ಬುಧವಾರ, ಅಕ್ಟೋಬರ್ 20, 2021
24 °C
ದೂಳುಮಯ ರಸ್ತೆಗಳಿಂದ ಅನಾರೋಗ್ಯ

ಕುಡಿಯುವ ನೀರು, ಶೌಚಾಲಯ ಕೊರತೆ; ಎಪಿಎಂಸಿ ಅಭಿವೃದ್ಧಿಗೆ ‘ಗ್ರಹಣ’

ರಾಮಮೂರ್ತಿ ಪಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕುಡಿಯಲು ಶುದ್ಧ ನೀರಿಲ್ಲ, ವಾರವಾದರೂ ಕಸ ವಿಲೇವಾರಿಯಾಗಲ್ಲ, ರಾತ್ರಿ ಬೆಳಕಿನ ವ್ಯವಸ್ಥೆ ಸರಿ ಇಲ್ಲ.. ಹೀಗೆ ಇಲ್ಲಗಳ ಪಟ್ಟಿ ಮುಂದುವರಿಯುವುದು ನಗರದ ಎಪಿಎಂಸಿ ಆವರಣದಲ್ಲಿ.

ಈ ಮಾರುಕಟ್ಟೆ ಮೂಲಸೌಲಭ್ಯ ಕೊರತೆ ಎದುರಿಸುತ್ತಿದೆ. ಮಳೆಯಾದರೆ ನೀರು ಸರಾಗವಾಗಿ ಹರಿದು ಹೋಗಲು ಇಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಮಣ್ಣು ತುಂಬಿಕೊಂಡಿರುವುದರಿಂದ ಮಳೆ ನೀರು ಕೃಷಿ ಉತ್ಪನ್ನಗಳ ಮೇಲೆ ಹರಿಯುತ್ತದೆ. ಇದರಿಂದ ತಾವು ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ರೈತರು ಹಾಗೂ ವ್ಯಾಪಾರಿಗಳು.

ಮಳೆ ನೀರು ನುಗ್ಗದಂತೆ ತಡೆಯಲು ಕೃಷಿ ಉತ್ಪನ್ನ ಚೀಲಗಳಿರುವ ಅಂಚಿಗೆ ರೈತರು ಮಣ್ಣನ್ನು ಅಡ್ಡಹಾಕುವುದು ಇಲ್ಲಿ ಸಹಜ ಎಂಬಂತಾಗಿದೆ.

ಕೆಟ್ಟು ನಿಂತ ಹೈಮಾಸ್ಟ್‌ ವಿದ್ಯುತ್‌ ದೀಪ: ಎಪಿಎಂಸಿ ಆವರಣದಲ್ಲಿನ ಹೈಮಾಸ್ಟ್‌ ವಿದ್ಯುತ್ ದೀಪ ಇದ್ದೂ ಇಲ್ಲದಂತಾಗಿದೆ. ರಾತ್ರಿ ವೇಳೆ ಕತ್ತಲಲ್ಲೇ ನಡೆದುಹೋಗಬೇಕಾದ ದುಸ್ಥಿತಿ ಇದೆ. 

‘ಇಲ್ಲಿನ ವಿದ್ಯುತ್ ದೀಪ ಕೆಟ್ಟು 2 ವರ್ಷಗಳೇ ಕಳೆದರೂ ದುರಸ್ತಿಯಾಗುತ್ತಿಲ್ಲ. ಬೆಳಕಿನ ವ್ಯವಸ್ಥೆ ಕಲ್ಪಿಸಿದರೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ವ್ಯಾಪಾರಿಗಳು ಹಾಗೂ ಹಮಾಲಿ ಕಾರ್ಮಿಕರು.

ಕಸ ವಿಲೇವಾರಿ ಸಮಸ್ಯೆ: ಮಾರುಕಟ್ಟೆ ಪ್ರಾಂಗಣದಲ್ಲಿ ಖಾಲಿ ಚೀಲ, ಹಾಳಾದ ಕೃಷಿ ಉತ್ಪನ್ನ ಸೇರಿದಂತೆ ನಿತ್ಯವೂ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ಈ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಇಲ್ಲಿನ ಅಂಗಡಿಗಳ ಮಾಲೀಕರು ದೂರಿದರು. 

ಇಲ್ಲಿನ ತ್ಯಾಜ್ಯವನ್ನು ವಾರಕ್ಕೊಮ್ಮೆ ವಿಲೇವಾರಿ ಮಾಡಲಾಗುತ್ತಿದೆ. ಎರಡು ದಿನಕ್ಕೊಮ್ಮೆಯಾದರೂ ಕಸ ತೆಗೆದುಕೊಂಡು ಹೋದರೆ, ಇಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಕುಡಿಯುವ ನೀರಿನ ಸಮಸ್ಯೆ: ಗ್ರಾಮೀಣ ಭಾಗಗಳಿಂದ ಆಗಮಿಸುವ ರೈತರು ಹಾಗೂ ಇಲ್ಲಿನ ಹಮಾಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಕೆಲವೆಡೆ ನೀರಿನ ಟ್ಯಾಂಕ್ ಇದ್ದರೂ ನೀರು ಸಾಲುವುದಿಲ್ಲ. ನೀರಿನ ಟ್ಯಾಂಕ್ ಬಳಿ ಸ್ವಚ್ಛತೆಯೂ ಇಲ್ಲವಾಗಿದೆ. ಬಿಸಿಲಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕುಡಿಯಲು ತಣ್ಣನೆಯ ನೀರು ಪೂರೈಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.

ಎಪಿಎಂಸಿ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಸರಿ ಇಲ್ಲ. ಮಾರುಕಟ್ಟೆಗೆ ಬರುವ ರೈತರು ಹಾಗೂ ಇಲ್ಲಿನ ಕಾರ್ಮಿಕರು ಬಯಲು ಶೌಚಾಲಯವನ್ನೇ ಆಶ್ರಯಿಸಬೇಕಿದೆ. ಇಲ್ಲಿನ ಬಹುತೇಕ ಕಾರ್ಮಿಕರು ಗೋಡೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದ ದುಸ್ಥಿತಿ ಇದೆ ಎಂದು ಮಾರುಕಟ್ಟೆಗೆ ಬಂದಿದ್ದ ರೈತ ಶರಣು ಅವರು ಹೇಳಿದರು.

ಆದಾಯ ಕಡಿತ, ಸ್ಪಂದಿಸದ ಪಾಲಿಕೆ: ಎಪಿಎಂಸಿ ಕಾರ್ಯದರ್ಶಿ

ರಾಜ್ಯ ಸರ್ಕಾರ ಎಪಿಎಂಸಿ ಶುಲ್ಕವನ್ನು ಕಡಿತಗೊಳಿಸಿದ ನಂತರ ಎಪಿಎಂಸಿಗೆ ಬರುವ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಕಲಬುರ್ಗಿ ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ. ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅರಿವಿದೆ. ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್‌ ಅಳವಡಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಹಲವು ಬಾರಿ ಪಾಲಿಕೆ ಕಚೇರಿಗೆ ತೆರಳಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಸ ವಿಲೇವಾರಿಗೆ ನಮ್ಮಲ್ಲಿ ಕಾರ್ಮಿಕರ ಕೊರತೆ ಇದೆ. ಇರುವ ಕಾರ್ಮಿಕರನ್ನು ಬಳಸಿಕೊಂಡು ನಿತ್ಯ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ನಿತ್ಯವೂ ಒಂದು ಕಸ ಸಂಗ್ರಹಿಸುವ ವಾಹನ ಹಾಗೂ 5ರಿಂದ 10 ಪೌರಕಾರ್ಮಿಕರನ್ನು ಕಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದರು.

‌ಎಪಿಎಂಸಿ ಟ್ರೇಡರ್ಸ್‌ನಿಂದ ವಾರ್ಷಿಕ ₹72 ಲಕ್ಷ ತೆರಿಗೆ ಪಾವತಿಸಿಕೊಳ್ಳುವ ಮಹಾನಗರ ಪಾಲಿಕೆ ಎಪಿಎಂಸಿ ಅಭಿವೃದ್ಧಿಗೂ ಬದ್ಧತೆ ತೋರಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು