ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಉತ್ತಮ ವರ್ಷಧಾರೆ; ರೈತರ ಮೊಗದಲ್ಲಿ ಮಂದಹಾಸ

ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ವಾಡಿಕೆಗಿಂತ 53 ಮಿ.ಮೀ ಮಳೆ ಜಾಸ್ತಿ
Published 6 ಜೂನ್ 2024, 5:05 IST
Last Updated 6 ಜೂನ್ 2024, 5:05 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ಅನ್ನದಾತನಿಗೆ ಈ ಬಾರಿ ಸುರಿದ ಪೂರ್ವ ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಚೆನ್ನಾಗಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಈಗಾಗಲೇ ಜಮೀನು ಹದಮಾಡಿ ರೈತರು ಬಿತ್ತನೆಗೆ ಅಣಿಗೊಳಿಸುತ್ತಿದ್ದಾರೆ. ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 8,65,885 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ 81,203 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಆಶ್ರಿತ ಬೆಳೆಗಳಾದ ಲಿಂಬೆ, ಪಪ್ಪಾಯ, ಮಾವು, ಕಬ್ಬು ಸೇರಿ ವಿವಿಧ ಬೆಳೆಗಳು ಬೆಳೆಯಲಾಗುತ್ತಿದೆ.

ಕಳೆದ ವರ್ಷ ಮಳೆಯ ಕೊರತೆ, ಕೆಲವು ಪ್ರದೇಶಗಳಲ್ಲಿ ಮಳೆ ಹೆಚ್ಚಳವಾಗಿದ್ದರಿಂದ ತೊಗರಿ ಬೆಳೆ ಇಳುವರಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ಹೆಸರು, ಸೋಯಾಬಿನ್‌, ಉದ್ದು, ಸೇರಿದಂತೆ ಇನ್ನಿತರ ಅಲ್ಪಾವಧಿ ಬೆಳೆಗಳ ಬೀಜಗಳಿಗೂ ಸಹ ಹೆಚ್ಚಿನ ಬೇಡಿಕೆ ಬಂದಿದೆ.

‘ತೊಗರಿ 6,801 ಕ್ವಿಂಟಲ್‌, ಹೆಸರು 642 ಕ್ವಿಂಟಲ್‌, ಉದ್ದು 412.07 ಕ್ವಿಂಟಲ್‌, ಸೋಯಾಬಿನ್‌ 11,255.05 ಕ್ವಿಂಟಲ್‌ ಸೇರಿ ಒಟ್ಟು 19,461 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಗುರಿ ಹೊಂದಲಾಗಿದೆ. ಹೆಚ್ಚುವರಿ ಬೇಡಿಕೆ ಇರುವುದರಿಂದ ಒಟ್ಟು 21,021 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅದರಲ್ಲಿ 5,459 ಕ್ವಿಂಟಲ್‌ ಬಿತ್ತನೆ ಬೀಜ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ಮಾಹಿತಿ ನೀಡಿದರು.

‘ಮುಂಗಾರು ಹಂಗಾಮಿನಲ್ಲಿ ಒಟ್ಟು 88,592 ಮೆಟ್ರಿಕ್ ಟನ್‌ ಗೊಬ್ಬರ ಬೇಡಿಕೆ ಇದ್ದು, ಯೂರಿಯಾ 32,496 ಮೆಟ್ರಿಕ್ ಟನ್‌, ಡಿಎಪಿ 27,215 ಮೆಟ್ರಿಕ್ ಟನ್‌, ಕಾಂಪ್ಲೆಕ್ಸ್ 23,495 ಮೆಟ್ರಿಕ್ ಟನ್‌, ಎಂಒಪಿ 2,135 ಮೆಟ್ರಿಕ್ ಟನ್‌ ಹಾಗೂ ಎಸ್‌ಎಸ್‌ಪಿ 3,251 ಮೆಟ್ರಿಕ್ ಟನ್‌ ಗೊಬ್ಬರ ಸೇರಿ ಒಟ್ಟು 51,004 ಮೆಟ್ರಿಕ್‌ ಟನ್‌ ದಾಸ್ತಾನು ಇದ್ದು, ರಸಗೊಬ್ಬರ ಕೊರತೆ ಇಲ್ಲ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೆಚ್ಚು ಮಳೆ ದಾಖಲು: ಜಿಲ್ಲೆಯಲ್ಲಿ ವಾಡಿಕೆಯಂತೆ ಜನವರಿ 1ರಿಂದ ಜೂನ್‌ 5ರವರೆಗೆ 80 ಮಿ.ಮೀ ಮಳೆ ಆಗಬೇಕಿತ್ತು, ಆದರೆ, 133 ಮಿ.ಮೀ. ಮಳೆಯಾಗಿದೆ. ಅಫಜಲಪುರ ತಾಲ್ಲೂಕಿನಲ್ಲಿ 166 ಮಿ.ಮೀ, ಆಳಂದ ತಾಲ್ಲೂಕಿನಲ್ಲಿ 160 ಮಿ.ಮೀ, ಚಿತ್ತಾಪುರ ತಾಲ್ಲೂಕಿನಲ್ಲಿ 160.9 ಮಿ.ಮೀ. ಕಲಬುರಗಿ ತಾಲ್ಲೂಕಿನಲ್ಲಿ 129.9 ಮಿ.ಮೀ, ಸೇಡಂ ತಾಲ್ಲೂಕಿನಲ್ಲಿ 124 ಮಿ.ಮೀ, ಕಮಲಾಪುರ ತಾಲ್ಲೂಕಿನ 114 ಮಿ.ಮೀ, ಶಹಾಬಾದ್ ತಾಲ್ಲೂಕಿನಲ್ಲಿ 143 ಮಿ.ಮೀ, ಜೇವರ್ಗಿ ತಾಲ್ಲೂಕಿನಲ್ಲಿ 113 ಮಿ.ಮೀ, ಚಿಂಚೋಳಿಯಲ್ಲಿ 99 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.

ಸಮದ್‌ ಪಟೀಲ್‌
ಸಮದ್‌ ಪಟೀಲ್‌

ಈ ಬಾರಿ ಸುಮಾರು 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚಿನ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

-ಸಮದ್‌ ಪಟೇಲ್‌ ಕೃಷಿ ಇಲಾಖೆ ಜಂಟಿ ನಿರ್ದೇಶಕ

ತೊಗರಿ ಬಿತ್ತನೆ ಹೆಚ್ಚಳ ನಿರೀಕ್ಷೆ

ಬರ ಹಾಗೂ ಹಸಿ ಬರದ ಕಾರಣದಿಂದ ಈ ಬಾರಿ ತೊಗರಿ ಇಳುವರಿ ಪ್ರಪಾತ ಕಂಡಿತ್ತು. ಅದನ್ನು ಮನಗಂಡು ಮತ್ತೆ ತೊಗರಿ ಬೆಲೆ ಏರಿಕೆಯಾಗಬಹುದು ಎಂಬ ಕಾರಣದಿಂದ ರೈತರು ತೊಗರಿ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 593050 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT