ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆ ತೆರವು; ಕಲಬುರ್ಗಿ ಸಂಪೂರ್ಣ ಸ್ತಬ್ದ

ಮುಚ್ಚಿದ ಇಂದಿರಾ ಕ್ಯಾಂಟೀನ್; ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿದ ಪೊಲೀಸರು
Last Updated 24 ಮಾರ್ಚ್ 2020, 18:12 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ವಾರದವರೆಗೆ ರಾಜ್ಯದಾದ್ಯಂತ ಲಾಕ್‌ಡೌನ್‌ ಘೋಷಿಸಿರುವುದರಿಂದ ಮಂಗಳವಾರ ಇಡೀ ನಗರ ಸ್ತಬ್ದವಾಗಿತ್ತು. ಕಣ್ಣಿ ಮಾರ್ಕೆಟ್‌ಗೆ ಮಾರಾಟಕ್ಕೆ ಬಂದಿದ್ದ ತರಕಾರಿ ವ್ಯಾಪಾರಿಗಳನ್ನು ಪೊಲೀಸರು ಬಲವಂತದಿಂದ ತೆರವುಗೊಳಿಸಿದರು.

ಭಾನುವಾರದ ಜನತಾ ಕರ್ಫ್ಯೂ ಪರಿಸ್ಥಿತಿಯೇ ಮಂಗಳವಾರವೂ ಕಂಡು ಬಂತು. ಬಸ್‌, ರೈಲುಗಳು ಬಂದ್‌ ಆಗಿದ್ದು, ಆಟೊಗಳ ಸಂಚಾರವೂ ಸ್ಥಗಿತಗೊಂಡಿತ್ತು.

ಹೊರಗೆ ಕುತೂಹಲಕ್ಕೆಂದು ಬೈಕ್‌ನಲ್ಲಿ ಬಂದ ಯುವಕರಿಗೆ ಲಾಳಗೇರಿ ಕ್ರಾಸ್‌, ಪೊಲೀಸ್‌ ಚೌಕ್, ಶಹಾ ಬಜಾರ್ ಲಾಲ್‌ ಹನುಮಾನ್ ಮಂದಿರ, ಹುಮನಾಬಾದ್‌ ಬೇಸ್‌, ಮುಸ್ಲಿಂ ಚೌಕ್, ಕೆಬಿಎನ್‌ ದರ್ಗಾ ಬಳಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಇಂದಿರಾ ಕ್ಯಾಂಟೀನ್‌ ಬಂದ್

ಹೆಚ್ಚು ಜನಸಂದಣಿಯಾದರೆ ಕೊರೊನಾ ಸೋಂಕು ಹರಡುವ ಭೀತಿಯಿಂದ ಏಪ್ರಿಲ್‌ 1ರವರೆಗೂ ಸರ್ಕಾರದ ಆದೇಶದ ಮೇರೆಗೆ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲಾಯಿತು.

ವಿಮಾನಯಾನ ರದ್ದು

ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಬೆಂಗಳೂರು–ಕಲಬುರ್ಗಿ ಮಧ್ಯೆ ಸಂಚರಿಸುತ್ತಿದ್ದ ಅಲಯನ್ಸ್‌ ಏರ್‌ ಹಾಗೂ ಸ್ಟಾರ್‌ ಏರ್ ವಿಮಾನಗಳು ತಮ್ಮ ಸಂಚಾರವನ್ನು ಬುಧವಾರದಿಂದ ಸ್ಥಗಿತಗೊಳಿಸಿವೆ.

31ರವರೆಗೆ ನಿಷೇಧಾಜ್ಞೆ ವಿಸ್ತರಣೆ

ರಾಜ್ಯದಾದ್ಯಂತ ಸರ್ಕಾರ ಲಾಕ್‌ಡೌನ್‌ ಘೋಷಿಸಿದ್ದರಿಂಧ ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು 144 ಕಲಂ ಅನ್ವಯ ಮಾರ್ಚ್‌ 31ರವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಅಂಚೆ ಕಚೇರಿಗಳು ತಾತ್ಕಾಲಿಕ ಬಂದ್

ಕೊರೊನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ನಗರದ ಸಿ.ಬಿ.ಎಸ್., ಎಂ.ಎಸ್.ಕೆ. ಮಿಲ್, ದರ್ಗಾ, ಮೋಮಿನಪುರ, ಶಿವಾನ ನಗರ ಹಾಗೂ ಶಹಾಬಜಾರಗಳಲ್ಲಿರುವ ಅಂಚೆ ಕಚೇರಿಗಳನ್ನು ಮಾರ್ಚ್ 23ರಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರ್ಗಿ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಬಿ.ಆರ್. ನನಜಗಿ ತಿಳಿಸಿದ್ದಾರೆ.

ಪರ್ಯಾಯವಾಗಿ ಪ್ರಧಾನ ಅಂಚೆ ಕಚೇರಿ, ರೈಲ್ವೆ ಸ್ಟೇಷನ್, ಕಲಬುರ್ಗಿ ಬಹುಮನಿಪುರ, ಕಲಬುರಗಿ ನೆಹರೂ ಗಂಜ್, ಕಲಬುರ್ಗಿ ಜಿಜಿಎಚ್., ಜೆ. ಗಂಗಾ ಹಾಗೂ ಎಚ್.ಸಿ.ಸಿ.ಬಿ. ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಈ ಅಂಚೆ ಕಚೇರಿಗಳ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ.

ಪತ್ರಿಕೆ ವಿತರಣೆಗೆ ತೊಂದರೆ ಇಲ್ಲ

‘ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮವನ್ನು ಅತ್ಯವಶ್ಯಕ ಸೇವೆಗಳ ಪಟ್ಟಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿಸಿವೆ. ಹೀಗಾಗಿ, ಪತ್ರಿಕೆಗಳ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಪತ್ರಿಕಾ ವಿತರಕರ ಕೆಲಸಕ್ಕೆ ಅಡ್ಡಿ ಮಾಡದಂತೆ ನಮ್ಮ ಪೊಲೀಸ್‌ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ‘ಪ‍್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪತ್ರಿಕೆಗಳು ಜನರಿಗೆ ಬೇಕಾದ ಅತ್ಯಗತ್ಯ ಸುದ್ದಿಗಳನ್ನು ಮನೆಮನೆಗೆ ತಲುಪಿಸುತ್ತಿವೆ. ಸರ್ಕಾರ ಹಾಗೂ ಜನರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ. ಹೀಗಾಗಿ, ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.

‘ಜನರು ಎಷ್ಟು ಹೇಳಿದರೂ ಹೊರಗೆ ಬರುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ಮಂಗಳವಾರ ಬಿಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೆ. ಬುಧವಾರ ತರಕಾರಿ, ದಿನಸಿ, ಹಾಲು ಸೇರಿದಂತೆ ಅತ್ಯಗತ್ಯ ವಸ್ತುಗಳು ಲಭ್ಯವಾಗಲಿವೆ. ಆದರೆ, ವಸ್ತುಗಳನ್ನು ಖರೀದಿಸಿದ ತಕ್ಷಣವೇ ಮನೆ ಸೇರಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಪೊಲೀಸರಿಗೆ ಸೂಚನೆ ನೀಡಿದ್ದೇನೆ’

‘ಗ್ರಾಮಾಂತರ ಭಾಗದಲ್ಲಿ ಪತ್ರಿಕಾ ವಿತರಕರ ಕೆಲಸಗಳಿಗೆ ಅಡ್ಡಿ ಮಾಡದಂತೆ ಜಿಲ್ಲಾ ವ್ಯಾಪ್ತಿಯ ಎಲ್ಲ ಠಾಣೆಗಳ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾಗೇನಾದರೂ ತೊಂದರೆಯಾದರೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT