ಶುಕ್ರವಾರ, ನವೆಂಬರ್ 27, 2020
20 °C
ಶಿಥಿಲಗೊಂಡ ಮನೆಗಳು; ಪುನರ್ವಸತಿಗೆ ಸಂತ್ರಸ್ತರ ಪಟ್ಟು; ರಸ್ತೆಯಲ್ಲಿ ಕೆಸರು ತುಂಬಿಕೊಂಡು ಓಡಾಡಲು ಜನರ ಪರದಾಟ

ಕಲಬುರ್ಗಿ| ಇಳಿದ ಪ್ರವಾಹ: ಮನೆಗೆ ಮರಳಲು ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಭೀಮಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಕಡಿಮೆಯಾಗಿದ್ದರಿಂದ ಅಫಜಲಪುರ, ಜೇವರ್ಗಿ, ಕಲಬುರ್ಗಿ ಹಾಗೂ ಚಿತ್ತಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹ ಇಳಿಯುತ್ತಿದೆ.

ಆದರೆ, ಪ್ರವಾಹದಿಂದಾಗಿ ನೀರಲ್ಲಿ ನಿಂತ ಮನೆಗಳು ಶಿಥಿಲಗೊಂಡಿರುವುದರಿಂದ, ಕೆಸರು ತುಂಬಿರುವುದರಿಂದ ಹಾಗೂ ಹಾವು, ಚೇಳಿನಂಥ ವಿಷಕಾರಿ ಪ್ರಾಣಿಗಳು ಮನೆಗಳಲ್ಲಿ ಹರಿದಾಡುತ್ತಿರುವುದರಿಂದ ಮನೆಗೆ ಮರಳಲು ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರು ಹಿಂದೇಟು ಹಾಕುತ್ತಿದ್ದಾರೆ.

ಕಲಬುರ್ಗಿ ತಾಲ್ಲೂಕಿನ ನದಿ ಸಿಣ್ಣೂರ, ಜೇವರ್ಗಿ ತಾಲ್ಲೂಕಿನ ಹಂದನೂರ ಹಾಗೂ ಕೋನಾ ಹಿಪ್ಪರಗಾ ಗ್ರಾಮಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಂಶ ಕಂಡು ಬಂತು.

ಕೋನಾ ಹಿಪ್ಪರಗಾದಲ್ಲಿರುವ 450 ಮನೆಗಳ ಪೈಕಿ ಇನ್ನೂ 100ಕ್ಕೂ ಅಧಿಕ ಮನೆಗಳಲ್ಲಿ ನೀರು ನಿಂತುಕೊಂಡಿದೆ. ಹೀಗಾಗಿ, ಅವರೆಲ್ಲರನ್ನೂ ಕೂಡಿ ಗ್ರಾಮದ ಸರ್ಕಾರಿ ಶಾಲೆ ಹಾಗೂ ದರ್ಗಾದಲ್ಲಿರುವ ಕಾಳಜಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಹಂದನೂರ ಗ್ರಾಮದ ಕೆಳಭಾಗದಲ್ಲಿರುವ ಹಲವು ಮನೆಗಳು ಜಲಾವೃತವಾಗಿದ್ದು, ಎತ್ತರದ ಪ್ರದೇಶದಲ್ಲಿರುವ ಜಾಗದಲ್ಲಿ ಆರಂಭಿಸಲಾದ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ. ಸೋಮವಾರ ಮನೆಯಷ್ಟೇ ಅಲ್ಲದೇ ರಸ್ತೆಯ ಮೇಲೂ ನೀರು ನಿಂತಿತ್ತು. ಮಂಗಳವಾರ ರಸ್ತೆಯ ಮೇಲಿನ ನೀರು ಕಡಿಮೆಯಾಗಿದೆ. ಆದರೆ, ಇಡೀ ಹಾದಿಯುದ್ದಕ್ಕೂ ಕೆಸರು ತುಂಬಿಕೊಂಡು ನಡೆದಾಡಲು ಬಾರದಂತಾಗಿದೆ. ಮನೆಯ ಅರ್ಧ ಭಾಗವನ್ನು ತುಂಬಿಕೊಂಡಿದ್ದ ನೀರು ಕಡಿಮೆಯಾಗಿದೆ. ಆದರೂ ಮನೆಯ ಬಾಗಿಲು ತೆರೆಯಲು ಗ್ರಾಮಸ್ಥರು ಧೈರ್ಯ ಮಾಡುತ್ತಿಲ್ಲ. ಮನೆಗೆ ಬಂದರೂ ಮತ್ತೆ ಪ್ರವಾಹದ ನೀರು ಬಂದರೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಹೀಗಾಗಿ, ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು ಬಂದು ಸುರಕ್ಷಿತ ಸ್ಥಳಗಳಲ್ಲಿ ಇರಿಸುತ್ತಿದ್ದಾರೆ. ಹಂದನೂರ ಗ್ರಾಮಕ್ಕೆ ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ ಎಂದು ಗ್ರಾಮದ ಯುವಕರಾದ ಯಮನಪ್ಪ ಬುಕ್ಕಾ, ದೇವಿಂದ್ರಪ್ಪ ಹೇಳಿದರು.

‘ಮನೆಯಲ್ಲಿ ಇರುವ ಕೃಷಿ ಉಪಕರಣಗಳನ್ನು ಜಂತಿಗೆ ಕಟ್ಟಿದ್ದೇವೆ. ಸಣ್ಣ ಪುಟ್ಟ ಪಾತ್ರೆ ಪಗಡೆ, ಅರಿವೆಗಳನ್ನು ನೀರು ಜಾಸ್ತಿಯಾದ ಕೂಡಲೇ ಬೇರೆ ಕಡೆ ಒಯ್ದಿದ್ದೇವೆ. ಸುಮಾರು 40 ಮನೆಗಳಿಗೆ ನೀರು ನುಗ್ಗಿದ್ದು, ಬೇರೆಡೆ ಮನೆಗಳನ್ನು ಕಟ್ಟಿಕೊಡಬೇಕು ಎಂಬ ನಮ್ಮ ಬೇಡಿಕೆಯ ಬಗ್ಗೆ ಯಾರೂ ಗಮನ ಹರಿಸಿಲ್ಲ’ ಎಂದು ದೂರಿದರು.

ಎದೆಮಟ್ಟದ ನೀರಲ್ಲೇ ನಡೆದರು: ಕೋನಾ ಹಿಪ್ಪರಗಾ ಗ್ರಾಮದ ಬಹುತೇಕ ಮನೆಗಳು ಜಲಾವೃತವಾಗಿದ್ದು, ಕೋಳಿ, ಕುರಿಗಳು ಪ್ರವಾಹ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿವೆ. ನೀರು ಉಳಿದ ಬಳಿಕ ಮನೆಯತ್ತ ಹೋಗುವ ಹಂಬಲದಲ್ಲಿ ಗ್ರಾಮಸ್ಥರು ಕೂಡಿ ದರ್ಗಾದ ಕಾಳಜಿ ಕೇಂದ್ರದಲ್ಲಿ ದಿನ ಕಳೆಯುತ್ತಿದ್ದಾರೆ.

ಇನ್ನು ಕೆಲವರು ಊರಿನಲ್ಲಿ ಕಟ್ಟಿರುವ ದನ ಕರುಗಳಿಗೆ ಮೇವು ಹಾಕಿ ಬರಲು ಎದೆಮಟ್ಟದ ನೀರಿನಲ್ಲೇ ನಡೆದು ಆಚೆ ಹೋಗುತ್ತಿದ್ದಾರೆ. ಕಲಬುರ್ಗಿಯತ್ತ ಹೊರಟಿದ್ದ ಗ್ರಾಮದ ಶಂಕರ ಅವರು ತಮ್ಮ ಕುಟುಂಬದ ಮೂವರು ಮಹಿಳಾ ಸದಸ್ಯರೊಂದಿಗೆ ಅಪಾಯಕಾರಿ ಪ್ರವಾಹದ ನೀರಿನಲ್ಲಿಯೇ ನಡೆದುಕೊಂಡು ಬಂದರು.

‘ಸೋಮವಾರ ಎನ್‌ಡಿಆರ್‌ಎಫ್‌ ತಂಡದವರು ಬೋಟ್‌ ಮೂಲಕ ನೆರೆ ಸಂತ್ರಸ್ತರನ್ನು ರಕ್ಷಿಸಿರುವುದು ಒಳ್ಳೆಯ ಕೆಲಸ. ಆದರೆ, ನಮ್ಮ ದನಕರುಗಳು ಇನ್ನೂ ಅಲ್ಲಿಯೇ ಇರುವುದರಿಂದ ಅವುಗಳಿಗೆ ಮೇವು ಹಾಕಿ, ನೀರು ಕುಡಿಸಿ ಬರಲು ಒಂದು ಕಿ.ಮೀ. ನೀರಿನಲ್ಲೇ ನಡೆದುಕೊಂಡು ಹೋಗಬೇಕಿದೆ. ಹೀಗಾಗಿ, ಗಂಟೆಗೊಮ್ಮೆ ಕರೆದುಕೊಂಡು ಹೋಗಲು ಬೋಟ್‌ ವ್ಯವಸ್ಥೆ ಮಾಡಿದರೆ ಜಾನುವಾರುಗಳ ರಕ್ಷಣೆ ಸಾಧ್ಯವಾಗುತ್ತದೆ’ ಎಂದು ಗ್ರಾಮದ ರೆಹಮಾನ್‌ ಸಾಬ್‌ ತಿಳಿಸಿದರು.

ಸಂತ್ರಸ್ತರಿಗೆ ಆಸರೆಯಾದ ದರ್ಗಾ

ಕೂಡಿ ಗ್ರಾಮದ ಐತಿಹಾಸಿಕ ದರ್ಗಾದಲ್ಲಿ ಇದೀಗ ಎಲ್ಲ ಧರ್ಮದ ನೆರೆ ಸಂತ್ರಸ್ತರೂ ಬೀಡು ಬಿಟ್ಟಿದ್ದಾರೆ. ವಿಶಾಲವಾಗಿರುವ ದರ್ಗಾದಲ್ಲಿ ಕೋನಾ ಹಿಪ್ಪರಗಾ, ಮಂದರವಾಡ ಗ್ರಾಮದ ಸಂತ್ರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ದರ್ಗಾಕ್ಕೆ ತಮ್ಮೊಂದಿಗೆ ದನ, ಕರು, ಮೇಕೆಗಳನ್ನೂ ಕರೆತಂದಿದ್ದು, ಅವುಗಳನ್ನು ದರ್ಗಾ ಆವರಣದಲ್ಲಿ ಕಟ್ಟಿ ಸಲುಹುತ್ತಿದ್ದಾರೆ.

‘ಇದೊಂದು ಬಲು ಕಷ್ಟದ ಸಮಯವಾಗಿದ್ದು, ಊರ ಸಮೀಪದಲ್ಲೇ ಇರುವ ದರ್ಗಾದಲ್ಲಿ ಉಳಿಯಲು ಅವಕಾಶ ಸಿಕ್ಕಿರುವುದರಿಂದ ಸಾಕಷ್ಟು ಅನುಕೂಲವಾಗಿದೆ. ನೀರು ಇಳಿಯುವವರೆಗೂ ಇಲ್ಲಿ ಇರಲು ಅವಕಾಶ ಸಿಕ್ಕಿದೆ’ ಎಂದರು ಮಂದರವಾಡ ಗ್ರಾಮದ ವ್ಯಕ್ತಿಯೊಬ್ಬರು.

65 ಸಾವಿರ ಕ್ಯುಸೆಕ್‌ಗೆ ಇಳಿಕೆ

ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡುವುದು ಬಹುತೇಕ ಸ್ಥಗಿತಗೊಂಡಿದ್ದರಿಂದ ಸೊನ್ನ ಭೀಮಾ ಬ್ಯಾರೇಜಿನಿಂದ ನದಿಗೆ ಮಂಗಳವಾರ ರಾತ್ರಿ 8ಕ್ಕೆ 65 ಸಾವಿರ ಕ್ಯುಸೆಕ್‌ ಮಾತ್ರ ನೀರು ಹರಿಯುತ್ತಿತ್ತು.  ಪ್ರವಾಹದಿಂದ ಕಂಗೆಟ್ಟ ಸಂತ್ರಸ್ತರು ನಿಟ್ಟುಸಿರು ಬಿಡುವಂತಾಗಿದೆ.

ಮಧ್ಯಾಹ್ನ 12ಕ್ಕೆ 1.78 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿತ್ತು. ರಾತ್ರಿ ವೇಳೆಗೆ 65 ಸಾವಿರ ಕ್ಯುಸೆಕ್‌ ಹರಿವು ಮಾತ್ರ ಇತ್ತು. ಪರಿಸ್ಥಿತಿ ಹೀಗೇ ಮುಂದುವರಿದರೆ ಪ್ರವಾಹ ಕಡಿಮೆಯಾಗಿ ಹಲವು ಗ್ರಾಮಗಳಿಂದ ಭೀಮೆಯ ನೀರು ಇಳಿಯುವ ಸಾಧ್ಯತೆ ಇದೆ. ನಾಲ್ಕು ದಿನಗಳಿಂದ ಸ್ಥಗಿತಗೊಂಡಿರುವ ಕಲಬುರ್ಗಿ–ಜೇವರ್ಗಿ ಮಧ್ಯದ ಕಟ್ಟಿ ಸಂಗಾವಿ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು