ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌಢ್ಯದ ವಿರುದ್ಧ ಹೋರಾಡಿದ ಕನಕರು’

Last Updated 5 ಡಿಸೆಂಬರ್ 2020, 3:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕುಲ ಕುಲವೆಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ...’ ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಸ್ಥಾಪಿತ ಮೌಢ್ಯಗಳನ್ನು ಕಳೆಯಲು ಶ್ರಮಿಸಿದ, ಸಮಾಜದ ಡೊಂಕುಗಳನ್ನು ತಮ್ಮ ಕೀರ್ತನೆಗಳಿಂದ ತಿದ್ದಿದ ದಾಸಶ್ರೇಷ್ಠ, ಕವಿ ಕನಕದಾಸರು’ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನೀಲಾಂಬಿಕಾ ಶೇರಿಕಾರ ತಿಳಿಸಿದರು.

ಮಹಾವಿದ್ಯಾಲಯದಲ್ಲಿ ಗುರುವಾರ ಕನಕದಾಸ ಜಯಂತಿ ಆಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಮ ಸಮಾಜದ ನಿರ್ಮಾಣಕ್ಕಾಗಿ ಕೀರ್ತನೆಗಳ ಮೂಲಕ ಅರಿವು ಮೂಡಿಸಿದ ಕನಕದಾಸರು, ಸಮಾಜದಲ್ಲಿ ಅಂಧಕಾರ, ಮೂಢನಂಬಿಕೆ, ಜಾತಿ ಭೇದ, ದುಶ್ಚಟಗಳನ್ನು ದೂರ ಮಾಡಿ ಸಹನೆ, ಸದ್ಬುದ್ಧಿ, ಸದಾಚಾರ, ಸಹಬಾಳ್ವೆ ಮುಂತಾದ ಮಾನವೀಯ ಗುಣಗಳನ್ನು ಬಿತ್ತಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ದಾಸರ ಕೊಡುಗೆ ಅಪಾರವಾಗಿದೆ’‌ ಎಂದರು.

‘ದಾಸ ಸಾಹಿತ್ಯ ಕರ್ನಾಟಕದಲ್ಲಷ್ಟೇ ಅಲ್ಲದೆ ವಿಶ್ವ ಮನ್ನಣೆಯನ್ನು ಗಳಿಸಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದ ಸಾಹಿತ್ಯ. ಕೀರ್ತನೆಗಳ ಮೂಲಕ ಸಮಾಜ ಸುಧಾರಣೆ ಮಾಡಿದವರಲ್ಲಿ ಪುರಂದರದಾಸರು, ವೈಚಾರಿಕ ಕ್ರಾಂತಿಯ ಹರಿಕಾರರಾಗಿ ಕನಕದಾಸರು ಕಂಗೊಳಿಸುತ್ತಾರೆ. ಅವರು ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಮೋಹನ ತರಂಗಿಣಿ, ನಳ ಚರಿತೆ, ರಾಮಧಾನ್ಯಚರಿತೆ, ಹರಿಭಕ್ತಿಸಾರ ಹಾಗೂ ಮುಂಡಿಗೆಗಳನ್ನು ರಚಿಸಿ, ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

‘ಕನಕದಾಸರ ವಿಚಾರಗಳು ಸಾಮಾಜಿಕ ಬದುಕಿನ ಒಳಿತು ಕೆಡುಕುಗಳನ್ನು ತಿಳಿಸುತ್ತಾ ಭಕ್ತಿಯನ್ನು ಅರಸುತ್ತಲೇ ಆತ್ಮಶೋಧನೆಯೊಂದಿಗೆ ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತಿವೆ. ಅವರ ಕೃತಿಗಳಲ್ಲಿನ ವೈವಿಧ್ಯಮಯ ಶೈಲಿ, ಜೀವನ ಪ್ರಜ್ಞೆ, ಉದಾತ್ತ ವ್ಯಕ್ತಿತ್ವ ಸ್ವಜೀವನದ ಅನುಭವದೊಂದಿಗೆ ಸಾತ್ವಿಕ ಬದುಕನ್ನು ಬಾಳಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ತಿಳಿಸಿದರು.

ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ.ಇಂದಿರಾ ಶೇಟಕಾರ, ಡಾ.ಸೀಮಾ ಪಾಟೀಲ, ಡಾ.ಸಿದ್ದಮ್ಮ ಗುಡೇದ್, ಡಾ.ಪುಟ್ಟಮಣಿ ದೇವಿದಾಸ, ಜಾನಕಿ ಹೊಸೂರ, ಕೃಪಾಸಾಗರ ಗೊಬ್ಬುರ ಬೋಧಕೇತ ಸಿಬ್ಬಂದಿಯವರಾದ ವಿನೋದ ಹಳಕಟ್ಟಿ ಮತ್ತು ಅಶೋಕ ಮೂಲಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT