ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿ.ಪಂ ಕಚೇರಿಗೆ ಬೆಂಕಿ: ಅನುಮಾನದ ಹೊಗೆ!

Last Updated 26 ಮಾರ್ಚ್ 2023, 7:38 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 2021–22ನೇ ಸಾಲಿಗೆ ಸೇರಿದ ಕೆಲ ದಾಖಲೆಗಳು, ಕುರ್ಚಿ, ಕಂಪ್ಯೂಟರ್‌ಗಳು ಸುಟ್ಟಿವೆ. ಆದರೆ, ಇದಕ್ಕೆ ಶಾರ್ಟ್ ಸರ್ಕಿಟ್ ಕಾರಣವೇ ಅಥವಾ ಬೇರೆ ಕೃತ್ಯವಿದೆಯೇ ಎಂಬ ಬಗ್ಗೆ ಶಂಕೆ ಮೂಡಿದೆ.

ಶುಕ್ರವಾರ ರಾತ್ರಿ 9ರ ಸುಮಾರಿಗೆ ಜಿಲ್ಲಾ ಪಂಚಾಯಿತಿ ಕಟ್ಟಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಅವರ ಕೂಠಡಿ ಹಿಂಭಾಗದಲ್ಲಿರುವ ಲೆಕ್ಕಪತ್ರ ವಿಭಾಗದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ವೇಳೆಗೆ ಕೆಲ ದಾಖಲೆಗಳು, ಕಂಪ್ಯೂಟರ್, ಕುರ್ಚಿ, ಟೇಬಲ್‌ ಸೇರಿ ಸಿಇಒ ಕೂರುವ ಹಿಂಬದಿ ಗೋಡೆಯ ಪೇಯಿಂಟಿಂಗ್ ಸುಟ್ಟಿದೆ.

ಮುಖ್ಯವಾಗಿ ಲೆಕ್ಕಪತ್ರ ವಿಭಾಗದ ಕೋಣೆಯಲ್ಲಿನ ನರೇಗಾ ಸಂಬಂಧಿತ ಸಾಮಾಜಿಕ ಲೆಕ್ಕ ಪರಿಶೋಧನೆ, ಹಳೆಯ ವೋಚರ್, ಬಿಲ್‌ಗಳು ಸುಟ್ಟು ಭಸ್ಮವಾಗಿವೆ.

‘ಇದು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಲೇ ಸಂಭವಿಸಿದ ಅಗ್ನಿ ಅವಘಡ ಎಂದು ಪ್ರಾಥಮಿಕವಾಗಿ ಹೇಳಲು ಆಗಿವುದಿಲ್ಲ. ಬೇರೆ ಏನಾದರು ಕಾರಣ ಇರಬಹುದು’ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಕಚೇರಿಗೆ ವಿಧಿ ವಿಜ್ಞಾನ(ಫೊರೆನ್ಸಿಕ್) ತಜ್ಞರು, ಪೊಲೀಸರು ಶನಿವಾರ ಭೇಟಿ ನೀಡಿ, ಸಿಸಿಟಿವಿ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲೆಕ್ಕಪತ್ರ ವಿಭಾಗದ ಮುಖ್ಯ ಲೆಕ್ಕಾಧಿಕಾರಿ, ಎಒ ಮತ್ತು ಮೂವರು ಕೇಸ್ ವರ್ಕರ್‌ಗಳ ಚೇಂಬರ್ ಬೇರೆ ಕಡೆ ಇದ್ದಿದ್ದರಿಂದ ಅವರ ದಾಖಲೆಗಳಿಗೆ ಧಕ್ಕೆಯಾಗಿಲ್ಲ. ಕಚೇರಿಯ ಸಭಾಂಗಣದಲ್ಲಿನ ಕೇಸ್‌ ವರ್ಕರ್, ಅಕೌಂಟ್ ಸೂಪರಿಟೆಂಡೆಂಟ್ ಕೂರುತ್ತಿದ್ದ ಪ್ರದೇಶದಲ್ಲಿನ ದಾಖಲೆಗಳು ಸುಟ್ಟಿವೆ. ಯೋಜನೆ, ಡಿಆರ್‌ಡಿ, ನರೇಗಾ, ಎಡಿಎಂ, ಎಸ್‌ಬಿಎಂ, ವಿಸ್ತರಣಾ ಶಾಖೆ ವಿಭಾಗಗಳು ಬೇರೆ ಕಡೆ ಇದ್ದಿದ್ದರಿಂದ ಅಲ್ಲಿನ ದಾಖಲೆಗಳು ಸುರಕ್ಷಿತವಾಗಿವೆ. ಬಹುತೇಕ ದಾಖಲೆಗಳನ್ನು ದೂರದ ರೆಕಾರ್ಡ್ ಕೋಣೆಯಲ್ಲಿ ಇರಿಸಲಾಗಿತ್ತು. 2021–22 ದಾಖಲೆಗಳಿಗೆ ಹಾನಿಯಾಗಿದೆ. ಅವುಗಳನ್ನು ಆನ್‌ಲೈನ್ ಮೂಲಕ ಮತ್ತೆ ಪಡೆದುಕೊಳ್ಳುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಹಳೆಯ ವೋಚರ್, ಬಿಲ್‌ಗಳು ಸುಟ್ಟಿವೆ. ಪ್ರಸ್ತುತ ವರ್ಷದ ಬಿಲ್‌ಗಳಿಗೆ ಮಾರ್ಚ್ 24 ಕೊನೆಯ ದಿನಾಂಕ ಆಗಿದ್ದರಿಂದ ಅವುಗಳನ್ನು ವಿಲೇವಾರಿ ಮಾಡಲಾಗಿತ್ತು. ಹಾನಿಯಾಗಿರುವ ಹಳೆಯ ದಾಖಲೆಗಳು ಆಡಿಟ್ ಸಮಯದಲ್ಲಿ ಬೇಕಾಗುತ್ತವೆ. ಅವುಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದರು.

ಅಗ್ನಿ ಅವಘಡ ಸಂಬಂಧ ಈಗಾಗಲೇ ಅಧಿಕಾರಿಗಳು ಸಭೆ ಮಾಡಿದ್ದು, ತನಿಖೆಯ ದೃಷ್ಟಿಯಿಂದ ಯಾರನ್ನು ಒಳಗೆ ಬಿಟ್ಟಿಲ್ಲ. ಭಾನುವಾರ ವೇಳೆಗೆ ಯಾವೆಲ್ಲ ದಾಖಲೆಗಳು, ಕಚೇರಿ ಉಪಕರಣಗಳಿಗೆ ಹಾನಿಯಾಗಿದೆ ಎಂಬದರ ನಿಖರ ಮಾಹಿತಿ ಸಿಗಲಿದೆ. ಮೇಲ್ನೋಟದಲ್ಲಿ ಕೆಲವೊಂದು ಬಾಗಿಲು, ಕಿಟಕಿ, ಸಿಇಒ ಚೇಂಬರ್ ಹಿಂಭಾಗದ ಗೋಡೆ ಪೇಯಿಂಟ್, ಕಂಪ್ಯೂಟರ್, ಕುರ್ಚಿಗಳು ಸುಟ್ಟಿರುವುದು ಕಂಡುಬಂದಿದೆ.

ಕಚೇರಿಯ ಲೆಕ್ಕಪತ್ರ ವಿಭಾಗದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಕಿಯಲ್ಲಿ ಮಹತ್ವದ ದಾಖಲೆಗಳು ನಾಶವಾಗಿರಬಹುದು ಎಂಬುದು ಅಧಿಕಾರಿಗಳು ಸಂಶಯವಾಗಿದೆ.

35 ಸಿಸಿ ಟಿವಿ ಕ್ಯಾಮೆರಾ ವಶ

ಬೆಂಕಿಗೆ ಇಂತಹುದೆ ಕಾರಣ ಎಂದು ಹೇಳಲು ಆಗುತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ ಎನ್ನಲಾಗುತ್ತಿದೆ. ಬೇರೆಯದ್ದೆ ಕಾರಣ ಇರಬಹುದು. ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯ ಬಳಿಕ ಗೊತ್ತಾಗಲಿದೆ’ ಎಂದು ಸಿಇಒ ಡಾ.ಗಿರೀಶ್ ಬದೋಲೆ ಹೇಳಿದರು.

‘ಕಚೇರಿಯಲ್ಲಿ 35 ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿತ್ತು. ಸಿಇಒ ಕೋಣೆಯ ಬಲಭಾಗದಲ್ಲಿನ ಸಿಸಿಟಿವಿ ನಿಯಂತ್ರಣ ಕೊಠಡಿಗೆ ಯಾವುದೇ ಹಾನಿ ಆಗಿಲ್ಲ. 35 ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರ ವಶದಲ್ಲಿದೆ. ಯಾವ ಕೋಣೆಯಲ್ಲಿ ಮೊಲಿಗೆ ಬೆಂಕಿ ಕಾಣಿಸಿಕೊಂಡಿತ್ತು? ಯಾರೂ ಓಡಾಡಿದ್ದರು? ಎಂಬುದು ಸಿಸಿಟಿವಿ ದೃಶ್ಯಗಳು ನೋಡಿದಾಗ ಗೊತ್ತಾಗುತ್ತದೆ’ ಎಂದರು.

*ಜಿಲ್ಲಾ ಪಂಚಾಯಿತಿ ಮುಖ್ಯ ಕಚೇರಿಯ ಶೇ 20ರಷ್ಟು ಪ್ರದೇಶಕ್ಕೆ ಬೆಂಕಿಯ ಹಾನಿ ವಿಸ್ತರಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಒಂದು ಗಂಟೆಯೊಳಗೆ ನಿಯಂತ್ರಣಕ್ಕೆ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

-ಡಾ.ಗಿರೀಶ್ ಬದೋಲೆ, ಜಿಲ್ಲಾ ಪಂಚಾಯಿತಿ ಸಿಇಒ

*ಜಿಲ್ಲಾ ಪಂಚಾಯಿತಿ ಮುಖ್ಯ ಕಚೇರಿಗೆ ಫೊರೆನ್ಸಿಕ್ ತಜ್ಞರು, ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಡಿವಿಆರ್ ಪಡೆಯಲಾಗಿದ್ದು, ಅದನ್ನು ಪರಿಶೀಲಿಸಲಾಗುವುದು

-ಚೇತನ್ ಆರ್, ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT