ಶನಿವಾರ, ಮಾರ್ಚ್ 6, 2021
31 °C
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘ

10ನೇ ತಾರೀಖಿನೊಳಗೆ ವೇತನ ನೀಡಲು ಆಗ್ರಹ: ಎಂ.ಚಂದ್ರಶೇಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹೊರಗುತ್ತಿಗೆ ನೌಕರರಿಗೆ 2019ರ ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಸಂಬಳವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಪ್ರತಿ ತಿಂಗಳು 1ರಿಂದ 10ನೇ ತಾರೀಖಿನ ಒಳಗಾಗಿ ನಿಯಮಿತವಾಗಿ ವೇತನ ಬಿಡುಗಡೆ ಮಾಡಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ನವೆಂಬರ್, ಡಿಸೆಂಬರ್ ಹಾಗೂ 2021ರ ಜನವರಿ ತಿಂಗಳ ವೇತನವೂ ಪಾವತಿಯಾಗಿಲ್ಲ. ಹೀಗೆ ವಿಳಂಬ ಮಾಡಿದರೆ ಕುಟುಂಬ ಸಲಹುವುದು ಹೇಗೆ ಎಂದು ಪ್ರಶ್ನಿಸಿದರು.

ಮಂಡಳಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಇಲ್ಲ. ಜನರಿಂದ ಸಂಗ್ರಹವಾದ ಕರದಿಂದಲೇ ವೇತನ ಪಾವತಿಯಾಗಬೇಕು. ಆದರೂ ಸಕಾಲಕ್ಕೆ ವೇತನ ಆಗುತ್ತಿಲ್ಲ ಎಂದರು.

ಕಾಮಗಾರಿ ಜರುಗುತ್ತಿರುವ ಸ್ಥಳಗಳಲ್ಲಿ ಮತ್ತು ನೀರಿನ ಕರ ವಸೂಲಿ ಮಾಡುವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಗೆ ಮಂಡಳಿಯಿಂದ ಗುರುತಿಚ ಚೀಟಿ ನೀಡಬೇಕು. ಹೊರಗುತ್ತಿಗೆ ಸಿಬ್ಬಂದಿಯ ವೇತನದಲ್ಲಿ ಕಡಿತಗೊಳ್ಳುವ ಇಪಿಎಫ್ ಮತ್ತು ಇಎಸ್‌ಐ ವಂತಿಗೆಯನ್ನು ಸಕಾಲದಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಪಾವತಿಯಾಗುವಂತೆ ಕ್ರಮ ವಹಿಸಬೇಕು. ಹೊರಗುತ್ತಿಗೆ ಸಿಬ್ಬಂದಿಯ ವೇತನದ ಬಗ್ಗೆ ಮಾಹಿತಿ ಅರಿಯಲು ವೇತನ ಚೀಟಿಯ ಒಂದು ಪ್ರತಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ವಿತರಿಸಬೇಕು. ವೇತನವನ್ನು ಆಯಾ ನೌಕರರ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಂಡಳಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ವಿಚಾರದಲ್ಲಿ ಗರಿಷ್ಠ ಎಷ್ಟು ಜನ ಸಿಬ್ಬಂದಿ ಯಾವ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ನಕಲಿ ಹೊರಗುತ್ತಿಗೆ ಸಿಬ್ಬಂದಿ ಹೆಸರಲ್ಲಿ ಹಣ ಪೋಲಾಗುವುದನ್ನು ತಡೆಯಬೇಕು ಎಂದರು.

ನಾಳೆ ರಾಜ್ಯಮಟ್ಟದ ಸಮಾವೇಶ: ಹೊರಗುತ್ತಿಗೆ ನೌಕರರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 25ರಂದು ನಗರದ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಸಂಘದ ವಿವಿಧ ಬೇಡಿಕೆಗಳನ್ನು ಮಂಡಳಿ ಅಧ್ಯಕ್ಷ ರಾಜೂಗೌಡ ಅವರಿಗೆ ಸಲ್ಲಿಸಲಾಗುವುದು ಎಂದು ಸಂಘದ ವಲಯ ಅಧ್ಯಕ್ಷ ಸುನೀಲ ಮಾನ್ಪಡೆ ತಿಳಿಸಿದರು.

ಸಮಾವೇಶವನ್ನು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜೂಗೌಡ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿಎಚ್‌ಎಂ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಮಂಡಳಿಯ ಮೈಸೂರು ವಲಯದ ಮುಖ್ಯ ಎಂಜಿನಿಯರ್ ಎಸ್‌.ಬಿ. ಸಿದ್ದಾನಾಯಕ, ಕಲಬುರ್ಗಿ ವಲಯದ ಮುಖ್ಯ ಎಂಜಿನಿಯರ್ ಎಸ್‌.ಎನ್. ದಿನೇಶ್ ಭಾಗವಹಿಸುವರು ಎಂದರು.

ಸಂಘದ ಉ‍ಪಾಧ್ಯಕ್ಷ ಮಹಾದೇವಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು