ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ನೀರಿಲ್ಲದೆ ಒಣಗುತ್ತಿರುವ ಬೆಳೆ

ನೀರಿನ ಅಭಾವ: ನಷ್ಟದ ಆತಂಕದಲ್ಲಿ ರೈತರು
Published 14 ಮಾರ್ಚ್ 2024, 5:47 IST
Last Updated 14 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಬೆಳೆಗಳು ಒಣಗುತ್ತಿದ್ದು ರೈತರಿಗೆ ನಷ್ಟದ ಭೀತಿ ಎದುರಾಗಿದೆ.

ಅಚ್ಚುಕಟ್ಟು ಪ್ರದೇಶದ ಚಿಂಚೋಳಿ, ಐನೋಳ್ಳಿ, ಭೋಗಾನಿಂಗದಳ್ಳಿ, ದೇಗಲಮಡಿ, ಪಟಪಳ್ಳಿ ಹಾಗೂ ಫತೆಪುರ ಗ್ರಾಮಗಳ ರೈತರಿಗೆ ನೀರಿನ ಅಗತ್ಯವಿದೆ. ಆದರೆ ಕಳೆದ 15 ದಿನಗಳಿಂದ ಕಾಲುವೆಗೆ ನೀರು ಹರಿಸುವುದು ನಿಲ್ಲಿಸಿದ್ದರಿಂದ ಬೆಳೆಗಳು ಒಣಗುತ್ತಿವೆ.

ಪ್ರತಿ ವರ್ಷ ಏಪ್ರಿಲ್ ಅಂತ್ಯದವರೆಗೆ ಚಂದ್ರಂಪಳ್ಳಿ ಜಲಾಶಯದಿಂದ ಕಾಲುವೆ ಜಮೀನಿಗೆ ನೀರು ಬಿಡಲಾಗುತ್ತಿತ್ತು. ಇದನ್ನೇ ನಂಬಿ ಪ್ರಸಕ್ತ ವರ್ಷ ಅಚ್ಚುಕಟ್ಟು ಪ್ರದೇಶದ ವಿವಿಧೆಡೆ ರೈತರು ಮೆಕ್ಕೆಜೋಳ, ಈರುಳ್ಳಿ, ಚಿಯಾ, ಶೇಂಗಾ ಮತ್ತಿತರರು ಬೆಳೆಗಳ ಬೇಸಾಯ ನಡೆಸುತ್ತಿದ್ದಾರೆ. ಆದರೆ ಕಳೆದ 15 ದಿನಗಳಿಂದ ನೀರು ಪೂರೈಕೆ ನಿಲ್ಲಿಸಿದ್ದರಿಂದ ಬೆಳೆಗಳು ಒಣಗುತ್ತಿವೆ ಎಂದು ಈರುಳ್ಳಿ ಬೆಳೆಗಾರ ಶಿವಕುಮಾರ ಪೋಚಾಲಿ ತಿಳಿಸಿದ್ದಾರೆ.

ನಾನು ಚಂದ್ರಂಪಳ್ಳಿ ಜಲಾಶಯದ ನೀರು ನಂಬಿ ಮೆಕ್ಕೆಜೋಳ, ಈರುಳ್ಳಿ ಬೆಳೆದಿದ್ದೇನೆ. ಬೆಳೆ ಒಣಗುತ್ತಿರುವುದರಿಂದ ₹3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗುತ್ತಿದೆ. ನಾವು ನೀರು ಬಿಡುಗಡೆಗೆ ಕೋರಿ ನೀರಾವರಿ ಯೋಜನೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ನೀರು ಬಿಟ್ಟಿಲ್ಲ. ತಹಶೀಲ್ದಾರ್‌ ಲಿಖಿತ ಮನವಿ ಸಲ್ಲಿಸಿದ್ದೇವೆ. ಮಾ.6ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ತಹಶೀಲ್ದಾರ್ ಕಳುಹಿಸಿದ್ದಾರೆ.ಈವರೆಗೂ ನೀರು ಬಿಟ್ಟಿಲ್ಲ ಎಂದು ಅವರು ಅಲವತ್ತುಕೊಂಡಿದ್ದಾರೆ.  

ಬರಗಾಲದ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳಿಂದ ನಿರ್ದೇಶನ ಬಂದರೆ ನೀರು ಬಿಡಲು ಕ್ರಮ ವಹಿಸುತ್ತೇವೆ. ನೀರು ಬಿಡುವಂತೆ ನಿತ್ಯ ರೈತರು ಕರೆ ಮಾಡುತ್ತಿದ್ದಾರೆ ಎಂದು ಯೋಜನೆಯ ಎಇಇ ಚೇತನ ಕಳಸ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT