಅಜ್ಮೇರ್‌ಗೆ ವಿಮಾನ ಸಂಚಾರ ಆರಂಭಿಸುವ ಉದ್ದೇಶವಿದೆ. ವಿವಿಧ ವಿಮಾನಯಾನ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಬೆಂಗಳೂರು–ಕಲಬುರಗಿ–ಮುಂಬೈ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸುವಂತೆ ಮಾತುಕತೆ ನಡೆಸಲಾಗುವುದು’ ಎಂದರು.

ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ‘ಜಿಲ್ಲೆಗೆ ಹೆಚ್ಚು ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸಚಿವರ ಮನವೊಲಿಸಬೇಕು’ ಎಂದರು.

ಇದಕ್ಕೆ ಉತ್ತರಿಸಿದ ಜಾಧವ, ‘ಕೆಕೆಸಿಸಿಐನ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ದು ಸಚಿವರನ್ನು ಭೇಟಿ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮ ಸಂಯೋಜನೆ ಉಪ ಸಮಿತಿ ಅಧ್ಯಕ್ಷ ರವಿಶಂಕರ್ ಜಮಾದಾರಖಾನಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ವೇದಿಕೆಯಲ್ಲಿದ್ದರು.

ಟೆಕ್ಸ್‌ಟೈಲ್ ಪಾರ್ಕ್:
‘ಪ್ರಜಾವಾಣಿ’ ವರದಿ ಪ್ರಸ್ತಾಪ ಸಂವಾದದ ಸಂದರ್ಭದಲ್ಲಿ ಕಲಬುರಗಿಯ ಹೊನ್ನಕಿರಣಗಿ ಬಳಿ ಕೇಂದ್ರ ಸರ್ಕಾರದ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಪ್ರಸ್ತಾಪಿಸಿದ ಸಂಸದ ಡಾ. ಉಮೇಶ ಜಾಧವ ಅವರು ‘ಟೆಕ್ಸ್‌ಟೈಲ್ ಪಾರ್ಕ್‌ ಜಿಲ್ಲೆಗೆ ತರುವುದು ನನ್ನ ಜೀವಮಾನದ ಕನಸಾಗಿತ್ತು. ಕಲಬುರಗಿಗೆ ಪಾರ್ಕ್ ಘೋಷಣೆಯಾಗಿದ್ದು ಸುಮಾರು ಒಂದೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಪಾರ್ಕ್ ಆರಂಭಕ್ಕಾಗಿ ಕೇಂದ್ರ ಸರ್ಕಾರವು ತಂಡವೊಂದನ್ನು ರಚಿಸಿದ್ದು ಪ್ರತಿವಾರ ಸಭೆ ನಡೆಸುತ್ತಿದೆ. ರೇಮಂಡ್ಸ್‌ನಂತಹ ಪ್ರಖ್ಯಾತ ಸಂಸ್ಥೆಗಳು ಇಲ್ಲಿಗೆ ಬರಲು ಉತ್ಸಾಹ ತೋರಿಸಿವೆ. ಜೊತೆಗೆ ಇಲ್ಲಿ ಕೆಲಸ ಮಾಡುವವರಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಪಂಚತಾರಾ ಹೋಟೆಲ್‌ ಗಾಲ್ಫ್ ಕ್ಲಬ್ ತಲೆ ಎತ್ತಲಿದೆ. ಕೆಲವೇ ತಿಂಗಳಲ್ಲಿ ಪಾರ್ಕ್ ಕಾರ್ಯಾರಂಭ ಮಾಡಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ರಾಜ್ಯದ ಜವಳಿ ಸಚಿವ ಶಿವಾನಂದ ಪಾಟೀಲ ಅವರೂ ಪಾರ್ಕ್ ಶೀಘ್ರ ಕಾರ್ಯಾರಂಭಕ್ಕೆ ಆಸಕ್ತಿ ವಹಿಸಿದ್ದಾರೆ’ ಎಂದರು. ಇತ್ತೀಚೆಗೆ ’ಕಡತಕ್ಕೇ ಸೀಮಿತವಾದ ಜವಳಿ ಪಾರ್ಕ್‘ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಪ್ರಕಟಿಸಿತ್ತು.
ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಜಿಮ್ಸ್ ಆಸ್ಪತ್ರೆಯಲ್ಲಿ ಸುಸಜ್ಜಿತ ಡಯಾಲಿಸಿಸ್ ಘಟಕವನ್ನು ಆರಂಭಿಸಲು ಈಗಾಗಲೇ ಸಂಸದರ ನಿಧಿಯಿಂದ ಹಣ ತೆಗೆದಿರಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಜಿಮ್ಸ್‌ನಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲು ಬಜೆಟ್‌ನಲ್ಲಿ ಹಣ ಹೊಂದಿಸಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು. ಕೆಕೆಸಿಸಿಐ ಮಾಜಿ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ‘ಕಿಡ್ನಿ ಕಳೆದುಕೊಂಡು ಡಯಾಲಿಸಿಸ್ ಅನಿವಾರ್ಯವಾದ ಕುಟುಂಬದವರಿಗೆ ಮಾತ್ರ ಇದರ ಸಮಸ್ಯೆ ಅರ್ಥವಾಗುತ್ತದೆ. ಡಯಾಲಿಸಿಸ್ ಹಂತ ಮೀರಿದರೆ ಕಿಡ್ನಿಯನ್ನು ಬದಲಿಸಬೇಕಾಗುತ್ತದೆ. ಇದು ಅತ್ಯಂತ ದುಬಾರಿಯಾದುದು ಹಾಗೂ ಕಿಡ್ನಿ ದಾನಿಗಳು ಸಿಗುವುದಿಲ್ಲ’ ಎಂದರು. ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರವನ್ನು ಖಾಸಗಿಯವರಿಗೆ ವಹಿಸಲಾಗಿದ್ದು ಸರಿಯಾಗಿ ನಿರ್ವಹಿಸುತ್ತಿಲ್ಲ. ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಲಾಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರೋಗಿಗಳೇ ಡಯಾಲಿಸಿಸ್‌ಗೆ ಬೇಕಾದ ಪರಿಕರಗಳನ್ನು ಹೊರಗಿನಿಂದ ತರಬೇಕಿದೆ ಎಂದು ಶರಣು ಪಪ್ಪಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT