ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಚನಗಳ ಸಂರಕ್ಷಕ ಮಡಿವಾಳ ಮಾಚಿದೇವ

ಮಡಿವಾಳ ಮಾಚಿದೇವರ ಜಯಂತಿ: ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿಕೆ
Published 2 ಫೆಬ್ರುವರಿ 2024, 4:28 IST
Last Updated 2 ಫೆಬ್ರುವರಿ 2024, 4:28 IST
ಅಕ್ಷರ ಗಾತ್ರ

ಕಲಬುರಗಿ: ‘ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ತೋರಿದ ಹಾದಿಯಲ್ಲಿ ಮಡಿವಾಳ ಮಾಚಿದೇವರು ನಡೆದು, ಎಲ್ಲ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದರು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಇಲ್ಲಿನ ಡಾ. ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು. ಅಸ್ಪೃಶ್ಯತೆ ಆಚರಣೆಯನ್ನು ವಿರೋಧಿಸಿ, ಸ್ತ್ರೀಯರಿಗೂ ಸಮಾನತೆ ನೀಡಿದ್ದರು. ಸಮಾಜದ ಕಟ್ಟಡ ಕಡೆಯ ಮನುಷ್ಯನ ಕಣ್ಣೀರು ಒರೆಸಲು ಶ್ರಮಿಸಿದ್ದರು. ಬಸವಣ್ಣನವರ ಜತೆಯಲ್ಲಿ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಯತ್ನಿಸಿದ್ದ ಶರಣರಲ್ಲಿ ಮಾಚಿದೇವರು ಪ್ರಮುಖರು’ ಎಂದರು.

‘ಸಾಮಾಜಿಕ ವ್ಯವಸ್ಥೆಯ ಕೆಳ ಸ್ಥರದಲ್ಲಿದ್ದ ಜಾತಿಗಳಿಗೆ ವಿದ್ಯೆ ಕಲಿಯಲು ಅವಕಾಶ ಇಲ್ಲದ ದಿನಗಳಲ್ಲಿ ಸಾಕಷ್ಟು ವಿಷಯಗಳನ್ನು ಅಧ್ಯಯನ ಮಾಡಿ ಪಾಂಡಿತ್ಯ ಗಳಿಸಿದ್ದವರು ವೀರ ಗಣಾಚಾರಿ ಮಡಿವಾಳ ಮಾಚಿದೇವರು. ಬಸವಣ್ಣನವರು ಮಾಚಿದೇವರನ್ನು ತಂದೆ ಎಂದು ಕರೆದಿದ್ದರು. ಇದು ಮಾಚಿದೇವರ ಮೇಲಿರುವ ಬಸವಣ್ಣನವರ ಗೌರವದ ಪ್ರತೀಕ’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದ ಜನರು 371 (ಜೆ) ವಿಶೇಷ ಸ್ಥಾನದ ಲಾಭ ಪಡೆಯಲು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ವೈದ್ಯಕೀಯದಲ್ಲಿ ಸುಮಾರು 1,200 ಹಾಗೂ ಎಂಜಿನಿಯರಿಂಗ್‌ನಲ್ಲಿ ಸುಮಾರು 10,000 ಸರ್ಕಾರಿ ಸೀಟುಗಳು ಸ್ಥಳೀಯರಿಗೆ ಮೀಸಲಿವೆ. ಉದ್ಯೋಗದಲ್ಲಿ ಸಹ ಶೇ 80ರಷ್ಟು ಮೀಸಲಾತಿ ಇದೆ. ಇದರ ಸದ್ಬಳಕೆಯಾಗಬೇಕಿದೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ, ‘ಬುದ್ಧನ ನಂತರ ತಾರತಮ್ಯ ರಹಿತ ಸಮಾಜ ನಿರ್ಮಾಣಕ್ಕಾಗಿ ಎಲ್ಲ ಜಾತಿ, ಮತದವರನ್ನು ಅಪ್ಪಿಕೊಂಡು ನಡೆಯಬೇಕು ಎಂದು ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದ ಶರಣರಲ್ಲಿ ಮಡಿವಾಳ ಮಾಚಿದೇವ ಕೂಡ ಒಬ್ಬರು’ ಎಂದರು.

‘ಬಸವಣ್ಣನವರ ನಡೆ– ನುಡಿ ಚಿನ್ನ ಇದ್ದಂತೆ. ಅವರನ್ನು ಸ್ಪರ್ಶಿಸಿದವರಿಗೂ ಚಿನ್ನದ ಲೇಪನವಾಗುತ್ತದೆ ಎಂದು ಬಸವಣ್ಣನ ವ್ಯಕ್ತಿತ್ವವನ್ನು ಮಾಚಿದೇವ ಬಣ್ಣಿಸಿದ್ದರು. ಹೀಗಾಗಿ, ಶರಣರ ಸಂದೇಶಗಳನ್ನು ಪಾಲಿಸಿ, ಜೀವನದಲ್ಲಿಯೂ ಅಳವಡಿಸಿಕೊಂಡರೆ ಉತ್ತಮ ರಾಷ್ಟ್ರ ನಿರ್ಮಾಣ ಮಾಡಬಹುದು’ ಎಂದು ಹೇಳಿದರು.

ಮಡಿವಾಳ ಮಾಚಿದೇವ ವೃತ್ತದಲ್ಲಿ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಪಾಲಿಕೆಯ ಮೇಯರ್ ವಿಶಾಲ್ ದರ್ಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಪಿ ಡೆಪ್ಯುಟಿ ಕಮಾಡೆಂಟ್ ಗುರುನಾಥ ಮಡಿವಾಳ, ತಹಶೀಲ್ದಾರ್ ಗ್ರೇಡ್–2 ಸೈಯದ್ ನಿಸಾರ್ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ವಿಠಲ ದುದ್ದನಿ, ನಿವೃತ್ತ ಅಧಿಕಾರಿ ಮಲ್ಲಣ ಮಡಿವಾಳ, ಪ್ರಮುಖರಾದ ಜಯಶ್ರೀ ಚಟ್ನಳ್ಳಿ, ಅಶೋಕ ಗುರೂಜಿ, ರವಿಕುಮಾರ ಶಹಾಪುರಕರ್, ಬಾಬುರಾವ ಹಾಗರಗುಂಡಗಿ, ರವೀಂದ್ರ ಬೆಳಮಗಿ, ಶಿವಪುತ್ರ ಮಲಬಾದಿಕರ್, ಧರ್ಮಣ್ಣ ಮಡಿವಾಳ, ಸಿದ್ದು ಹಿಂಚಿಗೇರಿ, ರಾಚಪ್ಪ ಮದುಗುಣುಕಿ, ಹಣಮಂತರಾವ ಗೋಳ ಹಾಜರಿದ್ದರು.

ಕಲಬುರಗಿಯ ಡಾ. ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಗು.ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಶಾಸಕ ಅಲ್ಲಮಪ್ರಭು ಪಾಟೀಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿ ಗಣ್ಯರು ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಡಾ. ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಗು.ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಶಾಸಕ ಅಲ್ಲಮಪ್ರಭು ಪಾಟೀಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿ ಗಣ್ಯರು ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ

ಮುಂದಿನ ಪೀಳಿಗೆಯವರಿಗೆ ಶರಣರು ಸಂತರು ತಮ್ಮ ಜೀವಿತದಲ್ಲಿ ಮಾಡಿದ್ದ ಮಹಾನ್ ಕಾರ್ಯಗಳು ಸಾಮಾಜಿಕ ಕೊಡುಗೆಗಳು ತಿಳಿಸಲು ಜಯಂತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ

-ಅಲ್ಲಮಪ್ರಭು ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT