ಮಲ್ಲಿಕಾರ್ಜುನ ನಾಲವಾರ
ಕಲಬುರಗಿ: ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ(ಜ.7) ಮಂಡಿಸಲಿರುವ ಬಜೆಟ್‌ನಲ್ಲಿ ಕಲಬುರಗಿ ಜಿಲ್ಲೆಗೆ ಏನೆಲ್ಲ ಸಿಗಬಹುದು ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ, ಸಂಪುಟದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣ ಪ್ರಕಾಶಪಾಟೀಲ ಅವರು ಇರುವುದರಿಂದ ಸಹಜವಾಗಿ ಹಳೆಯ ನಿರೀಕ್ಷೆಗಳಿಗೆ ಈ ಬಾರಿಯಾದರೂ ಸ್ಪಂದನೆ ಸಿಗಬಹುದು ಎಂಬ ಆಸೆ ಗರಿಗೆದರಿದೆ.
ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದಾಗ ನಡೆದ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹತ್ತು ಅಂಶಗಳನ್ನು ಘೋಷಿಸಿ, ಒಂದು ವರ್ಷದೊಳಗೆ ಜಾರಿಗೆ ತರುವ ವಾಗ್ದಾನವೂ ಮಾಡಿದ್ದರು.
371 (ಜೆ)ಯಲ್ಲಿನ ಎಲ್ಲಾ ಸಾಂವಿಧಾನಿಕ ನಿಬಂಧನೆಗಳ ಜಾರಿ, ಬ್ಯಾಕ್ ಲಾಗ್ ಹುದ್ದೆ ಸೇರಿ ಎಲ್ಲಾ ಹುದ್ದೆಗಳ ಭರ್ತಿ, ಪ್ರತ್ಯೇಕವಾದ ‘ಕೈಗಾರಿಕಾ ನೀತಿ’, ಖಾಸಗಿ ವಲಯದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ, ಕೃಷ್ಣಾ ಮತ್ತು ಗೋದಾವರಿ ಕಣಿವೆಯ ನೀರಾವರಿ ಯೋಜನೆಗಳು ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು.
ಏಳು ಜಿಲ್ಲಾ ಕೇಂದ್ರಗಳಿಂದ ನೇರವಾಗಿ ಬೆಂಗಳೂರಿಗೆ ಚತುಷ್ಪಥ ರಸ್ತೆ ನಿರ್ಮಾಣ, ಐಐಟಿ ಮತ್ತು ಐಐಐಟಿ ಸ್ಥಾಪನೆ, ಕನಿಷ್ಠ 100 ಪದವಿ ಪೂರ್ವ ಹಾಗೂ ಮಹಿಳಾ ಪದವಿ ಕಾಲೇಜು ಸ್ಥಾಪನೆ, ಡಾ. ಬಿ.ಆರ್.ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ–ಪ್ರೌಢ ಶಿಕ್ಷಣ ಶಾಲೆ ನಿರ್ಮಾಣ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ತಾಯಿ ಮತ್ತು ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರಗಳ ಆರಂಭ, ಗ್ರಾ.ಪಂ.ಗಳಿಗೆ ವಾರ್ಷಿಕ ₹ 1 ಕೋಟಿ ಅನುದಾನದ ಭರವಸೆ ಕೊಟ್ಟಿದ್ದರು. ಅದು ಈ ಬಜೆಟ್‌ನಲ್ಲಿ ಸಿಗಬಹುದೇ ಎಂದು ಜನರು ಎದುರು ನೋಡುತ್ತಿದ್ದಾರೆ.
ಖರ್ಗೆ ಅವರ ಹತ್ತು ಅಂಶಗಳ ಜತೆಗೆ ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ, ಆಟೊ ಹಬ್ ಕೇಂದ್ರ ಸ್ಥಾಪನೆ, ಕೆಎಂಎಫ್ ಮಾದರಿಯಲ್ಲಿ ತೊಗರಿ ಮಂಡಳಿ ಅಭಿವೃದ್ಧಿ, ಶಾಶ್ವತವಾದ ಶುದ್ಧ ಕುಡಿಯುವ ನೀರು, ಐದು ಜಲಾಶಯಗಳಿಗೆ ಅಗತ್ಯ ಅನುದಾನ, ಐತಿಹಾಸಿಕ ಬೌದ್ಧ ಕೇಂದ್ರಗಳಾದ ಸನ್ನತಿ, ಮಳಖೇಡ ಕೋಟೆ, ಬಹಮನಿ ಕೋಟೆ, ಧಾರ್ಮಿಕ ಕ್ಷೇತ್ರಗಳಾದ ದೇವಲ ಗಾಣಗಾಪುರ, ಘತ್ತರಗಿ, ಚಿತ್ತಾಪುರದ ನಾಗಾವಿ ಸೇರಿ ಚಂದ್ರಂಪಳ್ಳಿ ಜಲಾಶಯ, ಎತ್ತಿಪೋತೆ ಜಲಪಾತ ಒಳಗೊಂಡಂತಹ ಪ್ರವಾಸೋದ್ಯಮ ಸರ್ಕಿಟ್ ಯೋಜನೆ ಸೇರಿ ಹಲವು ಅಭಿವೃದ್ಧ ಕಾರ್ಯಗಳಿಗಾಗಿ ಸಿದ್ದರಾಮಯ್ಯ ಅವರು ಆದ್ಯತೆ ನೀಡುವರೇ ಎಂದು ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ. ಜನರ ಬೇಡಿಕೆಗೆ ಅನುಗುಣವಾಗಿ ಆರೋಗ್ಯ ಸೌಕರ್ಯಗಳಲ್ಲಿ. ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಕೊರತೆಗೆ ತಾಲ್ಲೂಕು ಆಸ್ಪತ್ರೆಗಳು ನಲುಗುತ್ತಿವೆ. ಹೊಸ ತಾಲ್ಲೂಕುಗಳು ಘೋಷಣೆಗೆ ಸೀಮಿತವಾಗಿದ್ದು, ಸರ್ಕಾರಿ ಕಚೇರಿ ಬಂದಿಲ್ಲ. ಜಿಲ್ಲೆಯವರೇ ಗ್ರಾಮೀಣಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಹೊಂದಿದ್ದರಿಂದ ನಮ್ಮ ಕೊರತೆಗಳನ್ನು ನೀಗಿಸಬೇಕು’ ಎನ್ನತ್ತಾರೆ ಸ್ಥಳೀಯರು.
Cut-off box - ಯಾರು ಏನೆಂದರು? ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರವಾದ ಕಲಬುರಿಗೆ ನಗರವನ್ನು ವೈಜ್ಞಾನಿಕ ದೃಷ್ಟಿಕೋನ ಇರಿಸಿಕೊಂಡು ಅಭಿವೃದ್ಧಿಪಡಿಸಬೇಕು. ವಾಣಿಜ್ಯ ಪ್ರದೇಶಗಳಲ್ಲಿ ಪಾರ್ಕಿಂಗ್ ಕುಡಿಯುವ ನೀರು ಶೌಚಾಲಯ ಒದಗಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಒಳ ಚರಂಡಿ ಮತ್ತು ರಸ್ತೆಗಳ ನಿರ್ಮಾಣ ಮಾಡಲು ಹೆಚ್ಚಿನ ಅನುದಾನ ಕೊಡಬೇಕು. ಪ್ರಭುಲಿಂಗ ಮಹಾಗಾಂವಕರ್ ಕಲಬುರಗಿ ಸ್ಮಾರ್ಟ್ ಸಿಟಿ ಸಂಘದ ಅಧ್ಯಕ್ಷ ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆಯ ದರಕ್ಕೆ ಸರ್ಕಾರದಿಂದ ಸಬ್ಸಿಡಿ ಸಿಗಬೇಕು. ನರೇಗಾ ಕೂಲಿಕಾರ್ಮಿಕರನ್ನು ಜಮೀನಿನಲ್ಲಿ ಕಳೆ ಕೀಳಲು ರಾಶಿ ಮಾಡಲು ಬಳಸಿಕೊಂಡರೆ ರೈತರ ಮೇಲಿನ ಕೂಲಿಯ ಹೊರೆ ತಪ್ಪಲಿದೆ. ಬಾಕಿ ಇರುವ ನೀರಾವರಿ ಯೋಜನೆಗೆ ಅಗತ್ಯ ಅನುದಾನ ಕೊಟ್ಟು ಹೊಸ ಯೋಜನೆಗಳನ್ನೂ ಕೈಗೆತ್ತಿಕೊಳ್ಳಬೇಕು ಎಂ.ಬಿ.ಸಜ್ಜನ್ ಸಿಐಟಿಯು ಕಾರ್ಮಿಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನರ ಆಶೋತ್ತರಗಳಿಗೆ ಪೂರಕವಾದ ಬಜೆಟ್ ಮಂಡನೆಯಾಗಲಿ. ಜಿಲ್ಲೆಯಲ್ಲಿ ವಲಸೆ ತಪ್ಪಿ ಉದ್ಯೋಗ ಶಿಕ್ಷಣ ಆರೋಗ್ಯ ಮೂಲಸೌಕರ್ಯಗಳಿಗೆ ಒತ್ತು ಕೊಡಬೇಕು. ಸಮಾಜದ ಕಟ್ಟ ಕಡೆಯ ಜನರಿಗೂ ಯೋಜನೆಗಳು ತಲುಪುವಂತಾಗಲಿ ಮಾರುತಿರಾವ ಹಿರಿಯ ನಾಗರಿಕ ಕಲಬುರಗಿ ನಿವಾಸಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕೆ ನೀತಿ ಜಾರಿಗೆ ತರಬೇಕು. ಇಲ್ಲಿಗೆ ಬರುವ ಕೈಗಾರಿಕೆಗಳಿಗೆ ಹೆಚ್ಚಿನ ಸಬ್ಸಿಡಿ ಕಡಿಮೆ ಬೆಲೆಗೆ ಜಮೀನು ವಿದ್ಯುತ್ ದರದಲ್ಲಿ ವಿನಾಯಿತಿ ಕೊಡಬೇಕು. ಆಗ ಉದ್ಯೋಗ ಸೃಷ್ಟಿಯಾಗಿ ಇಲ್ಲಿನ ತಲಾ ಆದಾಯ ಹೆಚ್ಚಾಗುತ್ತದೆ. ಪ್ರಾದೇಶಿಕ ಅಸಮಾನತೆಯೂ ದೂರಾಗುತ್ತದೆ ಸಂತೋಷ ಲಂಗರ ಎಪಿಎಂಸಿ ವರ್ತಕ ಜಿಲ್ಲೆಗೆ ವಿಶೇಷ ಕೈಗಾರಿಕಾ ವಲಯ ನೀಡಿ ಕೈಗಾರಿಕೆಗಳಿಗೆ ಜಿಎಸ್‌ಟಿ ವಿನಾಯಿತಿ ಕೊಡಬೇಕು. ದಾಲ್‌ಮಿಲ್ ಮತ್ತು ರೈಸ್ ಮಿಲ್‌ಗಳನ್ನು ಕೃಷಿ ಆಧಾರಿತ ಕೈಗಾರಿಕೆ ಎಂದು ಘೋಷಿಸಿದರೆ ಶೇ 4ರಷ್ಟು ಬಡ್ಡಿಯಲ್ಲಿ ಸಾಲ ಸಿಗುತ್ತದೆ. ತ್ವರಿತವಾಗಿ ಜವಳಿ ಪಾರ್ಕ್ ಆರಂಭವಾಗಲು ಬಜೆಟ್‌ನಲ್ಲಿ ವಿಶೇಷ ಆದ್ಯತೆ ಕೊಡಬೇಕು. ಜ್ಯುವೆಲರಿ ಪಾರ್ಕ್ ಹಾಗೂ ಆಟೊ ಹಬ್ ಸ್ಥಾಪಿಸಿವಂತೆಯೂ ಮನವಿ ಮಾಡಿದ್ದೇವೆ ಮಂಜುನಾಥ ಜೇವರ್ಗಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.