ಶನಿವಾರ, ಮೇ 21, 2022
23 °C
ಕಮಲಾಪುರ: 18ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ, 10 ನಿರ್ಣಯ ಅಂಗೀಕಾರ

ಕೌಟುಂಬಿಕ, ಸಾಮಾಜಿಕ ಸಮಸ್ಯೆಗೆ ಕನ್ನಡಿಯಾದ ಗೋಷ್ಠಿಗಳು

ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ‘ದೇಶದಲ್ಲಿರುವ ವೃದ್ಧರಲ್ಲಿ ಶೇ 65ರಷ್ಟು ಮಂದಿ ಅವರ ಕುಟುಂಬದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಶೇ 25ರಷ್ಟು ವೃದ್ಧರನ್ನು ಕುಟುಂಬದಿಂದಲೇ ಹೊರ ಹಾಕಲಾಗಿದೆ. ಸರ್ಕಾರ ಹೇಳುವ ಈ ಅಂಕಿ ಅಂಶಗಳು ಸಮಾಜದ ನೈತಿಕ ದಾರಿದ್ರ್ಯಕ್ಕೆ ಸಾಕ್ಷಿ’ ಎಂದು ವೈದ್ಯ, ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದಲ್ಲಿ ಆಯೋಜಿಸಿದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಗುರುವಾರ ‘ಕೌಟುಂಬಿಕ ವ್ಯವಸ್ಥೆ– ಬದಲಾವಣೆಯ ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಅವರು ‘ವೃದ್ಧರ ಅತಂತ್ರ ಸ್ಥಿತಿ’ ಕುರಿತು ಮಾತನಾಡಿದರು.

‘ಕೌಟುಂಬಿಕ ವ್ಯವಸ್ಥೆ ಸಡಿಲಗೊಂಡು ಬಂಧುಗಳೇ ಅಪರಿಚಿತರ ರೀತಿ ವರ್ತಿಸುವ ದಿನಗಳು ಈಗ ಬಂದಿವೆ. ಜೀವನಪೂರ್ತಿ ಸಾಕಿದ ತಂದೆ– ತಾಯಿಯನ್ನೇ ಮಕ್ಕಳು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಅವರಲ್ಲಿ ದೈಹಿಕ ಮತ್ತು ಮಾನಸಿಕ ದೌರ್ಬಲ್ಯವೂ ಕಾಡುತ್ತದೆ. ಮಕ್ಕಳನ್ನು ನಂಬಬೇಕು. ಆದರೆ, ಅವರನ್ನು ಅವಲಂಬಿಸಬಾರದು’ ಎಂದರು.

‘ವಯಸ್ಸಾದ ಮೇಲೆ ಕೆಲವರಿಗೆ ನಿರಾಸೆ– ಕೆಲವರಿಗೆ ದುರಾಸೆ ಉಂಟಾಗುತ್ತವೆ. ಇವೆರಡೂ ಆರೋಗ್ಯಕ್ಕೆ ಮಾರಕ. ಆಸೆ ಇಟ್ಟುಕೊಂಡರೆ ಸಾಕು. ಸಕಾರಾತ್ಮಕ ಆಲೋಚನೆ, ಸಮಾಧಾನದ ಚಟುವಟಿಕೆ, ಆತ್ಮಬಲಗಳು ನಿಮ್ಮನ್ನು ದೀರ್ಘಾಯುಷಿ ಮಾಡುತ್ತವೆ. ವೃದ್ಧರಾಗಲು ಸಿದ್ಧರಾಗುವ ಮನಸ್ಥಿತಿಯೂ ಬಹಳ ಮುಖ್ಯ’ ಎಂದರು.

‘ಸಂಬಂಧಗಳಲ್ಲಿ ಬಿರುಕು– ಬವಣೆ’ ಕುರಿತು ವಿಷಯ ಮಂಡಿಸಿದ ಚಿಂತಕಿ ಪ್ರೊ.ಜಯಶ್ರೀ ಬಿ. ಚಟ್ನಳ್ಳಿ, ‘ನಮ್ಮ ಪೂರ್ವಜರ ನೈತಿಕ ಬಲದಿಂದ ಹಿಂದೆ ಅವಿಭಕ್ತ ಕುಟುಂಬಗಳು ಬದುಕಿದ್ದವು. ಹಿಂದೆ ಹಿರಿಯರೇ ಎಲ್ಲವನ್ನೂ ಮದುವೆ ಸಂಬಂಧ ಬೆಳೆಸುತ್ತಿದ್ದರು. ಮದುವೆ ದಿನ ನಿಶ್ಚಯವಾಗುವವರೆಗೂ ವರ– ವಧುವಿಗೆ ಗೊತ್ತೇ ಇರುತ್ತಿರಲಿಲ್ಲ. ಆದರೆ, ಈಗ ಹಿರಿಯರಿಗೆ ಏನನ್ನೂ ತಿಳಿಸದೇ ಮದುವೆಗಳು ನಡೆಯುತ್ತಿವೆ. ಕಾಲಚಕ್ರದ ಅಡಿಯಲ್ಲಿ ಸಿಕ್ಕ ಸಂಬಂಧಗಳು ವಿಚಿತ್ರ ರೀತಿಯಲ್ಲಿ ಬಿರುಕು ಪಡೆಯುತ್ತಿವೆ. ಇದು ಸಾಮಾಜಿಕ ಅನಾರೋಗ್ಯದ ಲಕ್ಷಣ’ ಎಂದರು.

‘ಯುವಜನಾಂಗದ ಮನೋಭಾವ’ ಕುರಿತು ಪ್ರೊ.ನರೇಂದ್ರ ಬಡಶೇಷಿ ವಿಷಯ ಮಂಡಿಸಿದರು. ಶಿಲ್ಪಕಲಾ ಅಕಾಡೆಮಿ ಸದಸ್ಯ ನಟರಾಜ ಶಿಲ್ಪಿ, ಬಿಇಒ ವೀರಣ್ಣ ಬೊಮ್ಮನಳ್ಳಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸೇವಂತಾ ಚವಾಣ್, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ತಪಲಿ, ವೀರೇಶ ಬಿರಾದಾರ, ಸತೀಶ ಸೊರಡೆ, ಮಂಜುನಾಥ ಹಾಗರಗಿ, ರವಿ ದೇಗಾಂವ, ಸುನೀಲ ಚೌಧರಿ, ವಿಜಯಕುಮಾರ ಚೌಧರಿ, ಅಣ್ಣಾರಾವ ಶೆಳ್ಳಗಿ ಇದ್ದರು.

ಮಾಧ್ಯಮಗೋಷ್ಠಿ: ‘ಮಾಧ್ಯಮ: ಸಾಮಾಜಿಕ ಪ್ರಜ್ಞೆ– ಕಾಳಜಿ’ ಕುರಿತ  ಗೋಷ್ಠಿಯಲ್ಲಿ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ, ‘ಸಾರ್ವಜನಿಕ ಹಿತಾಸಕ್ತಿಯನ್ನೇ ಮೂಲ ಧ್ಯೇಯವಾಗಿ ಮಾಧ್ಯಮ ರಂಗ ಮುಂದುವರಿಸಿಕೊಂಡು ಬಂದಿದೆ. ಆದರೆ, ಬದಲಾದ ವ್ಯವಸ್ಥೆ ಹಾಗೂ ಸಾಮಾಜಿಕ ಮಾಧ್ಯಮಗಳ ಪೈಪೋಟಿಯ ಕಾರಣ ‘ಸಾರ್ವಜನಿಕ ಹಿತಾಸಕ್ತಿ’ ಎಂಬ ಅಂಶಕ್ಕೆ ಧಕ್ಕೆ ಬಂದಿದೆ. ಟಿಆರ್‌ಪಿ ಪಡೆಯುವುದು, ಜಾಹೀರಾತು ಹೆಚ್ಚಿಸುವುದೇ ಮುಖ್ಯವಾಗಿದೆ. ಸಾಮಾಜಿಕ ಪ್ರಜ್ಞೆ– ಕಾಳಜಿಯಿಂದ ಮಾಧ್ಯಮಗಳು ವಿಮುಖವಾಗುವ ಆತಂಕ ಎದುರಾಗಿದೆ’ ಎಂದರು.

ಪತ್ರಕರ್ತ ಬಾಬುರಾವ ಯಡ್ರಾಮಿ, ‘ವೇದಗಳನ್ನು ತಿಳಿಯುವುದಕ್ಕಿಂತ ಜನರ ವೇದನೆ ಅರ್ಥ ಮಾಡಿಕೊಳ್ಳುವುದು ಮುಖ್ಯ. ಆಡಳಿತ ವ್ಯವಸ್ಥೆಯೇ ಮಾಧ್ಯಮಗಳನ್ನು  ತನ್ನಿಷ್ಟಕ್ಕೆ ತಕ್ಕಂತೆ ಬಳಸಿಕೊಳ್ಳುವ ದಿನಗಳು ಬಂದಿವೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಹೊಣೆಗಾರಿಕೆ ಎಂದರೆ ಏನು ಎಂಬ ಬಗ್ಗೆ ಮಾಧ್ಯಮದವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

ಪ‍ತ್ರಕರ್ತ ಡಿ.ಶಿವಲಿಂಗಪ್ಪ ಮಾತನಾಡಿದರು.

ಕವಿಗೋಷ್ಠಿ:  ಕವಿಗೋಷ್ಠಿಯಲ್ಲಿ ನರಸಿಂಗರಾಜ ಹೇಮನೂರ, ನಾಗೇಂದ್ರಪ್ಪ ಮಾಡ್ಯಾಳೆ, ವೇಂಕಟೇಶ ಜನಾದ್ರಿ, ಸಿ.ಎಸ್. ಆನಂದ, ಭೀಮರಾಯ ಹೇಮನೂರ, ಎಂ.ಬಿ.ನಿಂಗಪ್ಪ, ರಾಜಕುಮಾರ ಬಿ. ಉದನೂರ, ಮಹಾದೇವ ಬಡಾ, ಪ್ರೊ.ಶಂಕರಲಿಂಗ ಹೆಂಬಾಡಿ, ಸಂಗಮನಾಥ ಪಿ. ಸಜ್ಜನ್, ಶಿವಾನಂದ ದೊಡ್ಮನಿ, ನಾಗಣ್ಣ ವಿಶ್ವಕರ್ಮ, ಹಣಮಂತರಾವ ಘಂಟೇಕರ್, ಎಚ್‌.ಎಸ್.ಬರಗಾಲಿ, ರವಿ ಹೂಗಾರ ಮಾಡಿಯಾಳ, ಸಂತೋಷ ಕುಂಬಾರ, ರವೀಂದ್ರ ಹತ್ತಿ, ಮಲ್ಲಿಕಾರ್ಜುನ ಕೋಟೆ, ಪರಮೇಶ್ವರ ಶಟಗಾರ, ರಾಜಶೇಖರ ಮಾಂಗ್, ಗೋಪಾಲ ಕುಲಕರ್ಣಿ, ರಾಜಶೇಖರ ಯಾಳಗಿ, ಆರ್‌.ಎಚ್.ಪಾಟೀಲ, ಅಮೃತ ದೊಡ್ಮನಿ, ವಿರಾಜಕುಮಾರ ವಿ. ಕಲ್ಯಾಣ, ಹಣಮಂತರಾವ ಮುಂಗಾಣೆ, ಶಿವಶರಣ ಪರಪ್ಪಗೋಳ, ಮಹಾಂತೇಶ ಪಾಟೀಲ, ಶ್ರೀಕಾಂತ ಬಿರಾದಾರ ಕವನ ವಾಚಿಸಿದರು.

ಹೋರಾಟದಲ್ಲಿ ಹೊಂದಾಣಿಕೆ; ವಿಷಾದ

‘ಹೊಂದಾಣಿಕೆ ಮಾಡಿಕೊಳ್ಳಬೇಕಾದದ್ದು ಕುಟುಂಬದಲ್ಲಿ, ಸಮಾಜದಲ್ಲಿ. ಆದರೆ, ಅದರಲ್ಲಿಯೇ ಯುವಸಮುದಾಯ ಸಂಘರ್ಷದಲ್ಲಿ ತೊಡಗಿದೆ. ಇನ್ನೊಂದೆಡೆ ಹೋರಾಟ ಮಾಡಬೇಕಾದ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಇದು ಸಾಮಾಜಿಕ ವಿಪರ್ಯಾಸ’ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ‘ಭ್ರಷ್ಟಾಚಾರ, ಜಾತಿ ತಾರತಮ್ಯ, ಅಪರಾಧ ಮನೋಭಾವ ಸಮಾಜದ ದೊಡ್ಡ ರೋಗಗಳು. ಇವುಗಳಿಂದ ಯುವ ಸಮುದಾಯವನ್ನು ಹೊರತರಬೇಕಾದರೆ ಅವರನ್ನು ಸಾಹಿತ್ಯ, ಸಾಂಸ್ಕೃತಿಕ ಸೆಳೆತಕ್ಕೆ ತರಬೇಕು’ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ವರ ಓಕಳಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಂಘಟನಾ ಕರ್ಯದರ್ಶಿ ಸಿದ್ಧಲಿಂಗ ಬಾಳಿ ರಾವೂರ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಖಡಕೆ, ಶರಣಬಸಪ್ಪ ವಡ್ಡಣಕೇರಿ, ರವಿ ಬಿಕೆ, ಕೆ.ಗಿರಿಮಲ್ಲ, ಶಿವಲೀಲಾ ತೆಗನೂರ ಮತ್ತಿತರರು ವೇದಿಕೆ ಮೇಲಿದ್ದರು. ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಸಮ್ಮೇಳನದ ನಿರ್ಣಯ ಮಂಡಿಸಿದರು. 

ಸಮ್ಮೇಳನದ ನಿರ್ಣಯಗಳು

* ಕಮಲಾಪುರ ಕೆಂಪುಬಾಳೆ ಹಣ್ಣಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯಬೇಕು.

* ಕಮಲಾಪುರದ ದಶರಥ ರಾಜನ ಕೆರೆ, ಶ್ರವಣಕುಮಾರನ ಸಮಾಧಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು.

* ಮಳಖೇಡ, ಕಾಳಗಿ, ಸನ್ನತಿ, ನಾಗಾವಿ, ಬಿಜನಳ್ಳಿ, ಹೊಡಲ್‌, ಮೇದಕ್‌, ಮುನ್ನಹಳ್ಳಿ, ಹೊಳಕುಂದಾ, ಯಡ್ರಾಮಿ, ರಾಮತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕು.

* ಪ್ರತಿ ವರ್ಷ ಸರ್ಕಾರ ರಾಷ್ಟ್ರಕೂಟ ಉತ್ಸವ, ನಾಗಾವಿ ಉತ್ಸವ ನಡೆಯಲಿ.

* ಸರ್ಕಾರಿ, ಅನುದಾನಿತ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡಬೇಕು.

* ಜಿಲ್ಲೆಯ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು.

* ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಿಸಬೇಕು.

* 371 (ಜೆ) ಅನುಷ್ಠಾನ ಕೋಶವನ್ನು ಕಲಬುರಗಿಗೆ ಸ್ಥಳಾಂತರಿಸಬೇಕು. ಜಿಲ್ಲೆಯವರನ್ನೇ ಸಂಪುಟ ಉಪಸಮಿತ ಅಧ್ಯಕ್ಷರನ್ನಾಗಿ ನೇಮಿಸಬೇಕು.

* ಸರ್ಕಾರ ನೀಡಿರುವ ಭರವಸೆಯಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು.

‘ವಿದ್ಯೆ ವಿನಯದಿಂದ ಶೋಭಿಸಲಿ’

‘ವಿದ್ಯೆ ವಿನಯದಿಂದ ಶೋಭಿಸಬೇಕು ಎಂಬ ಮಾತಿಗೆ ಸಾಹಿತಿ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಉದಾಹರಣೆಯಾಗಿದ್ದಾರೆ. ಪ್ರಚಾರದಿಂದ, ವಿವಾದಗಳಿಂದ ದೂರವಿದ್ದು, ಸಾಹಿತ್ಯ ಕೃಷಿಯಲ್ಲಿ ತೊಡಗಿದ ಅವರ ವ್ಯಕ್ತಿತ್ವ ಯುವ ಸಾಹಿತಿಗಳಿಗೆ ಮಾದರಿ’ ಎಂದು ಸಾಹಿತಿ ಶಿವಾರಾಜ ಪಾಟೀಲ ಹೇಳಿದರು.

ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಗುರುವಾರ ‘ಸಮ್ಮೇಳಾನಾಧ್ಯಕ್ಷರ ಬದುಕು ಬರಹ’ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.

ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕ ಬಸವರಾಜ ಕೊನೇಕ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಸುಭಾಶ್ಚಂದ್ರ ಕಶೆಟ್ಟಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಸವರಾಜ ಮಾಲಿಪಾಟೀಲ, ಶಿವಪ್ರಭು ಪಾಟೀಲ, ಶಿವಕುಮಾರ ಪಸಾರ, ಡಾ.ಶರಣಬಸಪ್ಪ ವಡ್ಡಣಕೇರಿ, ಸಿದ್ದಲಿಂಗ ಬಾಳಿ ರೇವೂರ, ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್‌ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು