ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ಹಾಲು ಉತ್ಪಾದಕರ ಸಂಘಗಳ ಪುನಶ್ಚೇತನ: ರಾಮಚಂದ್ರಪ್ಪ ಪಾಟೀಲ ಭರವಸೆ

Last Updated 20 ಡಿಸೆಂಬರ್ 2019, 9:21 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ, ಬೀದರ್‌, ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಹಿಂದೆ ಸದಸ್ಯತ್ವ ಪಡೆದು ಈಗ ನಿಷ್ಕ್ರಿಯವಾಗಿರುವ ಕನಿಷ್ಠ 100 ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಪ್ರಯತ್ನ ನಡೆದಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಪಾಟೀಲ ಹೇಳಿದರು.

ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ 450 ಸಂಘಗಳು ನಿತ್ಯ ಹಾಲು ಪೂರೈಕೆ ಮಾಡುತ್ತಿವೆ. 240 ಸಂಘಗಳು ಸ್ಥಗಿತಗೊಂಡಿವೆ. ಅವುಗಳ ಪೈಕಿ ನನ್ನ ಅಧಿಕಾರವಧಿಯಲ್ಲಿ 100 ಸಂಘಗಳ ಪುನಶ್ಚೇತನಕ್ಕೆ ಯತ್ನಿಸಲಾಗುವುದು’ ಎಂದರು.

ಹಾಲು ಉತ್ಪಾದಕರಿಗೆ ಸೂಕ್ತ ತರಬೇತಿ ಕೊಡಿಸುವ ಮೂಲಕ ಹಾಲಿನ ಉತ್ಪನ್ನವನ್ನು ಹೆಚ್ಚಿಸುವ, ಉತ್ತಮ ಗುಣಮಟ್ಟದ ಮೇವುಗಳನ್ನು ರಾಸುಗಳಿಗೆ ಹಾಕುವ ಕುರಿತು ತಿಳಿವಳಿಕೆ ಕೊಡಿಸಲಾಗುತ್ತಿದೆ. ₹ 7.20 ಲಕ್ಷ ವೆಚ್ಚದಲ್ಲಿ 72 ಮೇವು ಕಟಾವು ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಿ ಹಾಲು ಉತ್ಪಾದಕರಿಗೆ ವಿತರಿಸಲಾಗಿದೆ’ ಎಂದು ಹೇಳಿದರು.

ಕಲಬೆರಕೆ ಹಾಲು ಪ್ರವೇಶಕ್ಕೆ ತಡೆ ನೀಡಲು ಒತ್ತಾಯ: ಮಹಾರಾಷ್ಟ್ರದಿಂದ ಅಪಾಯಕಾರಿ, ಕ್ಯಾನ್ಸರ್‌ಕಾರಕ ಕಲಬೆರಕೆ ಹಾಲು ಜಿಲ್ಲೆಯನ್ನು ಪ್ರವೇಶಿಸುತ್ತಿದೆ. ಇದನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ನೇರವಾಗಿ ಕಲಬೆರಕೆ ಹಾಲನ್ನು ತಡೆಯುವ ಅಧಿಕಾರ ಒಕ್ಕೂಟಕ್ಕೆ ಇಲ್ಲ ಎಂದರು.

ಈಗಿರುವ ಸಹಕಾರ ಸಂಘಗಳಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚು ಹಾಲನ್ನು ಉತ್ಪಾದಿಸುವಂತೆ ತಿಳಿಸಲಾಗಿದೆ. ಉತ್ತಮ ತಳಿಯ ಮೇವನ್ನು ಬೆಳೆಯುವುಂತೆ ಸಲಹೆ ನೀಡಲಾಗಿದೆ. ಮೇವಿನ ಬೀಜಗಳನ್ನೂ ತರಿಸಿಕೊಡಲಾಗುತ್ತಿದೆ. ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಮೇವಿನ ಪ್ರಾತ್ಯಕ್ಷಿಕೆಯನ್ನೂ ಮಾಡಲಾಗಿದೆ ಎಂದು ಹೇಳಿದರು.

ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ವಿಠ್ಠಲ ರೆಡ್ಡಿ, ಭೀಮರಾವ್‌ ಬಳತೆ, ಈರಣ್ಣ, ರೇವಣಸಿದ್ದಪ್ಪ ಪಾಟೀಲ, ಶ್ರೀಕಾಂತ ದಾನಿ, ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಕಮಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT