ಶುಕ್ರವಾರ, ಜನವರಿ 24, 2020
17 °C
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ನಗರದ ಸಮಗ್ರ ಅಭಿವೃದ್ಧಿಗೆ ₹ 150 ಕೋಟಿ

ಎಲ್‌.ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜನರಿಗೆ ಕುಡಿಯುವ ನೀರು, ಉತ್ತಮ ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡುವುದರ ಜೊತೆಗೆ ನಗರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ‘ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ’ ಅಡಿಯಲ್ಲಿ ಇಲ್ಲಿನ ಮಹಾನಗರ ಪಾಲಿಕೆಗೆ ₹ 150 ಕೋಟಿ ಅನುದಾನ ಮಂಜೂರು ಮಾಡಿದೆ.

ರಾಜ್ಯ ಸರ್ಕಾರವು 2019–20ರ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇದೀಗ ಅದರ ಅನುಷ್ಠಾನಕ್ಕಾಗಿ ಆಯಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಾರ್ಗಸೂಚಿ ರೂಪಿಸಲು ಸೂಚಿಸಿದೆ.

ಕಲಬುರ್ಗಿ ಪಾಲಿಕೆ ಒಳಗೊಂಡಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ವಿಜಯಪುರ ಹಾಗೂ ತುಮಕೂರು ಮಹಾನಗರ ಪಾಲಿಕೆಗಳು ಈ ಯೋಜನೆಗೆ ಒಳಪಟ್ಟಿದ್ದು, ಕಲಬುರ್ಗಿ ಪಾಲಿಕೆ ವ್ಯಾಪ್ತಿಯ 55 ವಾರ್ಡ್‌ಗಳ ಅಭಿವೃದ್ಧಿಗಾಗಿ  ಕ್ರಿಯಾಯೋಜನೆ ಸಿದ್ಧವಾಗುತ್ತಿದೆ.

ಯೋಜನೆ ಅಡಿಯಲ್ಲಿ ಕಲಬುರ್ಗಿ ನಗರದಲ್ಲಿ ಕುಡಿಯುವ ನೀರು ಸಂಬಂಧಿತ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ಹಾಗೂ ನಗರದ ಒಳ ಹಾಗೂ ಹೊರ ವರ್ತುಲ ರಸ್ತೆಗಳ ಅಭಿವೃದ್ಧಿ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.

ಯೋಜನೆಯ ಅನುದಾನ ಸದ್ಬಳಕೆಯಾದಲ್ಲಿ ನಗರದ ಜೇವರ್ಗಿ ರಸ್ತೆ, ಆಳಂದ ರಸ್ತೆ, ದರ್ಗಾ ರಸ್ತೆ, ಎಂಎಸ್‌ಕೆ ಮಿಲ್‌ ಹಾಗೂ ಬ್ರಹ್ಮಪುರ ರಸ್ತೆ, ರಾಜಾಪುರ ರಸ್ತೆ ಹಾಗೂ ಹೀರಾಪುರ ರಸ್ತೆಗಳು ಅಭಿವೃದ್ಧಿಯಾಗಲಿವೆ. ಇದರೊಂದಿಗೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ.

‘ರಾಜ್ಯ ಸರ್ಕಾರವು ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಈಗಾಗಲೇ ಮಂಜೂರು ಮಾಡಿದೆ. ₹ 1 ಕೋಟಿಗೆ ಕಡಿಮೆ ಇಲ್ಲದ ಕಾಮಗಾರಿಗಳನ್ನು ಕ್ರಿಯಾ ಯೋಜನೆಗೆ ಸೇರಿಸಲಾಗುತ್ತದೆ. ₹ 5 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಟೆಂಡರ್‌ ಮೂಲಕ ಗುತ್ತಿಗೆ ನೀಡುವ ಚಿಂತನೆ ಇದೆ’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಲ್‌. ಗಾಜರೆ ಹೇಳುತ್ತಾರೆ.

‘ಬೇಸಿಗೆ ಅವಧಿಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ಜೊತೆಗೆ ಅಮೃತ ಯೋಜನೆಯ ಎಲ್ಲಾ ಕಾಮಗಾರಿಗಳನ್ನೂ ಇದೇ ಅನುದಾನದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಯೋಜನೆ ಅಡಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳನ್ನು 2023ರೊಳಗೆ ಮುಗಿಸಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಯೋಜನೆ ಅಡಿ ಉತ್ತಮ ಪ್ರಗತಿ ಸಾಧಿಸಿದ ಮತ್ತು ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಮುಗಿಸಿದ ಪಾಲಿಕೆಗಳಿಗೆ ರಾಜ್ಯ ಸರ್ಕಾರವು ಪ್ರೋತ್ಸಾಹಧನದ ರೂಪದಲ್ಲಿ ನಿಗದಿಪಡಿಸಿದ ಅನುದಾನವನ್ನು ಬಿಡುಗಡೆ ಮಾಡುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು