ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಟಿಕೆಟ್ ಮೊತ್ತ ₹ 314 ಕೋಟಿ, ಬಂದಿದ್ದು ₹ 210 ಕೋಟಿ!

ಶಕ್ತಿ ಯೋಜನೆ: ಡೀಸೆಲ್ ಖರೀದಿ, ನೌಕರರ ಸಂಬಳಕ್ಕಷ್ಟೇ ಸಾಲುತ್ತಿರುವ ಹಣ
Published 14 ಅಕ್ಟೋಬರ್ 2023, 23:30 IST
Last Updated 14 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಕಲಬುರಗಿ: ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ವಿತರಣೆಯಾದ ಟಿಕೆಟ್‌ ಮೊತ್ತದಷ್ಟು ಹಣವನ್ನು ನಿಗಮಗಳಿಗೆ ಮರು ಪಾವತಿ ಮಾಡದೇ ಇರುವುದರಿಂದ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಿಸುತ್ತಿವೆ.

ಕಳೆದ ಜೂನ್‌ 11ರಿಂದ ಶಕ್ತಿ ಯೋಜನೆಯು ಜಾರಿಗೆ ಬಂದಿದ್ದು, ಸೆಪ್ಟೆಂಬರ್‌ ತಿಂಗಳವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಒಟ್ಟು ₹ 314.52 ಕೋಟಿ ಮೊತ್ತದಷ್ಟು ಉಚಿತ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸಿದ್ದಾರೆ. ಇಷ್ಟು ಮೊತ್ತವನ್ನು ಪಾವತಿಸುವಂತೆ ನಿಗಮವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿಯವರೆಗೆ ₹ 210.15 ಕೋಟಿಯನ್ನು ಮಾತ್ರ ಪಾವತಿಸಿದೆ. ಸರಾಸರಿ ಶೇ 66.8ರಷ್ಟು ಹಣ ನಿಗಮಗಳಿಗೆ ಪಾವತಿಯಾದಂತಾಗಿದೆ.

ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಒದಗಿಸಿರುವುದರಿಂದ ತಮ್ಮ ನಿತ್ಯದ ಚಟುವಟಿಕೆಗಳನ್ನು ಸರಾಗವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ದೂರದ ಊರುಗಳಿಗೆ ಹೋಗಿ ವ್ಯಾಪಾರ ವಹಿವಾಟು ಮಾಡಲು, ಉದ್ಯೋಗ ಮಾಡಲು ಸಾಧ್ಯವಾಗಿದೆ. ಮತ್ತೊಂದೆಡೆ ನಿಗಮಗಳಿಗೂ ಆರ್ಥಿಕವಾಗಿ ಸದೃಢಗೊಳಿಸುವ ಸವಾಲು ಸರ್ಕಾರದ ಮುಂದೆ ಇದ್ದು, ಪ್ರತಿ ತಿಂಗಳು ಶಕ್ತಿ ಯೋಜನೆಯಡಿ ಎಷ್ಟು ಟಿಕೆಟ್ ಮಾರಾಟವಾಗುತ್ತದೋ ಅಷ್ಟೂ ಮೊತ್ತವನ್ನು ನಿಗಮಗಳಿಗೆ ನೀಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅಭಿಪ್ರಾಯ.

ಸರ್ಕಾರ ನೀಡುತ್ತಿರುವ ಹಣ ಇದೀಗ ನೌಕರರ ಸಂಬಳ ಹಾಗೂ ಬಸ್‌ಗಳ ಡೀಸೆಲ್‌ ಮರುಪೂರಣಕ್ಕೆ ಮಾತ್ರ ಸಾಕಾಗುತ್ತಿದೆ. ಪ್ರತಿ ತಿಂಗಳು ನೌಕರರು ಸೇವೆಯಿಂದ ನಿವೃತ್ತರಾಗುತ್ತಿದ್ದು, ಅವರಿಗೆ ಗ್ರಾಚ್ಯುಯಿಟಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನೌಕರರು.

ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಪ್ರಸ್ತುತ 22 ಸಾವಿರಕ್ಕೂ ಅಧಿಕ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಇದ್ದಾರೆ. 4,450 ಬಸ್‌ಗಳಿವೆ. ನೌಕರರ ವೇತನ, ಡೀಸೆಲ್‌ ಜೊತೆಗೆ ಬಸ್‌ಗಳ ದುರಸ್ತಿ, ಟೈರ್‌ ಸೇರಿದಂತೆ ಇತರೆ ಬಿಡಿ ಭಾಗಗಳ ಖರೀದಿಗೂ ಸಾಕಷ್ಟು ಹಣ ಖರ್ಚಾಗುತ್ತದೆ. ನೌಕರರು ಸೇವೆಯಿಂದ ನಿವೃತ್ತರಾದಾಗ ಅವರಿಗೆ ನಿವೃತ್ತಿ ವೇತನದ ಒಂದು ಭಾಗವನ್ನು ನಿವೃತ್ತರಾದ ದಿನವೇ ಚೆಕ್‌ ಮೂಲಕ ನೀಡಬೇಕಾಗುತ್ತದೆ. ಅದಕ್ಕೂ ಸಾಕಷ್ಟು ಹಣಕಾಸು ಅಗತ್ಯವಿದೆ. ಈ ಖರ್ಚುಗಳನ್ನು ನಿಭಾಯಿಸಲು ಟಿಕೆಟ್ ಮಾರಾಟದಷ್ಟು ಹಣ ಬರಬೇಕಾಗುತ್ತದೆ. ಮೊದಲು ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ನಿತ್ಯ ಬಸ್‌ಗಳ ಕಾರ್ಯಾಚರಣೆಯಿಂದ ₹ 5 ಕೋಟಿ ಸಂಗ್ರಹವಾಗುತ್ತಿತ್ತು. ಇದೀಗ ಪುರುಷರು ಮಾತ್ರ ಟಿಕೆಟ್ ಖರೀದಿಸಿ ಹಣ ನೀಡುತ್ತಿರುವುದರಿಂದ ಅದರ ಅರ್ಧದಷ್ಟು ಹಣ ತಕ್ಷಣಕ್ಕೆ ದೊರೆಯುತ್ತಿದೆ. ಶಕ್ತಿ ಯೋಜನೆಯ ಹಣ ತಿಂಗಳ ಬಳಿಕ ಸರ್ಕಾರ ನೀಡುತ್ತದೆ. ತಡವಾಗಿ, ಅದೂ ಶೇ 60ರಿಂದ 70ರಷ್ಟು ಮಾತ್ರ ಹಣ ಬರುತ್ತಿರುವುದರಿಂದ ನಿಗಮದ ಸಾರಿಗೆ ಕಾರ್ಯಾಚರಣೆಗೆ ತೊಂದರೆಯಾಗುತ್ತಿರುವುದು ಸತ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು ಹೆಚ್ಚುವರಿಯಾಗಿ 612 ಬಸ್‌ಗಳು ಸೇವೆಗೆ ನಿಯೋಜನೆಗೊಂಡಿವೆ. ಪೂರ್ಣ ಪ್ರಮಾಣದ ಹಣ ಸರ್ಕಾರದಿಂದ ಬಂದರೆ ಇನ್ನಷ್ಟು ಪರಿಣಾಮಕಾರಿ ಸಾರಿಗೆ ಸೇವೆ ಸಾಧ್ಯವಾಗಲಿದೆ.
ಎಂ. ರಾಚಪ್ಪ, ವ್ಯವಸ್ಥಾಪಕ ನಿರ್ದೇಶಕ ಕೆಕೆಆರ್‌ಟಿಸಿ
ಶಕ್ತಿ ಯೋಜನೆಯ ಪೂರ್ಣ ಹಣ ಸಕಾಲಕ್ಕೆ ಬರದೇ ಇರುವುದರಿಂದ ನಿವೃತ್ತ ನೌಕರರ ಆರು ತಿಂಗಳ ಗ್ರಾಚ್ಯುಯಿಟಿ ಬಾಕಿ ಉಳಿದಿದೆ. ಪಿಎಫ್‌ ಹಣವನ್ನೂ ಸಕಾಲಕ್ಕೆ ಪಾವತಿಸಲು ಕಷ್ಟವಾಗಬಹುದು
ಸಂಗಮನಾಥ ರಬಶೆಟ್ಟಿ, ಕಾರ್ಯಾಧ್ಯಕ್ಷ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT