ಶುಕ್ರವಾರ, ಫೆಬ್ರವರಿ 28, 2020
19 °C
ಸೇಡಂ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ

ಮಾತೃ ಭಾಷೆ ಹೇಳಲು ಗಡಿನಾಡ ಕನ್ನಡಿಗರ ಹಿಂಜರಿಕೆ: ಚಂದ್ರಕಲಾ ಬಿದರಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇದಕ್‌ (ದಾಸೋಹಿ ಗಳಂಗಳಪ್ಪ ಪಾಟೀಲ ವೇದಿಕೆ): ‘ನಮ್ಮದು ಕನ್ನಡ ಮಾತೃಭಾಷೆಯಾಗಿದ್ದರೂ ತೆಲಗು ಪ್ರಭಾವದ ಈ ಭಾಗದಲ್ಲಿ ಕನ್ನಡದ ಕಗ್ಗೊಲೆಯಾಗುತ್ತಿರುವುದು ಅತ್ಯಂತ ಬೇಸರ. ಕನ್ನಡಿಗರು ಮಾತೃಭಾಷೆಯನ್ನಾಡಲು, ಹೇಳಲು ಹಿಂಜರಿಯುವ ಸ್ಥಿತಿ ಇದೆ’ ಎಂದು ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಚಂದ್ರಕಲಾ ಬಿದರಿ ಬೇಸರ ವ್ಯಕ್ತಪಡಿಸಿದರು.

ಸೇಡಂ ತಾಲ್ಲೂಕಿನ ಮೇದಕ್‌ ಗ್ರಾಮದ ಅಕ್ಷರಧಾಮದ ಆವರಣದಲ್ಲಿ ಶ್ರೀ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಂಚಾಲಿತ ಶ್ರೀ ಕೇಶವ ಸೆಂಟ್ರಲ್ ಶಾಲೆ ಸಹಯೋಗದಲ್ಲಿ ಶನಿವಾರ  ಏರ್ಪಡಿಸಿದ 3ನೇ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಗಡಿಯಲ್ಲಿ ನಮ್ಮ ಭಾಗದಲ್ಲಿ ಕೊಡು-ಕೊಳ್ಳುವಿಕೆಯಿಂದ ಮೊದಲ್ಗೊಂಡು ಪ್ರತಿಯೊಂದರಲ್ಲೂ ತೆಲಗು ಪ್ರಭಾವ ಮತ್ತು ಸಂಸ್ಕೃತಿ ಹೆಚ್ಚುತ್ತಿದೆ. ಆದರೆ ತೆಲಂಗಾಣದಲ್ಲಿ ಅಥವಾ ಆಂಧ್ರಪ್ರದೇಶದ ಗಡಿಭಾಗದಲ್ಲಿನ ಗ್ರಾಮಗಳಲ್ಲಿ ಕನ್ನಡದ ಪ್ರಭಾವ ಅಷ್ಟೊಂದಿಲ್ಲ ಎನ್ನುವುದು ಬೇಸರದ ಸಂಗತಿ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ತಾಯಂದಿರು ಮನೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಮಕ್ಕಳಲ್ಲಿ ಕನ್ನಡ ನಾಡು–ನುಡಿ ಬಗ್ಗೆ ಅಭಿಮಾನ ಬೆಳೆಸಬೇಕು’ ಎಂದರು.

ಸಮ್ಮೇಳನಕ್ಕೂ ಮುನ್ನ 1008 ವಿದ್ಯಾರ್ಥಿಗಳುಸಾಮೂಹಿಕವಾಗಿ ನಾಡಗೀತೆ ಹಾಡಿದರು. ನಂತರ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ವಾದ್ಯಮೇಳಗಳೊಂದಿಗೆ ನಡೆಯಿತು. ವಿವಿಧ ಗೋಷ್ಠಿಗಳು ನಡೆದವು. ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ‘ಅಕ್ಷರ ಲೋಕದ ನಕ್ಷತ್ರ’ ಪ್ರಶಸ್ತಿ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ದಾಮೋದರ ರೆಡ್ಡಿ ಪಾಟೀಲ, ಭೀಮಶಪ್ಪ ಪೂಜಾರಿ, ಮಹಿಪಾಲರೆಡ್ಡಿ ಮುನ್ನೂರ, ನಾಗಿಂದ್ರಪ್ಪ ಶಿಲಾರಕೋಟ, ಬನ್ನಮ್ಮ ನಾಯ್ಕಿನ್, ಮೊಘಲಪ್ಪ ಯಾನಾಗುಂದಿ, ಭಗವಂತಪ್ಪ ಗಾಡದಾನ, ಭೀಮಶಪ್ಪ ನಾಯ್ಕಿನ್, ಮಹಿಪಾಲರೆಡ್ಡಿ ಶಿಲಾರ ಕೋಟ, ಭೀಮರೆಡ್ಡಿ, ಸುಭಾಷ್ ಸಜ್ಜನ್, ಮುಡಬಿ ಗುಂಡೇರಾವ, ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು