ಗುರುವಾರ , ಡಿಸೆಂಬರ್ 5, 2019
20 °C
ವಿವಾದದ ಸುಳಿಯಲ್ಲಿ ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭ

ಶಿಷ್ಟಾಚಾರ ಉಲ್ಲಂಘಿಸಿ ಮುರಳಿಧರರಾವ್‌ಗೆ ವೇದಿಕೆಯಲ್ಲಿ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಮುರಳಿಧರರಾವ್‌ ಹಾಗೂ ಬಿಜೆಪಿ ಮುಖಂಡರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಶಿಷ್ಟಾಚಾರ ಉಲ್ಲಂಘಿಸಲಾಯಿತು. ಇದರಿಂದ ಅಧಿಕಾರಿಗಳು ಮುಜುಗರಕ್ಕೀಡಾದರು. ಸ್ವಾಗತ ಭಾಷಣ ಮಾಡಿದ ಜಿಲ್ಲಾಧಿಕಾರಿಯಿಂದ ಒತ್ತಾಯ ಪೂರ್ವಕವಾಗಿ ಅವರ ಹೆಸರನ್ನು ಹೇಳಿಸಲಾಯಿತು.

ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.

‘ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸಿ ಈ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕಾರಣರಾದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಬೇಕು’ ಎಂದು ಕಾಂಗ್ರೆಸ್ಸಿಗರು ಆಗ್ರಹಿಸಿದ್ದರು. ಶಿಷ್ಟಾಚಾರದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದ್ದರು. ಜಿಲ್ಲಾಧಿಕಾರಿ ಸೌಜನ್ಯಕ್ಕೂ ತಮಗೆ ಕರೆ ಮಾಡಿ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್‌ನ ನಾಲ್ವರು ಶಾಸಕರು ಸಮಾರಂಭ ಬಹಿಷ್ಕರಿಸಿದ್ದರು.

ಶಿಷ್ಟಾಚಾರ ಉಲ್ಲಂಘನೆ ಕುರಿತು ಸಮಜಾಯಿಷಿ ನೀಡಿದ ಸಂಸದ ಡಾ.ಜಾಧವ, ‘ಕಾರ್ಯಕ್ರಮಕ್ಕೆ ಬಹಳ ಜನ ನಾಯಕರು ಬಂದಿದ್ದರು. ಪ್ರಮುಖ ಮುಖಂಡರು ಬಂದರೆ ಅವರಿಗೆ ವೇದಿಕೆಯಲ್ಲಿ ಜಾಗ ಕಲ್ಪಿಸುವಂತೆ ನಾನೇ ಖುದ್ದಾಗಿ ಮನವಿ ಮಾಡಿದ್ದೆ. ವೇದಿಕೆಯಲ್ಲಿ ಶಿಷ್ಟಾಚಾರದ ಪಟ್ಟಿಯಲ್ಲಿ ಹೆಸರಿಲ್ಲದ ಮಾಜಿ ಸಂಸದ ಡಾ.ಬಸವರಾಜ ಪಾಟೀಲ ಸೇಡಂ, ಮಾಲೀಕಯ್ಯ ಗುತ್ತೇದಾರ ಅವರೂ ಕುಳಿತಿದ್ದರು. ಒಮ್ಮೊಮ್ಮೆ ಹೀಗಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬರಬೇಡಿ ಎಂದು ಹೇಳಿರಲಿಲ್ಲ. ಅವರಿಗೂ ಆಹ್ವಾನ ನೀಡಲಾಗಿತ್ತು’ ಎಂದರು.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ‘ಖರ್ಗೆ ಅವರು ಪ್ರಯತ್ನಿಸದಿದ್ದರೆ ವಿಮಾನ ನಿಲ್ದಾಣವೇ ಇರುತ್ತಿರಲಿಲ್ಲ. ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಯಬೇಕು ಎಂದು ನಾವು ಮನವಿ ಮಾಡಿದ್ದೆವು. ಅದಕ್ಕೂ ಮಾನ್ಯತೆ ಸಿಗಲಿಲ್ಲ. ಈಗ ನೋಡಿದರೆ ಶಿಷ್ಟಾಚಾರ ಉಲ್ಲಂಘಿಸಿ ಬಿಜೆಪಿ ಮುಖಂಡರಿಗೆ ಅವಕಾಶ ಕಲ್ಪಿಸಿದ್ದನ್ನು ಸಂಸದ ಉಮೇಶ ಜಾಧವ್ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು