ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains | ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Published : 25 ಸೆಪ್ಟೆಂಬರ್ 2024, 4:23 IST
Last Updated : 25 ಸೆಪ್ಟೆಂಬರ್ 2024, 4:23 IST
ಫಾಲೋ ಮಾಡಿ
Comments

ಚಿತ್ತಾಪುರ (ಕಲಬುರಗಿ ಜಿಲ್ಲೆ): ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ದಿಗ್ಗಾಂವ ಗ್ರಾಮದ ಸುಮಾರು 129 ಮನೆಗಳಿಗೆ ಹಳ್ಳದ ನೀರು ನುಗ್ಗಿ, ದವಸ ಧಾನ್ಯಗಳಿಗೆ ಹಾನಿಯಾಗಿದೆ.

ಭಾರಿ ಮಳೆಯಿಂದಾಗಿ ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ದೊಡ್ಡ ಹಳ್ಳದಲ್ಲಿ ರಾತ್ರಿ ಪ್ರವಾಹ ಉಕ್ಕಿ ಬಂದಿದೆ. ತಗ್ಗು ದೇಶದಲ್ಲಿದ್ದ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದರಿಂದ ಜನರು ತೀವ್ರ ಭಯ, ಆತಂಕಕ್ಕೆ ಒಳಗಾಗಿದ್ದರು. ತೀವ್ರಗತಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ದವಸ ಧಾನ್ಯ ಸಂರಕ್ಷಣೆಗೂ ಅವಕಾಶ ಸಿಗದೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಗ್ರಾಮದ ದ್ವಾರ ಬಾಗಿಲ ಮುಂದೆ ಇರುವ ದರ್ಗಾದೊಳಗೆ ಪ್ರವಾಹ ನೀರು ನುಗ್ಗಿದೆ. ದ್ವಾರ ಬಾಗಿಲ ಮೂಲಕ ಗ್ರಾಮದೊಳಗೆ ನುಗ್ಗಿದ ಹಳ್ಳದ ನೀರಿನಿಂದ ಜನರಲ್ಲಿ ಆತಂಕ ಶುರುವಾಗಿತ್ತು. ಹಳ್ಳದ ಪಕ್ಕದಲ್ಲಿರುವ ಪರಿಶಿಷ್ಟರ ಬಡಾವಣೆಯೊಳಗೆ ನುಗ್ಗಿದ ನೀರು ಮನೆಯೊಳಗಿನ ಜೀವನಾವಶ್ಯಕ ಸಾಮಗ್ರಿ ಹಾನಿ ಮಾಡಿದ್ದರಿಂದ ಕಡುಬಡವರ ಬದುಕು ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ತಹಶೀಲ್ದಾರ್ ಭೇಟಿ: ರಾತ್ರಿ ದಿಗ್ಗಾಂವ ಗ್ರಾಮದಲ್ಲಿ ಮಳೆ ನೀರು ನುಗ್ಗಿ ಅಪಾರ ಹಾನಿಯಾಗಿರುವ ಸುದ್ದಿ ತಿಳಿದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಬುಧವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಹಾನಿಯ ಮಾಹಿತಿ ಸಂಗ್ರಹಿಸಿ ಪರಿಶೀಲಿಸಿದರು. ಹಾನಿಯಾದ ಸಾಮಗ್ರಿಗಳ ಕುರಿತು ವಿವರ ಪಡೆದುಕೊಂಡರು.

'ಹಳ್ಳದ ನೀರು ಅಂದಾಜು 129 ಮನೆಗಳಿಗೆ ನೀರು ನುಗ್ಗಿದೆ. ನಿಯಮದ ಪ್ರಕಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ನಾಗಯ್ಯ ಹಿರೇಮಠ ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಳಯ್ಯ ಬಡಿಗೇರ, ಮುಖಂಡರಾದ ಶ್ರೀಮಂತ ಗುತ್ತೆದಾರ, ಸಿದ್ದಣ್ಣಗೌಡ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT