ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಲಂಬಾಣಿ ಭಾಷಾ ವೈವಿಧ್ಯ

ಭಾರತದಲ್ಲಿ 50.28 ಲಕ್ಷ, ಕರ್ನಾಟಕದಲ್ಲಿ 10 ಲಕ್ಷ ಲಂಬಾಣಿ ಭಾಷಿಕರು
Published 11 ಮೇ 2024, 0:01 IST
Last Updated 11 ಮೇ 2024, 0:01 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಏಳು ಭಾಷೆಗಳ ಪೈಕಿ ಲಂಬಾಣಿ ಭಾಷೆಯೂ ಒಂದಾಗಿದ್ದು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಈ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಕುರಿತು ಸಂಶೋಧನೆ ನಡೆಸಿರುವ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧಕರು ಹಲವು ಮಹತ್ವದ ಸಂಗತಿಗಳನ್ನು ಕಂಡುಕೊಂಡಿದ್ದಾರೆ.

ಲಮಾಣಿ, ಲಂಬಾಡಿ, ಬಂಜಾರಿ (ಬಂಜಾರ), ಸುಗಾಲಿ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುವ ಈ ಭಾಷೆಯನ್ನು ಮಾತನಾಡುವವರ ಪೈಕಿ ಶೇ 20ರಷ್ಟು ಭಾಷಿಕರು ಕರ್ನಾಟಕದಲ್ಲಿಯೇ ಇದ್ದಾರೆ. ಸ್ವಂತ ಲಿಪಿಯನ್ನು ಹೊಂದಿರದ ಈ ಭಾಷೆಗೆ ರಾಜ್ಯಭಾಷೆಯ ಸ್ಥಾನಮಾನ ಸಿಕ್ಕಿಲ್ಲ. ಹಿಂದಿ ಭಾಷೆಯೊಂದಿಗೇ ಇದನ್ನು ಸೇರಿಸಿಕೊಳ್ಳುತ್ತಿದ್ದು, ಪ್ರತ್ಯೇಕ ಭಾಷೆಯ ಸ್ಥಾನಮಾನ ಸಿಕ್ಕರೆ ಭಾಷೆಯ ಇನ್ನಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ. ಹೀಗಾಗಿ ಭಾರತ ಸರ್ಕಾರ ಬಂಜಾರ ಭಾಷೆಗೆ ಮಾನ್ಯತೆ ನೀಡಬೇಕು ಎನ್ನುತ್ತಾರೆ ಬಂಜಾರ ಭಾಷೆಯ ಬಗ್ಗೆ ಸಂಶೋಧನೆ ನಡೆಸಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಬಸವರಾಜ ಕೋಡಗುಂಟಿ.

ಲಂಬಾಣಿ ಎಂಬುದು ರಾಜಸ್ಥಾನಿ ಭಾಷಾ ಗುಂಪಿಗೆ ಸೇರಿದ ಭಾಷೆಯಾಗಿದ್ದು, ಈ ಗುಂಪಿನಲ್ಲಿ ರಾಜಸ್ಥಾನಿ, ಮಾರ್ವಾರಿ, ಮೇವಾರಿ, ಮೇವಾತಿ ಮೊದಲಾದ ಇತರ ಹಲವು ಭಾಷೆಗಳಿವೆ. ಇವೆಲ್ಲವನ್ನೂ ಹಿಂದಿಯ ಉಪಭಾಷೆಯಾಗಿಯೇ ಪರಿಗಣಿಸಲಾಗುತ್ತಿದೆ. ನೂರಾರು ವರ್ಷಗಳ ಹಿಂದೆ ಲಂಬಾಣಿ ಸಮುದಾಯದವರು ರಾಜಸ್ಥಾನದಿಂದ ಹೊರಟು ಭಾರತದಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆಲೆ ನಿಂತಿದ್ದಾರೆ. ಲಂಬಾಣಿಗಳು ಬಹಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಕರ್ನಾಟಕಕ್ಕೆ ಬಂದಿದ್ದಕ್ಕೆ ಆಧಾರಗಳಿವೆ. 

ಭಾರತದ ಹಲವು ತಾಯ್ನುಡಿಗಳಲ್ಲಿ ಲಂಬಾಣಿ ಭಾಷೆಯೂ ಒಂದಾಗಿದೆ. ದೇಶದಾದ್ಯಂತ 50.28 ಲಕ್ಷ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಲಂಬಾಣಿ ತಾಂಡಾಗಳಲ್ಲಿ ವಾಸಿಸುವ ಬಂಜಾರ ಸಮುದಾಯದವರು ತಮ್ಮ ಭಾಷೆ, ವೇಷಭೂಷಣ ಹಾಗೂ ಜನಪದ ಆಚರಣೆಗಳನ್ನು ಇನ್ನೂ ‍ಪೋಷಿಸಿಕೊಂಡು ಬಂದಿದ್ದಾರೆ. ದಿನದಿನಕ್ಕೆ ಹಲವು ಭಾಷೆಗಳು ನಶಿಸಿ ಹೋಗುತ್ತಿದ್ದು, ಸೂಕ್ತ ಪ್ರೋತ್ಸಾಹ, ಭಾಷೆಯ ಕಲಿಕೆಗೆ ನೆಲೆಯನ್ನು ಒದಗಿಸದಿದ್ದರೆ ಪ್ರಮುಖ ಭಾಷೆಗಳೂ ಮುಂದಿನ ದಿನಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಬಹುದು ಎಂಬ ಆತಂಕವೂ ಭಾಷಾ ತಜ್ಞರನ್ನು ಕಾಡುತ್ತಿದೆ. 

‘ಈ ಭಾಷೆಗೆ ಮಾನ್ಯತೆ ನೀಡುವುದರಿಂದ ಲಂಬಾಣಿ ಸಮುದಾಯದವರು ಯಾವುದೇ ಆತಂಕ ಇಲ್ಲದೇ ಮಾತನಾಡಬಹುದು. ಈ ಭಾಷೆಯಲ್ಲಿ ಸಿನಿಮಾಗಳು ತಯಾರಾಗಬಹುದು. ಭಾಷಾ ಅಭಿವೃದ್ಧಿ ಪ್ರಾಧಿಕಾರವನ್ನೂ ರಚಿಸಬಹುದು’ ಎನ್ನುತ್ತಾರೆ ಪ್ರೊ. ಕೋಡಗುಂಟಿ.

ಲಂಬಾಣಿಯು ಹಿಂದಿ ಭಾಷೆಗಿಂತ ಭಿನ್ನವಾದ ಪದಕೋಶ ಧ್ವನಿಕೋಶ ವಾಕ್ಯ ವ್ಯಾಕರಣವನ್ನು ಹೊಂದಿದೆ. ಇವುಗಳನ್ನು ಸಾಮಾಜಿಕವಾಗಿ ಬೆಸೆಯುವ ಯಾವುದೇ ಆಧಾರ ಇಲ್ಲ. ಹೀಗಾಗಿ ಸ್ವತಂತ್ರ ಭಾಷೆಯ ಸ್ಥಾನಕ್ಕೆ ಅರ್ಹತೆ ಹೊಂದಿದೆ.

-ಪ್ರೊ. ಬಸವರಾಜ ಕೋಡಗುಂಟಿ ಪ್ರಾಧ್ಯಾಪಕ ಕರ್ನಾಟಕ ಕೇಂದ್ರೀಯ ವಿ.ವಿ ಕಲಬುರಗಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT